ADVERTISEMENT

‘ಸಾಂಸ್ಕೃತಿಕ ನೀತಿ’ಗೆ ಮೂಡದ ಒಮ್ಮತ

ಉಪಸಮಿತಿ ಪರಿಶೀಲನೆಗೆ ಒಳಪಡಿಸಲು ತೀರ್ಮಾನ: ಸಚಿವ ಟಿ.ಬಿ.ಜಯಚಂದ್ರ

​ಪ್ರಜಾವಾಣಿ ವಾರ್ತೆ
Published 23 ಮೇ 2016, 19:30 IST
Last Updated 23 ಮೇ 2016, 19:30 IST

ಬೆಂಗಳೂರು: ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ರೂಪಿಸಿರುವ ‘ಸಾಂಸ್ಕೃತಿಕ ನೀತಿ’ ಜಾರಿ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳುವಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆ ವಿಫಲವಾಗಿದೆ.

‘ಸಾಂಸ್ಕೃತಿಕ ನೀತಿಯನ್ನು ಸಂಪುಟ ಉಪಸಮಿತಿಯ ಪರಿಶೀಲನೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ’ ಎಂದು ಸಭೆಯ ಬಳಿಕ  ಕಾನೂನು ಸಚಿವ ಟಿ.ಬಿ.ಜಯಚಂದ್ರ  ಸುದ್ದಿಗಾರರಿಗೆ ತಿಳಿಸಿದರು. ಸಮಿತಿ 2014ರಲ್ಲೇ ‘ಸಾಂಸ್ಕೃತಿಕ ನೀತಿ’ಯನ್ನು ಸರ್ಕಾರಕ್ಕೆ ಒಪ್ಪಿಸಿತ್ತು.  ಇದರ ಜಾರಿ ವಿಚಾರ ಈ ಹಿಂದೆಯೂ ಎರಡು ಬಾರಿ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಿತ್ತು.

ಕರ್ನಾಟಕ ಚಿಲ್ಲರೆ ವಹಿವಾಟು ನೀತಿ–2015, ಕೊಳಗೇರಿ ಪ್ರದೇಶ ಅಭಿವೃದ್ಧಿ ನೀತಿ– 2016, ವಸತಿ ನೀತಿಗಳಿಗೆ ಒಪ್ಪಿಗೆ ನೀಡುವ ಪ್ರಸ್ತಾಪಗಳನ್ನೂ ಮುಂದೂಡಲಾಯಿತು.

ಹಣಕಾಸು ಆಯೋಗದ ಅವಧಿ ವಿಸ್ತರಣೆ:  4ನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು 2017ರ ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಲು ಸಭೆ ಸಮ್ಮತಿ ನೀಡಿತು. ಸಿ.ಜಿ.ಚಿನ್ನಸ್ವಾಮಿ ಅಧ್ಯಕ್ಷರಾಗಿರುವ ಆಯೋಗದ ಅವಧಿ ಇದೇ 30ಕ್ಕೆ ಕೊನೆಗೊಳ್ಳುತ್ತಿತ್ತು.

‘ಸಾರಾಯಿ ಗುತ್ತಿಗೆದಾರರಿಂದ  ಅಬಕಾರಿ ಇಲಾಖೆಗೆ ಬರಬೇಕಿರುವ ಬಾಕಿ ವಸೂಲಿ ಸಲುವಾಗಿ ‘ಕರ ಸಮಾಧಾನ ಯೋಜನೆ –4’ ಅನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಸಾರಾಯಿ ಮಾರಾಟ ಗುತ್ತಿಗೆ ಪಡೆದವರು ಸರ್ಕಾರಕ್ಕೆ ₹ 215 ಕೋಟಿ ಅಸಲು ಪಾವತಿ ಬಾಕಿ ಇರಿಸಿಕೊಂಡಿದ್ದರು. ಬಡ್ಡಿ ಸೇರಿ ಈ ಮೊತ್ತ  ₹ 808 ಕೋಟಿಗೆ ಏರಿದೆ’ ಎಂದು ಸಚಿವರು ತಿಳಿಸಿದರು.

‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿ ಅಂಗನವಾಡಿಗಳಿಗೆ ಆಹಾರ ಪೂರೈಕೆಯ ಹೊಣೆಯನ್ನು ಮೂರು ತಿಂಗಳ ಅವಧಿಗೆ ಜನತಾ ಬಜಾರ್‌ಗಳಿಗೆ ಒಪ್ಪಿಸಲು ತೀರ್ಮಾನಿಸಲಾಗಿದೆ. ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯ ಸಮಿತಿ ಇದರ ಮೇಲುಸ್ತುವಾರಿ ನೋಡಿಕೊಳ್ಳಲಿದೆ’ ಎಂದರು.

ಏರ್‌ಕ್ರಾಫ್ಟ್‌ ನೌಕರರ ಗೃಹನಿರ್ಮಾಣ ಸಹಕಾರ ಸಂಘದ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲು ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ಸಿಂಗಸಂದ್ರ ಗ್ರಾಮದಲ್ಲಿ ಭೂಸ್ವಾಧೀನ ನಡೆಸಲಾಗಿದ್ದ 2 ಎಕರೆ 22 ಗುಂಟೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಪ್ರಸ್ತಾವನೆಯನ್ನು ಸಂಪುಟ ಸಭೆ ತಿರಸ್ಕರಿಸಿದೆ.

ಸಂಪುಟ ಸಭೆಯ ನಿರ್ಣಯಗಳು
* ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ  ಸಂಘದ ವಸತಿ ಶಾಲೆಗಳಿಗೆ ₹ 172.16  ಕೋಟಿ ಮೊತ್ತದಲ್ಲಿ ಆಹಾರ ಪದಾರ್ಥ ಖರೀದಿಗೆ ಒಪ್ಪಿಗೆ
* ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ 40 ನೌಕರರಿಗೆ (2003 ಫೆಬ್ರುವರಿ 17ಕ್ಕೆ ಮುನ್ನ ನಿವೃತ್ತರಾದವರು)  ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯ ಮಂಜೂರು ಮಾಡಲು ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ಕ್ರಮ

* ಜಲಸಂಪನ್ಮೂಲ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಕೆ.ಎಫ್‌. ಹುಲಗುಂದ್‌ ಹಾಗೂ ಸೂಪರಿಂಟೆಂಡೆಂಟ್ ಎಂಜಿನಿಯರ್‌ ಬಿ. ಬಾಲಸುಬ್ರಹ್ಮಣ್ಯ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣ ಸಂಬಂಧ ಇಲಾಖಾ ವಿಚಾರಣೆ ನಡೆಸಲು ಉಪಲೋಕಾಯುಕ್ತರಿಗೆ ವಹಿಸಿದ್ದ ಆದೇಶ ಹಿಂದಕ್ಕೆ ಪಡೆಯಲು ಅನುಮೋದನೆ

* ಕಲಬುರ್ಗಿ ವಿಮಾನ ನಿಲ್ದಾಣದ ಬಾಕಿ ಕಾಮಗಾರಿ ಪೂರ್ಣಗೊಳಿಸಲು ₹ 88.73 ಕೋಟಿ ಮೊತ್ತದ ಟೆಂಡರ್‌ ಕರೆಯಲಾಗಿತ್ತು. ಗುತ್ತಿಗೆದಾರರು (ಸಿ. ಪ್ರೇಮಚಂದ್‌ ರೆಟ್ಟಿ ಅವರ ಎನ್‌ಸಿಸಿ ಲಿಮಿಟೆಡ್‌ ಕಂಪೆನಿ)  ನಿಗದಿತ ಮೊತ್ತಕ್ಕಿಂತ ಶೇ 24.49ರಷ್ಟು ಹೆಚ್ಚು ಮೊತ್ತವನ್ನು ನಮೂದಿಸಿದ್ದರು. ಶೇ 19.9ರಷ್ಟು ಹೆಚ್ಚುವರಿ ಮೊತ್ತ ಪಾವತಿಸಲು ಒಪ್ಪಿಗೆ.  

* ಕೊಳ್ಳೇಗಾಲಕ್ಕೆ ದಿನದ 24 ತಾಸು ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ₹ 54 ಕೋಟಿ ಮಂಜೂರು

* ತಿಪಟೂರು ಒಳಚರಂಡಿ ಕಾಮಗಾರಿಗೆ ₹ 25 ಕೋಟಿ ಮಂಜೂರು

* ಗದಗದಲ್ಲಿ ಕ್ರಿಕೆಟ್‌ ಮೈದಾನ ನಿರ್ಮಾಣ ಸಲುವಾಗಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ಸೇರಿದ 12 ಎಕರೆ ಜಾಗವನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ನೀಡಲು ಒಪ್ಪಿಗೆ

* ಮಂಗಳೂರಿನಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ₹ 12 ಕೋಟಿ ಮಂಜೂರು

* ಮೈಸೂರು ಪೊಲೀಸ್‌ ಪಬ್ಲಿಕ್‌ ಶಾಲೆಯನ್ನು ಸೈನಿಕ ಶಾಲೆ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಮೊದಲ ಹಂತದಲ್ಲಿ ₹ 22.51 ಕೋಟಿ ಮಂಜೂರು

* ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ  ಕೊಣಾಜೆಯಲ್ಲಿ 13 ಎಕರೆ 50 ಸೆಂಟ್ಸ್‌ ಜಾಗದಲ್ಲಿ ₹ 10.21 ಕೋಟಿ ವೆಚ್ಚದಲ್ಲಿ ವಸತಿ ಬಡಾವಣೆ ನಿರ್ಮಿಸಲು ಅನುಮೋದನೆ

ಆಹಾರ ಆಯೋಗ ರಚನೆಗೆ ಒಪ್ಪಿಗೆ
2013ರ ಆಹಾರ ಭದ್ರತಾ ಕಾಯ್ದೆ ಅಡಿ ಆಹಾರ ಆಯೋಗ ರಚಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಅಧ್ಯಕ್ಷರು ಹಾಗೂ ನಾಲ್ವರು ಸದಸ್ಯರು ಆಯೋಗದಲ್ಲಿ ಇರಲಿದ್ದಾರೆ.

‘ಆಹಾರ ಭದ್ರತಾ ಕಾಯ್ದೆಯ ಪ್ರಕಾರ ಪ್ರತಿಯೊಂದು ರಾಜ್ಯವೂ ಆಹಾರ ಭದ್ರತಾ ಆಯೋಗವನ್ನು ರಚಿಸುವುದು ಕಡ್ಡಾಯ. ಆದರೆ, ರಾಜ್ಯದಲ್ಲಿ ಆಯೋಗದ ಬದಲು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆ ಸಮಿತಿಯನ್ನು ಮಾತ್ರ  ರಚಿಸಲಾಗಿತ್ತು.

ಈ ಬಗ್ಗೆ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿತ್ತು. ಹಾಗಾಗಿ  ಆಯೋಗವನ್ನು ರಚಿಸಲಾಗಿದೆ’ ಎಂದು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.