ADVERTISEMENT

ಪ್ರತಿಷ್ಠಿತ ರಸ್ತೆಗಳಲ್ಲೂ ಪಾದಚಾರಿ ಮಾರ್ಗ ಅಸ್ತವ್ಯಸ್ತ

ಪಾದಚಾರಿ ಮಾರ್ಗದಲ್ಲಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 19:37 IST
Last Updated 22 ಸೆಪ್ಟೆಂಬರ್ 2014, 19:37 IST

ಬೆಂಗಳೂರು: ನಗರದ ಪ್ರತಿಷ್ಠಿತ ಚರ್ಚ್‌ ಸ್ಟ್ರೀಟ್‌ ಹಾಗೂ ಕ್ರೆಸೆಂಟ್‌ ರಸ್ತೆಗಳ ಬಹುತೇಕ ಕಡೆ ಪಾದಚಾರಿ ಮಾರ್ಗವೇ ಮಾಯವಾಗಿದೆ. ಪಾದಚಾರಿ ಮಾರ್ಗದ ಅವ್ಯವಸ್ಥೆ ಕಣ್ಣಿಗೆ ರಾಚುತ್ತದೆ.

ಅವ್ಯವಸ್ಥೆಯಿಂದ ಕೂಡಿದ ಪಾದಚಾರಿ ಮಾರ್ಗ­ಗಳು, ಇರುವ ಅಲ್ಪ–ಸ್ವಲ್ಪ ಪಾದ­ಚಾರಿ ಮಾರ್ಗವನ್ನೂ ಆಕ್ರಮಿಸಿರುವ ವಾಹನಗಳು, ಗುಂಡಿ ಬಿದ್ದಿರುವ ರಸ್ತೆ­ಗಳು... ಹೀಗೆ  ನಗರದ ಇತರ ರಸ್ತೆಗಳಂತೆ ಇಲ್ಲಿಯೂ ಇಂತಹ ಅವ್ಯವಸ್ಥೆಗಳೇ ರಸ್ತೆಯುದ್ದಕ್ಕೂ ಸ್ವಾಗತಿಸುತ್ತವೆ.

ಪ್ರತಿಷ್ಠಿತ ರಸ್ತೆಗಳೆನಿಸಿಕೊಂಡ ಇಲ್ಲಿಗೂ ಮತ್ತು ನಗರದ ಉಳಿದ ರಸ್ತೆಗಳಿಗೂ ಇರುವ ವ್ಯತ್ಯಾಸವನ್ನು ಹುಡುಕುತ್ತ ಹೋದರೆ, ಊಹ್ಞು... ಇಲ್ಲಿಯೂ ಯಾವುದೇ ಭಿನ್ನತೆಯಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ  ಭೇಟಿ ಮಾಡುವ ವಿದೇಶಿಯರು ಈ ರಸ್ತೆಗಳನ್ನು ನೋಡಿದರೆ ಅವರ ಮನಸ್ಸು ಪಿಚ್ಚೆನಿಸುವುದಂತೂ ಸತ್ಯ.
ಮಹಾತ್ಮ ಗಾಂಧಿ ರಸ್ತೆಯಿಂದ ಕ್ರೆಸೆಂಟ್‌ ರಸ್ತೆಯಲ್ಲಿ ನಡೆಯುತ್ತಾ ಹೋದರೆ, ಅಲ್ಲಿ ಪಾದಚಾರಿ ಮಾರ್ಗವೇ ಇಲ್ಲ. ಎರಡೂ ಬದಿ ದ್ವಿಚಕ್ರ ವಾಹನಗಳು ಮತ್ತು ಕಾರು­ಗಳನ್ನು ನಿಲ್ಲಿಸಲಾಗಿರುತ್ತದೆ. ಅವುಗಳೇ ರಸ್ತೆಯ ಅರ್ಧ ಭಾಗವನ್ನು ಆಕ್ರಮಿಸಿವೆ.

ಕ್ರೆಸೆಂಟ್‌ ರಸ್ತೆಯಿಂದ ಮುಂದೆ ಹೋದರೆ ಚರ್ಚ್‌ ಸ್ಟ್ರೀಟ್. ಅಲ್ಲಿಯ ಪಾದ­ಚಾರಿ ಮಾರ್ಗದಲ್ಲಿ ಯುವಕರೇ ನಡೆ­ಯಲು ಹರಸಾಹಸ ಪಡಬೇಕು. ಪಾದಚಾರಿ ಮಾರ್ಗ ಅವ್ಯವಸ್ಥೆಯಿಂದ ಕೂಡಿದೆ. ಇನ್ನು ವಯಸ್ಸಾದವರು ಅಲ್ಲಿ ಸಂಚರಿಸುವುದಂತೂ ದುಸ್ತರ.

ಪಾದಚಾರಿ ಮಾರ್ಗದಲ್ಲಿ ಒಂದು ಕಡೆಗೆ ಅಳವಡಿಸಿರುವ ಕಲ್ಲುಗಳು ಕಿತ್ತು ಹೋಗಿವೆ. ಇನ್ನೊಂದೆಡೆ ಕಲ್ಲುಗಳನ್ನೇ ಅವ್ಯವಸ್ಥಿತವಾಗಿ ಜೋಡಿಸಲಾಗಿದೆ. ಅಲ್ಲಲ್ಲಿ ಕಲ್ಲುಗಳು ಕಿತ್ತು ಮೇಲೆದ್ದು ಬಂದಿವೆ. ಹೀಗಿದೆ ಸ್ವಾಮಿ ಇಲ್ಲಿಯ ಪಾದಚಾರಿ ಮಾರ್ಗದ ಕಥೆ ವ್ಯಥೆ.

ಒಳಚರಂಡಿ ನೀರಿನ ಸಮಸ್ಯೆ: ಚರ್ಚ್ ಸ್ಟ್ರೀಟ್‌ನಲ್ಲಿ ಒಳಚರಂಡಿ ನೀರು ರಸ್ತೆಯ­ಲ್ಲಿಯೇ ಹರಿಯುವ ಸಮಸ್ಯೆ ಬಹುದಿನ­ಗ­ಳಿಂದ ಇದೆ. ಆದರೆ, ಇದುವರೆಗೂ ಒಳ­ಚರಂಡಿ ದುರಸ್ತಿ ಪಡಿಸಲು ಜಲಮಂಡಳಿ ಅಧಿಕಾರಿಗಳು ಮುಂದಾಗಿಲ್ಲ. ರಸ್ತೆಯ ಮೇಲೆ ಒಳಚರಂಡಿಯ ಕೊಳಚೆ ನೀರು ಹರಿದು ಗಬ್ಬುನಾತ ಬೀರುತ್ತದೆ. ರಸ್ತೆ­ಯಲ್ಲಿ ಓಡಾಡುವವರಿಗೆ ತೊಂದರೆಯಾ­ಗು­ತ್ತದೆ. ಗ್ರಾಹಕರು ಯಾರೂ ಅಂಗಡಿಗೆ ಬರುವುದಿಲ್ಲ ಹೀಗಾಗಿ ಸಂಬಂಧಪಟ್ಟ­ವರಿಗೆ ಮನವಿ ಸಲ್ಲಿಸಿದರೂ, ಶಾಶ್ವತ ಪರಿಹಾರ  ಸಿಕ್ಕಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

‘ಇಲ್ಲಿಯ ಪಾದಚಾರಿ ಮಾರ್ಗದ ನಿರ್ಮಾಣವೇ ವ್ಯವಸ್ಥಿತವಾಗಿಲ್ಲ. ಇಲ್ಲಿಯ ಕಾಲುದಾರಿಯಲ್ಲಿ ಸಂಚರಿಸಲು ದೊಡ್ಡ ಸಾಹಸವನ್ನೇ ಮಾಡಬೇಕಾಗುತ್ತದೆ. ಯುವಕರಿಗೇ ಇಲ್ಲಿ ಸಂಚರಿಸಲು ಕಷ್ಟ­ವಾಗು­ತ್ತದೆ’ ಎಂದು ಖಾಸಗಿ ಕಂಪೆನಿ ಉದ್ಯೋಗಿ ರಮೇಶ್‌ ದೂರಿದರು.

‘ಇದು ಹೇಳಿಕೊಳ್ಳಲು ಮಾತ್ರ ಪ್ರತಿಷ್ಠಿತ ರಸ್ತೆ. ಇಲ್ಲಿ ವ್ಯವಸ್ಥಿತವಾಗಿ ಪಾದಚಾರಿ ಮಾರ್ಗದ ನಿರ್ಮಾಣವೇ ಆಗಿಲ್ಲ. ರಸ್ತೆ­ಯಲ್ಲಿಯೂ ಗುಂಡಿ ಬಿದ್ದಿವೆ. ಇದು ಅವ್ಯ­ವ­ಸ್ಥೆಯ ಗೂಡು. ಇಲ್ಲಿ ಪಾದಚಾರಿಗಳಿಗೆ ಯಾವುದೇ ಬೆಲೆಯಿಲ್ಲದಂತಾಗಿದೆ’ ಎಂದು ಹಿರಿಯ ನಾಗರಿಕ ಹನುಮಂತು ಬೇಸರ ವ್ಯಕ್ತಪಡಿಸಿದರು.

‘ಇಲ್ಲಿ ಶ್ರೀಮಂತರು ಮತ್ತು ವಿದೇಶಿ­ಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡು­ತ್ತಾರೆ. ವಿದೇಶಿಯರಿಗೆ ಇಲ್ಲಿನ ಪ್ರತಿಷ್ಠಿತ ರಸ್ತೆಗಳೆಂದರೆ ಬೇರೆ ಏನೋ ಕಲ್ಪನೆ ಇರು­ತ್ತದೆ. ಆದರೆ, ಇಲ್ಲಿನ ಪಾದಚಾರಿ ಮಾರ್ಗ  ರಸ್ತೆಯ ಅವ್ಯವಸ್ಥೆ ನೋಡಿ­ದರೆ ಏನಂದು­ಕೊಳ್ಳುತ್ತಾರೋ’ ಎಂದು ಖೇದ ವ್ಯಕ್ತಪಡಿ­ಸಿದ್ದು ವ್ಯಾಪಾರಿ ರಮೇಶ್‌ ರಾವ್‌.

‘ಇಲ್ಲಿ ವಿದೇಶಿಯರು, ಶ್ರೀಮಂತರು ಮಾತ್ರ­ವಲ್ಲದೆ ಮಧ್ಯಮ ವರ್ಗದವರೂ ಸಹ ಭೇಟಿ ನೀಡುತ್ತಾರೆ. ಆದರೆ, ಬೇರೆ ರಸ್ತೆಗಳಿಗಿಂತ ಈ ರಸ್ತೆಯೇನೂ ಭಿನ್ನವಾ­ಗಿಲ್ಲ. ಇಲ್ಲಿಯೂ ಬೇರೆ ರಸ್ತೆಗಳಂತೆ ಪಾದ­ಚಾರಿ ಮಾರ್ಗವು ಅವ್ಯವಸ್ಥೆಯಿಂದ ಕೂಡಿದೆ. ಒಳಚರಂಡಿ ನೀರು ಗಬ್ಬುನಾತ ಬೀರುತ್ತದೆ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಆದರೆ, ಈ ಕುರಿತು ಪೊಲೀಸರು ಯಾವುದೇ ಕ್ರಮವನ್ನು ಕೈಗೊಳ್ಳುವುದಿಲ್ಲ’ ಎಂದು ವ್ಯಾಪಾರಿ ಅಚ್ಯುತ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.