ADVERTISEMENT

ಪತಿ ಬಳಿಯ ಚಿನ್ನದ ಬಿಸ್ಕತ್‌ ಕದ್ದು ಜೈಲು ಸೇರಿದ ಪತ್ನಿ

₹27.57 ಲಕ್ಷ ಮೌಲ್ಯದ ನಾಲ್ಕು ಬಿಸ್ಕತ್‌ l ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 19:49 IST
Last Updated 4 ಜುಲೈ 2017, 19:49 IST

ಬೆಂಗಳೂರು: ಎಸ್‌.ಜೆ.ಪಾರ್ಕ್‌ ಬಳಿಯ ಚೆಮ್ಮನೂರು ಜ್ಯುವೆಲರ್ಸ್‌ನ ಕೆಲಸಗಾರ ಮುನಿಯಪ್ಪನ್‌ ಬಳಿ ಇದ್ದ ಚಿನ್ನದ ಬಿಸ್ಕತ್‌ಗಳನ್ನು ಕದ್ದಿದ್ದ ಆರೋಪದಡಿ ಅವರ ಪತ್ನಿ ನಾಗಲಕ್ಷ್ಮಿ ಅವರನ್ನು ಹಲಸೂರು ಗೇಟ್‌ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಕೃತ್ಯದ ಬಳಿಕ ತಮಿಳುನಾಡಿನಲ್ಲಿ ಆರೋಪಿ ತಲೆಮರೆಸಿಕೊಂಡಿದ್ದರು. ಅವರಿಂದ ₹27.57 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಬಿಸ್ಕತ್‌ಗಳನ್ನು ಜಪ್ತಿ ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದರು.

‘ಹೊಸೂರಿನ ಮುನಿಯಪ್ಪನ್‌ ಕೆಲ ವರ್ಷಗಳ ಹಿಂದೆ  ಚೆಮ್ಮನೂರು ಜ್ಯುವೆಲರ್ಸ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ಚಿನ್ನದ ಬಿಸ್ಕತ್‌ ಸರಬರಾಜು ಮಾಡುವ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದರು’.

ADVERTISEMENT

‘ಫೆಬ್ರುವರಿ 20ರಂದು ಅಂಗಡಿಯ ಮಾಲೀಕರು 1 ಕೆ.ಜಿಯ ನಾಲ್ಕು ಚಿನ್ನದ ಬಿಸ್ಕತ್‌ಗಳನ್ನು ತಮಿಳುನಾಡಿನ ಕೊಯಮತ್ತೂರಿನ ಶಾಖೆಗೆ ತಲುಪಿಸುವಂತೆ ಕೊಟ್ಟಿದ್ದರು. ಚಿನ್ನದ ಬಿಸ್ಕತ್‌ ಇದ್ದ ಬ್ಯಾಗ್‌ ಸಮೇತ ಮುನಿಯಪ್ಪನ್‌, ಪತ್ನಿ ಜತೆ ಬಸ್‌ ಹತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಸೇಲಂನಲ್ಲಿ ದಂಪತಿ ಬಸ್‌ನಲ್ಲೇ ಊಟ ಮಾಡಿದ್ದರು. ಬಳಿಕ ಪತಿ ನಿದ್ರೆಗೆ ಜಾರಿದ್ದರು. ಅದೇ ಸಮಯದಲ್ಲಿ ಪತ್ನಿಯು ಬ್ಯಾಗ್‌ನಲ್ಲಿದ್ದ ಬಿಸ್ಕತ್‌ಗಳನ್ನು ಕದ್ದು ಬಚ್ಚಿಟ್ಟುಕೊಂಡಿದ್ದರು. ಅದಾದ ನಂತರ ಪತಿಯನ್ನು ಎಚ್ಚರಿಸಿ ಬ್ಯಾಗ್‌ ಕಾಣುತ್ತಿಲ್ಲ ಎಂದು ಹೇಳಿ ಬಸ್‌ನಲ್ಲೇ ರಂಪಾಟ ಮಾಡಿದ್ದರು’ ಎಂದು ವಿವರಿಸಿದರು.

‘ಈ ಬಗ್ಗೆ ಜ್ಯುವೆಲರ್ಸ್‌ ಮಾಲೀಕರು ದೂರು ಕೊಟ್ಟಿದ್ದರು. ಅದರನ್ವಯ ತನಿಖೆ ಕೈಗೊಂಡು ಆರೋಪಿಯನ್ನು ಪತ್ತೆ ಹಚ್ಚಿದ್ದೇವೆ’ ಎಂದರು.

‘ಸಾಕಷ್ಟು ಸಾಲ ಮಾಡಿದ್ದೆ. ಪತಿಯು ಚಿನ್ನವನ್ನು ಒಯ್ಯುತ್ತಾರೆ ಎಂಬುದು ಗೊತ್ತಾಗಿತ್ತು. ಅದನ್ನು ಕಳ್ಳತನ ಮಾಡಿ ಅದರ ಮಾರಾಟದಿಂದ ಬಂದ ಹಣದಲ್ಲಿ ಸಾಲ ತೀರಿಸಬೇಕು ಎಂದುಕೊಂಡು ಈ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ಎರಡನೇ ಮದುವೆಯಾಗಿದ್ದ ನಾಗಲಕ್ಷ್ಮಿ: ಹೊಸೂರಿನ ನಾಗಲಕ್ಷ್ಮಿ ಅವರ ಮೊದಲ ಪತಿ ತೀರಿಕೊಂಡಿದ್ದು, ಕೆಲಸ ಅರಸಿ ನಗರಕ್ಕೆ ಬಂದಿದ್ದರು. ಇದೇ ಚೆಮ್ಮನೂರು ಜ್ಯುವೆಲರ್ಸ್‌ನಲ್ಲಿ ಮಾರಾಟ ಪ್ರತಿನಿಧಿಯಾಗಿ ಸೇರಿದ್ದರು. ಈ ವೇಳೆ ಅವರಿಬ್ಬರ ಮಧ್ಯೆ ಸ್ನೇಹವಾಗಿ ಅದು ಪ್ರೀತಿಗೆ ತಿರುಗಿತ್ತು. ಬಳಿಕ ಮದುವೆ ಆಗಿದ್ದರು ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.