ADVERTISEMENT

‘ಮಾತೃಭಾಷೆಯಲ್ಲೇ ಶಿಕ್ಷಣ ನೀಡಲಿ’

ಡಾ. ಗಾಯತ್ರಿಗೆ ಎಚ್‌.ವಿ.ಸಾವಿತ್ರಮ್ಮ ದತ್ತಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2016, 19:30 IST
Last Updated 6 ನವೆಂಬರ್ 2016, 19:30 IST
ಪ್ರೊ.ಎಂಎಚ್.ಕೃಷ್ಣಯ್ಯ ಅವರು ಅನುವಾದ ಲೇಖಕಿ ಡಾ.ಎನ್.ಗಾಯತ್ರಿ ಅವರಿಗೆ ‘ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ’ ಪ್ರದಾನ ಮಾಡಿದರು.  ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ವನಮಾಲಾ ಶೆಟ್ಟಿ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ
ಪ್ರೊ.ಎಂಎಚ್.ಕೃಷ್ಣಯ್ಯ ಅವರು ಅನುವಾದ ಲೇಖಕಿ ಡಾ.ಎನ್.ಗಾಯತ್ರಿ ಅವರಿಗೆ ‘ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ’ ಪ್ರದಾನ ಮಾಡಿದರು. ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ವನಮಾಲಾ ಶೆಟ್ಟಿ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕರ್ನಾಟಕ ಜ್ಞಾನ ಆಯೋಗದ ಶಿಫಾರಸಿನಂತೆ 1ರಿಂದ 4ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವ ನಿಯಮವನ್ನು ಕೇಂದ್ರ ಸರ್ಕಾರ ರೂಪಿಸಬೇಕು’ ಎಂದು ಪ್ರೊ. ಎಂ.ಎಚ್.ಕೃಷ್ಣಯ್ಯ ಒತ್ತಾಯಿಸಿದರು.

ಕರ್ನಾಟಕ ಲೇಖಕಿಯರ ಸಂಘ ಭಾನುವಾರ ಏರ್ಪಡಿಸಿದ್ದ ಲೇಖಕಿ ಡಾ.ಎನ್‌.ಗಾಯತ್ರಿ ಅವರಿಗೆ ಎಚ್.ವಿ. ಸಾವಿತ್ರಮ್ಮ ದತ್ತಿ ಪ್ರಶಸ್ತಿ ಪ್ರದಾನ ಸಮಾ ರಂಭದಲ್ಲಿ ಅವರು ಮಾತನಾಡಿದರು.

‘ವಸಾಹತುಶಾಹಿಗಳ ಪ್ರಭಾವದಿಂದ ಇಂಗ್ಲಿಷ್ ಅನ್ನು ಆಡಳಿತ ಭಾಷೆಯನ್ನಾಗಿಸಿಕೊಂಡ ದೇಶಗಳು ಬಡತನದಿಂದ ನಲುಗುತ್ತಿವೆ. ಪ್ರಾಂತೀಯ ಭಾಷೆಗಳನ್ನು ಆಡಳಿತದಲ್ಲಿ ಬಳಸಿದ ದೇಶಗಳು ಮುಂದುವರೆದಿರುವುದು ಸಂಶೋಧನೆಗಳಿಂದ ದೃಢಪಟ್ಟಿದೆ’ ಎಂದರು.

‘ಗಾಯತ್ರಿ ಅವರು ವಿಶಿಷ್ಟ, ವಿಭಿನ್ನ ನೆಲೆಯ ಚಿಂತಕಿ. ಸಾಂಪ್ರದಾಯಿಕ ಚಿಂತನೆಗಳಿಂತ ಹೊರಬಂದು ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಅವರು ಸಂಪಾದಿಸಿರುವ ‘ಲೋಕ ತತ್ವಶಾಸ್ತ್ರದ ಪ್ರವೇಶಿಕೆ’ ಸಂಪುಟಗಳನ್ನು ಪ್ರತಿಯೊಬ್ಬರು ಓದಲೇಬೇಕು’ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಸಂಸ್ಥೆಯ ನಿರ್ದೇ ಶಕಿ ಡಾ.ಪ್ರೀತಿ ಶುಭಚಂದ್ರ ಮಾತನಾಡಿ, ‘ಗಾಯತ್ರಿ ಅವರು ಬರವಣಿಗೆ ಆರಂಭಿಸಿದಾಗ ಪ್ರೋತ್ಸಾಹದಾಯಕ ವಾತಾವರಣ ಇರಲಿಲ್ಲ. ಹಲವಾರು ಅಡೆತಡೆಗಳನ್ನು ಎದುರಿಸಿದ ಅವರು, ಅಚಲ, ಮಾನಸ, ಜಾಗೃತಿ ಎಂಬ ಪತ್ರಿಕೆಗಳನ್ನು ಮುನ್ನಡೆಸಿದ್ದರು. ಆ ಪತ್ರಿಕೆಗಳಲ್ಲಿ ಪ್ರಕಟಗೊಂಡ ಬರಹಗಳು ಸ್ತ್ರೀವಾದಿ ನೆಲೆಯ ಸಂಶೋಧನೆಗಳಿಗೆ ಸಹಾಯಕವಾಗಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.