ADVERTISEMENT

ವಿಶ್ರಾಂತಿಯ ಮೊರೆ ಹೋದ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2014, 19:30 IST
Last Updated 18 ಏಪ್ರಿಲ್ 2014, 19:30 IST

ಬೆಂಗಳೂರು:  ಕಳೆದೊಂದು ತಿಂಗಳು ಬಿಡುವಿಲ್ಲದ ರಾಜಕೀಯ ಜಂಜಡದಲ್ಲಿ ಮುಳುಗಿದ್ದ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಶುಕ್ರವಾರ ಒಂದೊಂದು ರೀತಿಯಲ್ಲಿ ಕಾಲ ಕಳೆದರು.

ಕೆಲವರು ರಾಜಕೀಯ ಮರೆತು ಕುಟುಂಬದೊಂದಿಗೆ ಕಾಲ ಕಳೆದರೆ, ಮತ್ತೆ ಕೆಲವರು ಕಾರ್ಯಕರ್ತರು, ಬೆಂಬಲಿಗರೊಂದಿಗೆ ಚರ್ಚೆ ನಡೆಸಿದರು. ಮತ್ತೆ ಹಲವರು ಆಪ್ತರ ಸಮಾರಂಭದಲ್ಲಿ ಪಾಲ್ಗೊಂಡರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಅವರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷದ ಕಚೇರಿಯಲ್ಲಿ ನಡೆದ ಚುನಾವಣಾ ಕಾರ್ಯನಿರ್ವಹಣಾ ಸಮಿತಿ ಸಭೆಯಲ್ಲಿ ಪಾಲ್ಗೊಂಡರು.

ಮಧ್ಯಾಹ್ನ ಪ್ರಚಾರ­ಕ್ಕಾಗಿ ದುಡಿದ ಕಾರ್ಯಕರ್ತರ ಜೊತೆಗೆ ನಡೆದ ‘ಸ್ನೇಹಕೂಟ’ದಲ್ಲಿ ಭಾಗವ­ಹಿಸಿದರು. ಬಳಿಕ ವಿವಿಧ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪ್ರಮುಖ ಮುಖಂಡರ ಜೊತೆಗೆ ಸಮಾಲೋ­ಚಿಸಿದರು. ಈ ವೇಳೆ ಕಾರ್ಯಕರ್ತರನ್ನು ಗೌರವಿಸಿದರು. ನಾಗವಾರದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮ­ದಲ್ಲೂ ಭಾಗಿಯಾದರು. ಇದಾದ ನಂತರ ಪಕ್ಷದ ಕಚೇರಿಯಲ್ಲಿ ಬಹುತೇಕ ಸಮಯ ಕಳೆದ ಅವರು ಕಾರ್ಯಕರ್ತರ ಹಾಗೂ ಜನರ ಕುಶಲ ವಿಚಾರಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್ ಅವರು ಮಧ್ಯಾಹ್ನದ ವರೆಗೆ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದರು. ಮಧ್ಯಾಹ್ನ ಪಕ್ಷದ ಕಾರ್ಯಕರ್ತರ ಜೊತೆಗೆ ಭೋಜನ ಸೇವಿಸಿದರು. ಸಂಜೆ ವಿಶ್ರಾಂತಿಗೆ ಮೊರೆ ಹೋದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಿ.ನಾರಾಯಣ ಸ್ವಾಮಿ ಅವರು ಬೆಳಿಗ್ಗೆ ಸಂಜಯನಗರದಲ್ಲಿರುವ ಮನೆಯಲ್ಲಿ ಸ್ವಲ್ಪ ಕಾಲ ಕಳೆದರು. ಈ ವೇಳೆ ಮನೆಗೆ ಬಂದ ಪಕ್ಷದ ಪ್ರಮುಖರ ಜೊತೆಗೆ ಚರ್ಚಿಸಿದರು. ಇದಾದ ಮೇಲೆ ಕುಟುಂಬದ ಸದಸ್ಯರ ಜೊತೆಗೆ ಬೆಳಗಿನ ಉಪಹಾರ ಸೇವಿಸಿದರು. ಬಳಿಕ ಇಬ್ಬರು ಮೊಮ್ಮಕ್ಕಳ ಜೊತೆಗೆ ಮುದ್ದು ಮಾತು–ಆಟದಲ್ಲಿ ಕಳೆದರು.

ಮಧ್ಯಾಹ್ನ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಅವರು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಜೊತೆಗೆ ಚರ್ಚಿಸಿ­ದರು. ರಾತ್ರಿ ಕುಟುಂಬ ಸದಸ್ಯರ ಜೊತೆಗೆ ಮಡಿಕೇರಿ ಪ್ರವಾಸಕ್ಕೆ ತೆರಳಿ­ದರು. ಅಲ್ಲಿ ಎರಡು ದಿನಗಳ ಕಾಲ ಕಳೆಯ­­ಲಿರುವ ಅವರು ಬಳಿಕ ತಮಿಳು­ನಾಡು ಚುನಾವಣಾ ಪ್ರಚಾರಕ್ಕೆ ತೆರಳಲಿ­ದ್ದಾರೆ.

ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಅವರು ಬೆಳಿಗ್ಗೆ ಪಕ್ಷದ ಚುನಾವಣಾ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಪ್ರಚಾರಕ್ಕೆ ದುಡಿದ ಚುನಾವಣಾ ನಿರ್ವಹಣಾ ಸಮಿತಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನೆನಪಿಗೆ ಸದಸ್ಯರ ಜೊತೆಗೆ ಛಾಯಾಚಿತ್ರವನ್ನೂ ತೆಗೆಸಿಕೊಂಡರು. ಬಳಿಕ ಮನೆಗೆ ವಾಪಸಾದ ಅವರು ವಿಶ್ರಾಂತಿ ಪಡೆದರು. ವಾರಾಂತ್ಯವನ್ನು ಅವರು ಕುಟುಂಬ ಸದಸ್ಯರ ಜೊತೆಗೆ ಕಳೆಯಲು ನಿರ್ಧರಿಸಿದ್ದಾರೆ. ಸೋಮ­ವಾರದಿಂದ ಅವರು ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಚುನಾ­ವಣಾ ಪ್ರಚಾರ ನಡೆಸಲಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಕ್ಷೇತ್ರದ ಗಲ್ಲಿ ಗಲ್ಲಿಗಳಲ್ಲೂ ಸುತ್ತಾಡಿ ಪ್ರಚಾರ ನಡೆಸಿದ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನಂದನ್‌ ನಿಲೇಕಣಿ ಅವರು ಕೊರಮಂಗಲದಲ್ಲಿನ ಮನೆಯಲ್ಲಿ ಇಡೀ ದಿನ ಕುಟುಂಬ ಸದಸ್ಯರ ಜೊತೆಗೆ ಕಾಲ ಕಳೆದರು. ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್‌ ಅವರು ಪತ್ನಿ ತೇಜಸ್ವಿನಿ ಅನಂತ­ಕುಮಾರ್‌ ಅವರೊಂದಿಗೆ ಬೆಳಿಗ್ಗೆ ಲಾಲ್‌­ಬಾಗ್‌ನಲ್ಲಿ ಜಾಗಿಂಗ್‌ ನಡೆಸಿ­ದರು. ಬಳಿಕ ಅವರು ಚುನಾವಣಾ ಪ್ರಚಾರಕ್ಕಾಗಿ ಭೋಪಾಲ್‌ಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.