ADVERTISEMENT

ಮತ್ತೊಬ್ಬ ಆರೋಪಿ ಬಂಧನ

ಯುವತಿ ಮೇಲಿನ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 20:11 IST
Last Updated 24 ಜುಲೈ 2014, 20:11 IST

ಬೆಂಗಳೂರು: ಪುಲಿಕೇಶಿನಗರದಲ್ಲಿ ಯುವತಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಶಫೀಕ್ (27) ಎಂಬ ಮತ್ತೊಬ್ಬ ಆರೋಪಿಯನ್ನು ಗುರುವಾರ  ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂದಿಸಿದ ಎಲ್ಲ ಆರೋಪಿಗಳ ಬಂಧನವಾದಂತಾಗಿದೆ.

‘ಪಿಳ್ಳಣ್ಣ ಗಾರ್ಡನ್‌ ನಿವಾಸಿಯಾದ ಶಫೀಕ್, ಹಳೆ ಕಾರುಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ. ಘಟನಾ ದಿನ ಆರೋಪಿಗಳ ಜತೆ ಇದ್ದ ಈತ, ಯುವತಿಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಮೊಬೈಲ್‌ ಮತ್ತು ಪರ್ಸ್‌ ಕಿತ್ತುಕೊಂಡು ಪರಾರಿಯಾಗಿದ್ದ.

ಹೀಗಾಗಿ ಶಫೀಕ್‌ನನ್ನು ಪ್ರಕರಣದ ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಸತೀಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. ಪ್ರಕರಣದ ಪ್ರಮುಖ ಆರೋಪಿ ಹೈದರ್ ನಾಸಿರ್ ಬಂಧನದ ನಂತರ ತಲೆಮರೆಸಿಕೊಂಡಿದ್ದ ಮಹಮದ್‌ ಹಫೀಜ್, ಸಾವೂದ್ ಮತ್ತು ಶೇಖ್ ಶೋಯಬ್‌ನನ್ನು ಪೊಲೀಸರು 20ರಂದು ಹೊಸೂರಿನಲ್ಲಿ ಬಂಧಿಸಿದ್ದರು. ಆದರೆ, ಶಫೀಕ್‌ ಸಿಕ್ಕಿರಲಿಲ್ಲ.

‘ಕುಟುಂಬ ಸದಸ್ಯರು ನೀಡಿದ ಮಾಹಿತಿ ಆಧರಿಸಿ ಬುಧವಾರ ಬೆಳಿಗ್ಗೆ ಬೆಂಗಳೂರಿನ ಹೊರವಲಯದಲ್ಲಿ ಶಫೀಕ್‌ನನ್ನು ಬಂಧಿಸಲಾಯಿತು. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.