ADVERTISEMENT

ವಿರೋಧದ ನಡುವೆ ಅಂಗೀಕಾರ

ರಾಜ್ಯದಲ್ಲಿ ಕಬ್ಬು ದರ ನಿಗದಿ ಮಸೂದೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:31 IST
Last Updated 23 ಜುಲೈ 2014, 19:31 IST

ಬೆಂಗಳೂರು: ರಾಜ್ಯದ ಎಲ್ಲ ಪ್ರದೇಶಗಳಲ್ಲೂ ಸಕ್ಕರೆ ಕಾರ್ಖಾನೆಗಳ ದ್ವಾರಕ್ಕೆ ಪೂರೈಕೆಯಾಗುವ ಕಬ್ಬಿಗೆ ದರ ನಿಗದಿ ಮಾಡುವ ಮತ್ತು ನಿಗದಿತ ದರ ಪಾವತಿಗೆ ಕಾಲಮಿತಿಯನ್ನು ವಿಧಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) ತಿದ್ದುಪಡಿ ಮಸೂದೆ- 2014ಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಪ್ರಬಲ ವಿರೋಧದ ನಡು­ವೆಯೇ ಬುಧವಾರ ವಿಧಾನಸಭೆ ಒಪ್ಪಿಗೆ ನೀಡಿದೆ.

ಈ ಮಸೂದೆಯು ಕಬ್ಬಿನ ದರ ನಿಗದಿ ಮಾಡುವ ಅಧಿಕಾರವನ್ನು ಸಕ್ಕರೆ ಸಚಿವರ ಅಧ್ಯಕ್ಷತೆಯ ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) ಮಂಡಳಿಗೆ ನೀಡುತ್ತದೆ. ಈ ಸಮಿತಿಗೆ ನೆರವು ನೀಡಲು ಸಕ್ಕರೆ ಕಾರ್ಖಾನೆಗಳ ಆದಾಯ ಪ್ರಾಪ್ತಿಯನ್ನು ಲೆಕ್ಕ ಹಾಕಲು ತಜ್ಞರ ಸಮಿತಿ ನೇಮಿಸುವ ಅಧಿಕಾರವನ್ನೂ ನೀಡುತ್ತದೆ.

ರಾಜ್ಯದ ಎಲ್ಲ ಪ್ರದೇಶಗಳಲ್ಲೂ ಸಕ್ಕರೆ ಕಾರ್ಖಾನೆಯ ದ್ವಾರಕ್ಕೆ ಪೂರೈಕೆಯಾಗುವ ಕಬ್ಬಿಗೆ ದರ ನಿಗದಿ ಮಾಡಬೇಕು. ಕಾರ್ಖಾನೆಗೆ ಪೂರೈಕೆಯಾದ ಕಬ್ಬಿನಿಂದ ದೊರೆತ ಆದಾಯ, ಸಕ್ಕರೆ ಉತ್ಪಾದನೆ ಪ್ರಮಾಣ, ಕಬ್ಬಿನ ಸಿಪ್ಪೆ, ಕಾಕಂಬಿ, ‘ಪ್ರೆಸ್ ಮಡ್’ ಮತ್ತಿತರ  ಉಪ ಉತ್ಪನ್ನಗಳ ಮೌಲ್ಯವನ್ನೂ ಗಣನೆಗೆ ತೆಗೆದುಕೊಂಡು ಇಳುವರಿ ಆಧಾರಿತ ಹೆಚ್ಚುವರಿ ದರ ನಿಗದಿ ಮಾಡಬೇಕೆಂಬ ಪ್ರಸ್ತಾವ ಮಸೂದೆಯಲ್ಲಿದೆ.

ರೈತರು ಪೂರೈಸುವ ಕಬ್ಬಿಗೆ ಕಾರ್ಖಾನೆಗಳು ಎಫ್ಆರ್‌ಪಿ ದರವನ್ನು ಮೊದಲ ಹಂತದಲ್ಲಿ ಪಾವತಿಸಬೇಕು. ಎರಡನೇ ಹಂತದಲ್ಲಿ ಮಂಡಳಿಯು ಹೆಚ್ಚುವರಿ ದರವನ್ನು ಘೋಷಿಸಿದ ದಿನದಿಂದ ಹದಿನೈದು ದಿನಗಳೊಳಗೆ ಬಾಕಿ ಮೊತ್ತವನ್ನು ಪಾವತಿಸಬೇಕು. ಕಾರ್ಖಾ­ನೆಗಳು ರೈತರಿಗೆ ನೀಡುವ ಎಲ್ಲ ಮೊತ್ತವನ್ನು ಬ್ಯಾಂಕ್ ಖಾತೆಯ ಮೂಲಕವೇ ಸಂದಾಯ ಮಾಡಬೇಕು ಎಂಬ ಅಂಶ ಮಸೂದೆಯಲ್ಲಿದೆ.
ಸಕ್ಕರೆ ಸಚಿವ ಎಚ್.ಎಸ್.­ಮಹದೇವ­ಪ್ರಸಾದ್ ಮಸೂದೆ ಮಂಡಿಸಿದರು.

ಆರಂಭ­ದಲ್ಲೇ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರು, ಈ ಮಸೂದೆಗೆ ಒಪ್ಪಿಗೆ ನೀಡಿದರೆ ಕಟಾವು ಮತ್ತು ಸಾಗಣೆಯ ಭಾರವೂ ರೈತರ ಮೇಲೆ ಬೀಳುತ್ತದೆ. ಇದು ರೈತರ ಪಾಲಿಗೆ ಕರಾಳ ಶಾಸನ ಆಗುತ್ತದೆ’ ಎಂದು ಹೇಳಿದರು. ಸದಸ್ಯರ ಆಕ್ಷೇಪಗಳಿಗೆ ಉತ್ತರಿಸಿದ ಮಹದೇವ­ಪ್ರಸಾದ್, ರೈತರ ಹಿತ ಕಾಯುವು­ದಕ್ಕಾಗಿಯೇ ಮಸೂದೆ ತರಲಾಗಿದೆ ಎಂದರು. ಬಳಿಕ ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು. ಇದನ್ನು ವಿರೋಧಿಸಿದ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.