ADVERTISEMENT

ಪೆರಿಫೆರಲ್‌ ವರ್ತುಲ ರಸ್ತೆಗೆ ಬೇಕು ₹20 ಸಾವಿರ ಕೋಟಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:56 IST
Last Updated 22 ನವೆಂಬರ್ 2017, 19:56 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಬೆಂಗಳೂರು: ದಶಕದಿಂದ ನನೆಗುದಿಗೆ ಬಿದ್ದಿರುವ ನಗರದ 65 ಕಿ.ಮೀ ಉದ್ದದ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಯೋಜನೆ ಅನುಷ್ಠಾನಕ್ಕೆ ₹20 ಸಾವಿರ ಕೋಟಿ ಅಗತ್ಯ ಇದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಸಮೀಕ್ಷಾ ವರದಿ ತಿಳಿಸಿದೆ.

100 ಮೀಟರ್‌ ಅಗಲದ ಪಿಆರ್‌ಆರ್‌ ನಿರ್ಮಾಣಕ್ಕೆ 2006ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಭೂಸ್ವಾಧೀನ ವಿಚಾರದಲ್ಲಿ ಗೊಂದಲ ಇದ್ದುದರಿಂದ ಈ ಯೋಜನೆ ಅನುಷ್ಠಾನಗೊಂಡಿರಲಿಲ್ಲ.

ರೈತರಿಗೆ ನಗದು ರೂಪದಲ್ಲಿ ಪರಿಹಾರ ನೀಡುವುದರಿಂದ ಆಗುವ ಆರ್ಥಿಕ ಹೊರೆ ಕಡಿಮೆ ಮಾಡುವ ಸಲುವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಯೋಜನೆಯಲ್ಲಿ ಮಾರ್ಪಾಡು ಮಾಡಿತ್ತು. 100 ಮೀಟರ್‌ ಅಗಲದ ರಸ್ತೆ ನಿರ್ಮಿಸುವ ಬದಲು 75 ಮೀಟರ್‌ ಅಗಲದಲ್ಲಿ ರಸ್ತೆ ನಿರ್ಮಿಸಲು ಹಾಗೂ ಉಳಿದ 25 ಮೀಟರ್‌ ಅಗಲದ ಜಾಗವನ್ನು ಅಭಿವೃದ್ಧಿಪಡಿಸಿ, ಜಾಗ ಕಳೆದುಕೊಂಡ ರೈತರಿಗೆ ಮರಳಿಸಲು ಬಿಡಿಎ ಮುಂದಾಗಿತ್ತು. ಈ ಪರಿಷ್ಕೃತ ಯೋಜನೆಗೆ ಸಚಿವ ಸಂಪುಟ ಕಳೆದ ವರ್ಷ ಜೂನ್‌ನಲ್ಲಿ ತಾತ್ವಿಕ ಒಪ್ಪಿಗೆ ನೀಡಿತ್ತು. ಆದರೆ, ಈ ಪ್ರಸ್ತಾವಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಕಳೆದ ವರ್ಷ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಷ್ಠಾನ ಮಾಡಬೇಕು ಎಂದು ಮನವಿ ಸಲ್ಲಿಸಿದ್ದರು. ಸಚಿವರ ಸೂಚನೆಯ ಮೇರೆಗೆ ಪ್ರಾಧಿಕಾರದ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದಾರೆ.

ADVERTISEMENT

ಈ ಯೋಜನೆಗೆ ಅಧಿಸೂಚನೆ ಹೊರಡಿಸುವಾಗ ಅಂದಾಜು ವೆಚ್ಚ ₹ 500 ಕೋಟಿ ಇತ್ತು. 2013ರಲ್ಲಿ ಇದು ₹ 5,000 ಕೋಟಿಗೆ ಹೆಚ್ಚಿತ್ತು. ಪರಿಷ್ಕೃತ ಅಂದಾಜಿನ ಪ್ರಕಾರ ಈ ಯೋಜನೆಗೆ ₹ 11,950 ಕೋಟಿ ಬೇಕಾಗುತ್ತದೆ. ಈ ಪೈಕಿ ರಸ್ತೆ ನಿರ್ಮಾಣಕ್ಕೆ ₹ 3,850 ಕೋಟಿ, ಭೂಸ್ವಾಧೀನಕ್ಕೆ ₹ 8,000 ಕೋಟಿ ವೆಚ್ಚವಾಗಲಿದೆ. ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ರಸ್ತೆ ನಿರ್ಮಾಣಕ್ಕೆ ₹ 3,850 ಕೋಟಿ ಸಾಲ ನೀಡಲು ಆಸಕ್ತಿ ತೋರಿದೆ.

‘₹12 ಸಾವಿರ ಕೋಟಿ ಯೋಜನೆಯ ಪ್ರಸ್ತಾವ ಸಿದ್ಧಪಡಿಸಿದ್ದೇವೆ. ಇದರಲ್ಲಿ ಭೂಸ್ವಾಧೀನ ವೆಚ್ಚವೇ ₹8 ಸಾವಿರ ಕೋಟಿ ಆಗಲಿದೆ. ಉಳಿದ ಮೊತ್ತವನ್ನು ಅಷ್ಟಪಥ ರಸ್ತೆ ನಿರ್ಮಾಣಕ್ಕೆ ಬಳಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ 7 ಹಾಗೂ 4ರಲ್ಲಿ ಬೈಪಾಸ್‌ ರಸ್ತೆಗಳ ನಿರ್ಮಾಣ ಮಾಡಬೇಕಿದೆ. ಇದನ್ನು ಕೇಂದ್ರ ಸರ್ಕಾರ ಮಾಡುವ ನಿರೀಕ್ಷೆ ಇದೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಪಿ.ಎನ್. ನಾಯಕ್‌ ತಿಳಿಸಿದರು.

‘ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರ ಭೂಸ್ವಾಧೀನ ವೆಚ್ಚವೇ ₹18 ಸಾವಿರ ಕೋಟಿ ಆಗಲಿದೆ. ಪ್ರಸ್ತಾವಿತ ಪಿಆರ್‌ಆರ್‌ ಸುತ್ತಮುತ್ತಲಿನ ಪ್ರದೇಶಗಳ ಜಾಗದ ಬೆಲೆ ಗಗನಕ್ಕೆ ಏರಿದೆ. ಯೋಜನೆಗೆ ₹20 ಸಾವಿರ ಕೋಟಿ ಬೇಕಾಗುತ್ತದೆ ಎಂಬ ವರದಿಯನ್ನು ಸಚಿವರಿಗೆ ಕಳುಹಿಸಿದ್ದೇವೆ’ ಎಂದು ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವೈ. ವೆಂಕಟರೆಡ್ಡಿ ಪ್ರಸಾದ್‌ ತಿಳಿಸಿದರು.

‘ಭೂಸ್ವಾಧೀನ ವೆಚ್ಚ ₹8 ಸಾವಿರ ಕೋಟಿ ಮೀರುವುದಿಲ್ಲ’ ಎಂದು ಬಿಡಿಎ ಅಧಿಕಾರಿಗಳು ಸಮಜಾಯಿಷಿ ನೀಡಿದರು.  

‘ಭೂಸ್ವಾಧೀನಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಸರ್ಕಾರವು ಭಾರತ್‌ ಮಾಲಾ ಯೋಜನೆ ಅಡಿ ಭರಿಸಲಿದೆ ಎಂಬ ಆಶಾವಾದ ಹೊಂದಿದ್ದೇವೆ. ಯೋಜನೆಗೆ ಅನುದಾನ ಒದಗಿಸುವ ವಿಚಾರದಲ್ಲಿ ಕೇಂದ್ರದಿಂದ ಔಪಚಾರಿಕ ಪ್ರಸ್ತಾವದ ನಿರೀಕ್ಷೆಯಲ್ಲಿದ್ದೇವೆ’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ತಿಳಿಸಿದರು.

‘ನಾವು ಈ ಯೋಜನೆಗೆ ಅಗತ್ಯವಿರುವ 100 ಮೀಟರ್‌ ಅಗಲದ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಿದ್ದೇವೆ. 25 ಮೀಟರ್‌ ಜಾಗವನ್ನು ಆದಾಯ ತರುವ ಚಟುವಟಿಕೆಗೆ ಬಳಸಿಕೊಳ್ಳುವ ಸಾಧ್ಯಾಸಾಧ್ಯತೆ ನೋಡಿಕೊಂಡು ರಸ್ತೆಯ ಅಗಲ 75 ಮೀಟರ್‌ ಇರಬೇಕೋ ಅಥವಾ 100 ಮೀಟರ್‌ ಇರಬೇಕೋ ಎಂಬುದನ್ನು ನಿರ್ಧರಿಸುತ್ತೇವೆ’ ಎಂದು ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ತಿಳಿಸಿದರು.

‘ಭೂಸ್ವಾಧೀನಕ್ಕೆ ಕೇಂದ್ರ ಸರ್ಕಾರವು ಯಾವುದೇ ರೀತಿಯ ನೆರವು ನೀಡಿದರೂ ಸ್ವಾಗತಾರ್ಹ. ಅವರು ಶೇ 100ರಷ್ಟು ಅನುದಾನ ಒದಗಿಸಿದರೆ ನಾವು ಈ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಅಥವಾ ಕೇಂದ್ರ ಸರ್ಕಾರ ಸೂಚಿಸುವ ಸಂಸ್ಥೆಗೆ ಹಸ್ತಾಂತರ ಮಾಡಲು ಸಿದ್ಧ’ ಎಂದರು.

ಪೆರಿಫೆರಲ್‌ ವರ್ತುಲ ರಸ್ತೆಯನ್ನು ಸಂಧಿಸುವ ಪ್ರಮುಖ ರಸ್ತೆಗಳು

ತುಮಕೂರು ರಸ್ತೆ , ಬಳ್ಳಾರಿ ರಸ್ತೆ,  ಹಳೆ ಮದ್ರಾಸ್‌ ರಸ್ತೆ,  ಹೊಸೂರು ರಸ್ತೆ , ದೊಡ್ಡಬಳ್ಳಾಪುರ ರಸ್ತೆ, ಹೆಣ್ಣೂರು ರಸ್ತೆ,  ಹೆಸರಘಟ್ಟ ರಸ್ತೆ,
ಹೊಸಕೋಟೆ– ಆನೇಕಲ್‌ ರಸ್ತೆ, ವೈಟ್‌ಫೀಲ್ಡ್‌ ರಸ್ತೆ, ಸರ್ಜಾಪುರ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.