ADVERTISEMENT

ರಾಜಧಾನಿ ಬಿಸಿಲಿಗೆ ಪ್ರಾಣಿ–ಪಕ್ಷಿ ಸಂಕುಲ ತತ್ತರ

ಸಂತೋಷ ಜಿಗಳಿಕೊಪ್ಪ
Published 29 ಏಪ್ರಿಲ್ 2016, 19:51 IST
Last Updated 29 ಏಪ್ರಿಲ್ 2016, 19:51 IST
1. ಅಸ್ವಸ್ಥಗೊಂಡ ಹದ್ದಿಗೆ ಪ್ಲಾಸ್ಟಿಕ್‌್ ಬಾಟಲಿಯಲ್ಲಿ ನೀರು ಕುಡಿಸುತ್ತಿರುವುದು 2. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪಕ್ಷಿಗೆ ಚಿಕಿತ್ಸೆ ನೀಡುತ್ತಿರುವುದು 3. ಪೀಪಲ್‌ ಫಾರ್‌ ಅನಿಮಲ್ಸ್‌ ಸಂಸ್ಥೆಯ ಕೇಂದ್ರದ ಪಂಜರವೊಂದರಲ್ಲಿ ಆಶ್ರಯ ಪಡೆದಿರುವ ಹದ್ದು  4. ಗಾಯಗೊಂಡ ಹದ್ದಿಗೆ ಬ್ಯಾಂಡೇಜ್‌್ ಹಾಕಿರುವುದು 
1. ಅಸ್ವಸ್ಥಗೊಂಡ ಹದ್ದಿಗೆ ಪ್ಲಾಸ್ಟಿಕ್‌್ ಬಾಟಲಿಯಲ್ಲಿ ನೀರು ಕುಡಿಸುತ್ತಿರುವುದು 2. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪಕ್ಷಿಗೆ ಚಿಕಿತ್ಸೆ ನೀಡುತ್ತಿರುವುದು 3. ಪೀಪಲ್‌ ಫಾರ್‌ ಅನಿಮಲ್ಸ್‌ ಸಂಸ್ಥೆಯ ಕೇಂದ್ರದ ಪಂಜರವೊಂದರಲ್ಲಿ ಆಶ್ರಯ ಪಡೆದಿರುವ ಹದ್ದು 4. ಗಾಯಗೊಂಡ ಹದ್ದಿಗೆ ಬ್ಯಾಂಡೇಜ್‌್ ಹಾಕಿರುವುದು    

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಬಿಸಿಲು  ಹೆಚ್ಚುತ್ತಿದ್ದು  ಪ್ರಾಣಿ– ಪಕ್ಷಿಗಳು ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಕುಡಿಯಲು ನೀರು ಹಾಗೂ ತಿನ್ನಲು ಆಹಾರವಿಲ್ಲದೆ ನೂರಾರು ಪಕ್ಷಿಗಳು ಅಸ್ವಸ್ಥಗೊಂಡು ನಗರದ ಹಲವೆಡೆ ಬೀಳುತ್ತಿವೆ.

‘ಜನವರಿ 1ರಿಂದ ಏಪ್ರಿಲ್‌ 27 ರವರೆಗೆ 200ಕ್ಕೂ ಹೆಚ್ಚು ಪಕ್ಷಿಗಳು ಹಾಗೂ 100ಕ್ಕೂ ಹೆಚ್ಚು ಪ್ರಾಣಿಗಳು ನಗರದ ವಿವಿಧೆಡೆ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದವು. ಅವುಗಳನ್ನು ಸುರಕ್ಷಿತವಾಗಿ ತಂದು ಚಿಕಿತ್ಸೆ ನೀಡಿದ್ದೇವೆ’ ಎಂದು ಕೆಂಗೇರಿ ಸಮೀಪದ ಅಭಿಮಾನಿ ಸ್ಟುಡಿಯೊ ಬಳಿಯ ಪೀಪಲ್‌ ಫಾರ್‌ ಅನಿಮಲ್ಸ್‌ ಸಂಸ್ಥೆ ವೈದ್ಯ ಡಾ. ಎಂ. ಕಾರ್ತಿಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ಗರಿಷ್ಠ 39.2 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 18.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಅದು ಮನುಷ್ಯರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಅದರಂತೆ ಪ್ರಾಣಿ–ಪಕ್ಷಿಗಳು ಸಹ ಅಂತಹ ಬಿಸಿಲಿನಲ್ಲಿ ಹಾರಾಡುವುದು  ಅಸಾಧ್ಯ’ ಎಂದು ಅವರು ತಿಳಿಸಿದರು.‘ಜನವರಿಯಿಂದ ಏಪ್ರಿಲ್‌ವರೆಗೆ ಪಕ್ಷಿಗಳಿಗೆ ಸಂತಾನವೃದ್ಧಿ ಕಾಲ. ಆಗ ತಾನೇ ಜನಿಸಿದ ಪುಟ್ಟ ಮರಿಗಳು ಹಾರಲು ಹಾಗೂ ಆಹಾರ ತಿನ್ನಲು ಕಲಿಯುತ್ತವೆ. ಆದರೆ ಇಂದು ಬಿಸಿಲು ಹೆಚ್ಚಾಗಿದ್ದು, ಅಂತಹ ಪಕ್ಷಿಗಳಿಗೆ ನೀರು ಸಹ ಸಿಗುತ್ತಿಲ್ಲ. ಪರಿಣಾಮ ಪುಟ್ಟ ಮರಿಗಳು ಎಲ್ಲೆಂದರಲ್ಲಿ ಬಿದ್ದು ಸಾವನ್ನಪ್ಪುತ್ತಿವೆ’ ಎಂದು ತಿಳಿಸಿದರು.

‘ಸಂಸ್ಥೆಯ ಕೇಂದ್ರದಲ್ಲಿ ಸದ್ಯ 91 ಪ್ರಾಣಿಗಳು ಹಾಗೂ 174 ಪಕ್ಷಿಗಳಿವೆ. ಪಕ್ಷಿಗಳ ಪೈಕಿ 83 ಹದ್ದುಗಳು ಹಾಗೂ ಉಳಿದವು ಗುಬ್ಬಚ್ಚಿ, ಗೂಬೆ, ಇತರೆ ಪಕ್ಷಿಗಳು. ಈಗಾಗಲೇ 250ಕ್ಕೂ ಹೆಚ್ಚು ಪಕ್ಷಿಗಳು ಗುಣಮುಖವಾಗಿ ಹೋಗಿವೆ. ಶಕ್ತಿಶಾಲಿ ಹಾಗೂ ಆಕ್ರಮಣಕಾರಿಯಾದ ಹದ್ದುಗಳೇ ಬಿಸಿಲಿಗೆ ಬಸವಳಿಯುತ್ತಿರುವುದನ್ನು ನೋಡಿದರೆ ಪುಟ್ಟ ಮರಿಗಳ ಪಾಡು ಹೇಳತೀರದು’ ಎಂದು ಕಾರ್ತಿಕ್‌ ವಿವರಿಸಿದರು.

100ಕ್ಕೂ ಹೆಚ್ಚು ದೂರು: ಎಲ್ಲೆಂದರಲ್ಲಿ ಅಸ್ವಸ್ಥಗೊಂಡು ಬಿದ್ದ ಪಕ್ಷಿಗಳ ರಕ್ಷಣೆಗಾಗಿ ಬಿಬಿಎಂಪಿ ಸಹಾಯವಾಣಿಗೆ ಮಾರ್ಚ್‌್ ಹಾಗೂ ಏಪ್ರಿಲ್‌ ತಿಂಗಳಿನಲ್ಲಿ 100ಕ್ಕೂ ಹೆಚ್ಚು ದೂರುಗಳು ಬಂದಿವೆ.

‘ಫ್ರೇಜರ್‌ಟೌನ್‌, ಎಂ.ಜಿ.ರಸ್ತೆ, ಕೆಂಗೇರಿ, ರಾಜಾಜಿನಗರ, ಗಾಂಧಿ ನಗರ, ಮೈಸೂರು ರಸ್ತೆ ಹಾಗೂ ಇತರೆ ಕೆಲ ಪ್ರದೇಶಗಳಿಂದ ದೂರು ದಾಖಲಿಸಿದ್ದ ನಿವಾಸಿಗಳು, ಪಕ್ಷಿಗಳ ರಕ್ಷಣೆಗೆ ಮನವಿ  ಮಾಡಿದ್ದರು. ಈವರೆಗೆ 290 ಪಕ್ಷಿಗಳನ್ನು ರಕ್ಷಿಸಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

‘ಕೆಲವು ನಾಗರಿಕರು ಪಕ್ಷಿಗಳನ್ನು ತಂದು ಕೊಟ್ಟಿದ್ದಾರೆ. ಇನ್ನು ಕೆಲವರು ತಮ್ಮ ಮನೆ ಸುತ್ತಲೂ ನೀರಿನ ಪಾತ್ರೆಗಳನ್ನು ಇಟ್ಟು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸುತ್ತಿದ್ದಾರೆ. ಜನರು ತಮಗೆ ಅಗತ್ಯವಿರುವಷ್ಟು ನೀರು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಆದರೆ ಪ್ರಾಣಿಗಳು ಆ ರೀತಿ ಮಾಡುವುದಿಲ್ಲ. ಬದಲಿಗೆ ನೀರು ಹುಡುಕಿಕೊಂಡು ಹೋಗುತ್ತವೆ. ಆದರೆ ಇಂದು  ನೀರಿನ ಮೂಲಗಳು ಬತ್ತಿದ್ದು, ಪರಿಣಾಮ ಪಕ್ಷಿಗಳು ನೀರಿಗಾಗಿ ಹುಡುಕಾಡಿ ಸುಸ್ತಾಗಿ ಎಲ್ಲೆಂದರಲ್ಲಿ ಬೀಳುತ್ತಿವೆ’ ಎಂದು ಅವರು ತಿಳಿಸಿದರು.

ನಿರಂತರ ಚಿಕಿತ್ಸೆ: ‘ಅಸ್ವಸ್ಥಗೊಂಡ ಪಕ್ಷಿಗಳಿಗೆ ವಾರದ ಕಾಲ ಸೂಕ್ತ ಆಹಾರ  ನೀಡಿ ನಿರಂತರ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಚಿಕಿತ್ಸಾ ಕ್ರಮದ ಕುರಿತು  ಡಾ. ಕಾರ್ತಿಕ್‌  ವಿವರಿಸಿದರು.

‘ಸಾಮಾನ್ಯವಾಗಿ ಪ್ರಾಣಿಗಳಿಗೆ ನೀಡುವ ಆಹಾರವನ್ನೇ ಪಕ್ಷಿಗಳಿಗೂ ನೀಡಲಾಗುತ್ತದೆ. ಗಾಯವಾಗಿದ್ದರೆ ಇಂಜೆಕ್ಷನ್‌್ ಹಾಗೂ ಔಷಧಿ ನೀಡಲಾಗುತ್ತದೆ. ಅದು ಪಕ್ಷಿಗಳು ಬಹುಬೇಗನೇ ಚೇತರಿಸಿಕೊಳ್ಳಲು ಸಹಾಯಕವಾಗುತ್ತದೆ. ಜತೆಗೆ ಪಕ್ಷಿಗಳ ಹಾರುವ ಸಾಮರ್ಥ್ಯ ವೃದ್ಧಿಸಲು ಸಹ ಸಂಸ್ಥೆಯ ಕೇಂದ್ರದಲ್ಲಿ ವ್ಯವಸ್ಥೆ ಇದೆ. ಪಕ್ಷಿಯು ಸಂಪೂರ್ಣವಾಗಿ ಗುಣಮುಖವಾಗಿದೆ ಎಂಬುದು ಖಾತ್ರಿಯಾದ ಬಳಿಕ ಕೇಂದ್ರದಿಂದ ಬಿಡುಗಡೆ ಮಾಡಲಾಗುತ್ತದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.