ADVERTISEMENT

ಬಿಸಿಜಿ ತಂದ ಆಪತ್ತು: ಶಿಶುಗಳ ಸಾವು

​ಪ್ರಜಾವಾಣಿ ವಾರ್ತೆ
Published 26 ಮೇ 2015, 20:16 IST
Last Updated 26 ಮೇ 2015, 20:16 IST

ಬೆಂಗಳೂರು: ಹೊಸ ಅತಿಥಿ ಬಂದ ಖುಷಿಯಲ್ಲಿದ್ದ ಆ ಎರಡು  ಕುಟುಂಬಗಳಲ್ಲಿ ಸಂಭ್ರಮ  ಹೆಚ್ಚು ಕಾಲ ಮನೆ ಮಾಡಲಿಲ್ಲ. ನವಜಾತ ಶಿಶುಗಳಿಗೆ ಜೀವಜನ್ಯವಾಗಬೇಕಿದ್ದ ಬಿಸಿಜಿ ಚುಚ್ಚು ಮದ್ದು, ಆ ಎರಡು ಕಂದಮ್ಮಗಳನ್ನೇ ಬಲಿ ಪಡೆಯಿತು.

ಯಲಹಂಕದ ಶುಶ್ರೂಷ ನರ್ಸಿಂಗ್‌ ಹೋಂನಲ್ಲಿ ಇಬ್ಬರು ಗರ್ಭೀಣಿಯರಿಗೆ ಜನಿಸಿದ್ದ ಗಂಡು ಮತ್ತು ಹೆಣ್ಣು ಶಿಶುಗಳಿಗೆ ಆಸ್ಪತ್ರೆಯ ಸಿಬ್ಬಂದಿ ನೀಡಿದ ಬಿಸಿಜಿ ಚುಚ್ಚುಮದ್ದಿನಿಂದಾಗಿ, ಎರಡು ಶಿಶುಗಳು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.

ಘಟನೆಯಿಂದ ಆಕ್ರೋಶ ಗೊಂಡಿ ರುವ ಮೃತ ಶಿಶುಗಳ ಪೋಷಕರು, ಆಸ್ಪತ್ರೆಯ ಸಿಬ್ಬಂದಿಯ ನಿರ್ಲ ಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿ ದ್ದಾರೆ. ಗ್ರಾನೈಟ್‌ ಉದ್ಯಮಿ  ಆರ್‌. ನರೇಂದ್ರ ಅವರು, ತಮ್ಮ ಪತ್ನಿ ಚೈತ್ರಾ(20) ಅವರನ್ನು ಮೇ 23ರಂದು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮಾರನೇಯ ದಿನವೇ ಚೈತ್ರಾ ಅವರು ಮೇ 25ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. 

ಅಂತೆಯೇ, ಗ್ಯಾಸ್‌ ಏಜೆನ್ಸಿಯೊಂದರ ನೌಕರ ಧನು ಕುಮಾರ್ ಅವರು ಸಹ ತಮ್ಮ ಪತ್ನಿಯನ್ನು ಹೆರಿಗೆಗಾಗಿ ದಾಖಲಿ ಸಿದ್ದರು. ಅವರ ಪತ್ನಿಗೆ ಗಂಡು ಮಗು ಜನಿಸಿತ್ತು.

‘ಎರಡು ಶಿಶುಗಳ ಮತ್ತು ತಾಯಿಯ ಆರೋಗ್ಯ ತಪಾಸಣೆ ನಡೆಸಿದ್ದ ವೈದ್ಯರು, ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾದ ಬಳಿಕ ಡಿಸ್‌ಚಾರ್ಜ್ ಮಾಡುವುದಾಗಿ ಹೇಳಿದ್ದರು.  ಡಿಸ್‌ಚಾರ್ಜ್‌ ಮಾಡುವುದಕ್ಕೂ ಮುನ್ನ ಎರಡು ಮಕ್ಕಳಿಗೆ ಬಿಸಿಜಿ ಚುಚ್ಚುಮದ್ದು ನೀಡಲಾಗಿತ್ತು. ತಕ್ಷಣ ಮಕ್ಕಳ ಮುಖ ನೀಲಿ ಬಣ್ಣಕ್ಕೆ ತಿರುಗಿತು. ಅಲ್ಲದೆ ಸ್ವಲ್ಪ ಸಮಯದ ಬಳಿಕ ಇಡೀ ದೇಹ ನೀಲಿಯಾಯಿತು’ ಎಂದು ಹೆಣ್ಣು ಶಿಶುವಿನ ತಂದೆ ಆರ್‌. ನರೇಂದ್ರ   ಅವರು ಹೇಳಿದರು.

‘ಕೂಡಲೇ ಈ ವಿಷಯನ್ನು ವೈದ್ಯರ ಗಮನಕ್ಕೆ ತಂದೆವು.  ತಕ್ಷಣ ಎರಡು ಮಕ್ಕಳನ್ನು ‘ತೀವ್ರ ನಿಗಾ ಘಟಕ’ಕ್ಕೆ (ಐಸಿಯು) ಸ್ಥಳಾಂತರಿಸಿದರು.  ಕೊಠ ಡಿಯ ಒಳ ಮತ್ತು ಹೊರಕ್ಕೆ ನರ್ಸ್‌ಗಳು ಮತ್ತು ವಾರ್ಡ್‌ಬಾಯ್‌ಗಳು ಓಡಾಡು ತ್ತಿದ್ದರು. ನಾವು ಏನಾಗಿದೆಯೇ ಎಂಬ ಗಾಬರಿಯಲ್ಲಿದ್ದೆವು. ಸ್ವಲ್ಪ ಸಮಯದ ನಂತರ ಕೊಠಡಿಯಿಂದ ಹೊರಬಂದ ವೈದ್ಯರು ನಿಮ್ಮ ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿಸಿದರು’ ಎಂದು ಅವರು ಕಣ್ಣೀರಿಟ್ಟರು.

‘ಸಿಬ್ಬಂದಿಯ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ. ವೈದ್ಯರು ಚಿಕಿತ್ಸೆ ನೀಡುವಾಗ ಅತ್ಯಂತ ಜಾಗರೂಕತೆ ಯಿಂದ ಇರಬೇಕಿತ್ತು. ನನ್ನ ಪತ್ನಿ ಗರ್ಭೀಣಿಯಾದಾಗಿನಿಂದಲೂ ಇದೇ ಆಸ್ಪತ್ರೆಗೆ ಕರೆತಂದು ತೋರಿಸುತ್ತಿದೆ. ಈಗ ಅದೇ ಆಸ್ಪತ್ರೆಯಲ್ಲಿ ನನ್ನ ಮಗು ತೀರಿಕೊಂಡಿದೆ’ ಎಂದು  ಅವರು ಆಕ್ರೋಶಪಡಿಸಿದರು.

‘ಮಗುವಿನ ಸಾವಿಗೆ ಸಂಬಂಧಿಸಿ ದಂತೆ ಆಸ್ಪತ್ರೆಯ ವಿರುದ್ಧ ಕ್ರಮ ಜರುಗಿಸುವಂತೆ ಹೋರಾಡಲು ನಾವು ಆರ್ಥಿಕವಾಗಿ ಶಕ್ತರಿಲ್ಲ. ಅಸ್ವಸ್ಥತೆಯಿಂದಾಗಿ ಮಗು ಸಾವನ್ನಪ್ಪಿರಬಹುದು.   ಆಸ್ಪತ್ರೆಯಲ್ಲಿ ನಮ್ಮ ಸಂಬಂಧಿಯೊಬ್ಬರು ಕೆಲಸ ಮಾಡುತ್ತಿದ್ದು, ಅವರಿಗೆ ತೊಂದರೆ ಕೊಡಲು ನಾವು ಇಚ್ಛಿಸುವುದಿಲ್ಲ’ ಎಂದು ಮೃತ ಗಂಡು ಶಿಶುವಿನ ತಂದೆ ಧನು ಕುಮಾರ್ ಅವರು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಔಷಧಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು: ‘ಬಿಸಿಜಿ ಚುಚ್ಚು ಮದ್ದು ಸರಬರಾಜು ಮಾಡಿರುವ ಕಂಪೆನಿಯ ವಿವರ ಒದಗಿಸುವಂತೆ ಆಸ್ಪತ್ರೆಗೆ ಸೂಚಿಸಲಾಗಿದೆ. ಚುಚ್ಚುಮದ್ದಿನ ಮಾದರಿಯನ್ನು ಕಳುಹಿಸಿದ ಮೇಲೆ, ಅದನ್ನು ‘ವಿಧಿ ವಿಜ್ಞಾನ ಪ್ರಯೋಗಾ ಲಯ’ಕ್ಕೆ(ಎಫ್‌ಎಸ್‌ಎಲ್‌) ಕಳುಹಿಸ ಲಾಗುವುದು. ವರದಿ ಬಂದ ನಂತರ  ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.