ADVERTISEMENT

‘ಎಸ್ಐಡಿ’ ಸಿಂಡ್ರೋಮ್‌ನಿಂದ ಮಗು ಸಾವು

ಶಿಶು ಸಾವಿನ ಪ್ರಕರಣ * ಮರಣೋತ್ತರ ಪರೀಕ್ಷೆ ವರದಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 19:43 IST
Last Updated 26 ಜುಲೈ 2016, 19:43 IST

ಬೆಂಗಳೂರು: ಒಂದೂವರೆ ತಿಂಗಳ ಮಗು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ ಸಂಬಂಧ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪೊಲೀಸರ ಕೈಸೇರಿದ್ದು, ಶಿಶುಗಳಲ್ಲಿ ಕಂಡು ಬರುವ ‘ಎಸ್ಐಡಿಎಸ್’ ರೋಗ ಲಕ್ಷಣ ಉಲ್ಬಣ ಗೊಂಡು ಈ ಸಾವು ಸಂಭವಿಸಿರಬಹುದು ಎಂದು ಹೇಳಲಾಗಿದೆ.

ವಿದ್ಯಾರಣ್ಯಪುರ ಸಮೀಪದ ನರಸೀಪುರ ಲೇಔಟ್‌ನಲ್ಲಿ ಜುಲೈ 23ರಂದು ಈ ಘಟನೆ ನಡೆದಿತ್ತು. ಆಗಷ್ಟೇ ಹಾಲುಣಿಸಿ ಮಗುವನ್ನು ಮಲಗಿಸಿದ್ದ ತಾಯಿ, ಸ್ನಾನಕ್ಕೆ ಹೋಗಿ ಬರುವಷ್ಟರಲ್ಲಿ ಮಗು ಕೊನೆಯುಸಿರೆಳೆದಿತ್ತು.

ಈ ವೇಳೆ ಅವರು ಪಕ್ಕದಲ್ಲೇ ಆಟವಾಡುತ್ತಿದ್ದ ನಾಲ್ಕು ವರ್ಷದ ಹಿರಿಯ ಮಗನ ಮೇಲೆ ಅನುಮಾನಪಟ್ಟಿದ್ದರು. ‘ಮಗುವನ್ನು ಎತ್ತಿಕೊಳ್ಳಲು ಹೋಗಿ ತಿಳಿಯದೆ ಮಗನೇ ಏನೋ ಮಾಡಿರಬಹುದು’ ಎಂದು ತಾಯಿ ಅಮರಾವತಿ ಹೇಳಿಕೆ ಕೊಟ್ಟಿದ್ದರು.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ‘ಎಸ್‌ಐಡಿಎಸ್ (ಸಡನ್ ಇನ್‌ಫಾಂಟ್ ಡೆತ್ ಸಿಂಡ್ರೋಮ್) ಎಂಬ ರೋಗ ಲಕ್ಷಣದಿಂದ ಮಗು ಮೃತಪಟ್ಟಿರಬಹುದು. ನವಜಾತ ಶಿಶುಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಈ ಸಿಂಡ್ರೋಮ್, 2 ರಿಂದ 4 ತಿಂಗಳ ಅವಧಿಯಲ್ಲಿ ಉಲ್ಬಣಗೊಳ್ಳುತ್ತದೆ. ಹೀಗಾದಾಗ, ಯಾವುದೇ ಸದ್ದು ಮಾಡದೆ ಮಗು ಮಲಗಿದ್ದ ಸ್ಥಿತಿಯಲ್ಲೇ ಸಾವನ್ನಪ್ಪುತ್ತದೆ’ ಎಂದು ಹೇಳಿದ್ದಾರೆ.

‘ಈ ಶಿಶುವಿನಲ್ಲೂ ಅದೇ ಲಕ್ಷಣಗಳು ಕಂಡು ಬಂದಿವೆ. ಕುತ್ತಿಗೆ ಮೇಲೆ ಕಪ್ಪು ಬಣ್ಣದ ಕಲೆ ಮೂಡಿದೆಯಾದರೂ, ಅದು ಕತ್ತು ಹಿಸುಕಿರುವಂತೆ ಕಾಣಿಸುತ್ತಿಲ್ಲ. ಆದರೂ, ಮರಣೋತ್ತರ ಪರೀಕ್ಷೆ ಹಾಗೂ ಕೆಲ ಮಾದರಿಗಳನ್ನು (ಸ್ಯಾಂಪಲ್ಸ್) ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ವೈದ್ಯರು ತಿಳಿಸಿದ್ದಾಗಿ ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಸದ್ಯ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒಂದು ವಾರದೊಳಗೆ ವೈದ್ಯಕೀಯ ವರದಿ ಕೈಸೇರಲಿದ್ದು, ಅದರ ಸಾರಾಂಶ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು
-ಹಿರಿಯ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.