ADVERTISEMENT

3 ಸಿಲಿಂಡರ್‌ ಸ್ಫೋಟ, 21 ಬೈಕ್‌ ಆಹುತಿ

ಡಾಮಿನೋಸ್‌ ಪಿಜ್ಜಾ ಮಳಿಗೆ ಕಟ್ಟಡದಲ್ಲಿ ವೆಲ್ಡಿಂಗ್ ಕೆಲಸದ ವೇಳೆ ಬೆಂಕಿ ಅವಘಡ

​ಪ್ರಜಾವಾಣಿ ವಾರ್ತೆ
Published 6 ಮೇ 2016, 19:42 IST
Last Updated 6 ಮೇ 2016, 19:42 IST
ಡಾಮಿನೋಸ್‌ ಪಿಜ್ಜಾ  ಮಳಿಗೆಯಿದ್ದ ಕಟ್ಟಡಕ್ಕೆ ಹೊತ್ತಿಕೊಂಡಿದ್ದ ಬೆಂಕಿ 
ಡಾಮಿನೋಸ್‌ ಪಿಜ್ಜಾ ಮಳಿಗೆಯಿದ್ದ ಕಟ್ಟಡಕ್ಕೆ ಹೊತ್ತಿಕೊಂಡಿದ್ದ ಬೆಂಕಿ    

ಬೆಂಗಳೂರು: ಮಾರತಹಳ್ಳಿ ಹೊರ  ವರ್ತುಲ ರಸ್ತೆ ಬಳಿಯ ಡಾಮಿನೋಸ್‌ ಪಿಜ್ಜಾ ಮಳಿಗೆಯಿದ್ದ ಕಟ್ಟಡದಲ್ಲಿ ಶುಕ್ರವಾರ ಬೆಂಕಿ ಅವಘಡ ಸಂಭವಿಸಿದೆ.

‘ಘಟನೆಯಲ್ಲಿ ಪಿಜ್ಜಾ ಸೆಂಟರ್‌ ಪೀಠೋಪಕರಣಗಳು ಸಂಪೂರ್ಣ ಸುಟ್ಟಿವೆ. ಜತೆಗೆ ಸೆಂಟರ್‌ ಇದ್ದ ಕಟ್ಟಡದ ಪಾರ್ಕಿಂಗ್‌ ಜಾಗದಲ್ಲಿದ್ದ 21 ಬೈಕ್‌ಗಳು ಬೆಂಕಿಗೆ ಆಹುತಿಯಾಗಿವೆ’ ಎಂದು ಅಗ್ನಿ ಶಾಮಕ ದಳದ ಪೂರ್ವ ವಿಭಾಗದ ಪ್ರಾದೇಶಿಕ ಅಧಿಕಾರಿ ಸಿ. ಗುರುಲಿಂಗಯ್ಯ ತಿಳಿಸಿದ್ದಾರೆ.

ಡಾಮಿನೋಸ್‌ ಪಿಜ್ಜಾ ಸೆಂಟರ್‌ ಇರುವ ಕಟ್ಟಡದ ಪಾರ್ಕಿಂಗ್‌್ ಜಾಗದಲ್ಲಿ ಬೆಳಿಗ್ಗೆ ವೆಲ್ಡಿಂಗ್‌ ಕೆಲಸ ನಡೆಯುತ್ತಿತ್ತು. ಈ ವೇಳೆ ವೆಲ್ಡಿಂಗ್‌ನಿಂದ ಸಿಡಿದ ಬೆಂಕಿ ಕಿಡಿಯು  ಪಿಜ್ಜಾ ಸೆಂಟರ್‌ನಿಂದ ಹೊರಹೋಗುವ ತ್ಯಾಜ್ಯಕ್ಕೆ ತಗುಲಿತ್ತು ಎಂದು ತಿಳಿಸಿದರು.

ಇದರಿಂದ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆಯು ಇಡೀ ಕಟ್ಟಡ ಆವರಿಸಿತು. ಹೊಗೆ ಹೆಚ್ಚಾಗಿದ್ದರಿಂದ ಕಟ್ಟಡದಲ್ಲಿದ್ದ ಕಚೇರಿ ಹಾಗೂ ಪಿಜ್ಜಾ ಸೆಂಟರ್‌ನಲ್ಲಿದ್ದ ಸಿಬ್ಬಂದಿ, ಗ್ರಾಹಕರು  ಹೊರಗೆ ಓಡಿ ಬಂದರು. ತದನಂತರ ಪಿಜ್ಜಾ ಸೆಂಟರ್‌ನ ಒಳಗಿದ್ದ ಮೂರು ಅಡುಗೆ ಅನಿಲ ಸಿಲಿಂಡರ್‌ಗಳು ಸ್ಫೋಟಗೊಂಡು ಹೊರಗೆ ಬಂದು ಬಿದ್ದವು.  ಆಗ ಬೆಂಕಿಯ ಆರ್ಭಟ ಮತ್ತಷ್ಟು ಹೆಚ್ಚಾಯಿತು.

ಈ ವೇಳೆ ಪಾರ್ಕಿಂಗ್‌ ಜಾಗದಲ್ಲಿದ್ದ ಕೆಲ ಬೈಕ್‌ಗಳಿಗೆ ತಗುಲಿದ್ದ ಬೆಂಕಿಯು ಕ್ರಮೇಣ ಹೆಚ್ಚಾಗಿ ಅಕ್ಕ–ಪಕ್ಕದಲ್ಲಿದ್ದ 21 ಬೈಕ್‌ಗಳಿಗೆ ಹೊತ್ತಿಕೊಂಡಿತು. ಆ  ಎಲ್ಲ ಬೈಕ್‌ಗಳು ಧಗ ಧಗನೇ ಉರಿದು ಸುಟ್ಟು ಹೋದವು.

ಫಿಜ್ಜಾ ಸೆಂಟರ್‌ ಇರುವ ಕಟ್ಟಡದಲ್ಲಿ ರಿಯಲ್‌ ಎಸ್ಟೇಟ್‌ ಹಾಗೂ ಇತರೆ ಕಚೇರಿಗಳಿವೆ. ಅವುಗಳ ಸಿಬ್ಬಂದಿ ಪಾರ್ಕಿಂಗ್‌ ಜಾಗದಲ್ಲಿ ಬೈಕ್‌ ನಿಲ್ಲಿಸಿದ್ದರು. ಮಾರತಹಳ್ಳಿ ವರ್ತುಲ ರಸ್ತೆಯಲ್ಲಿ ಶಾಪಿಂಗ್‌ಗೆ ಬಂದವರಲ್ಲಿ ಕೆಲವರು ತಮ್ಮ  ಬೈಕ್‌ ನಿಲ್ಲಿಸಿ ಹೋಗಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ 3 ವಾಹನಗಳಲ್ಲಿ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. 

ಪಿಜ್ಜಾ ಸೆಂಟರ್‌ ಹಾಗೂ ಬೈಕ್‌ ಮಾಲೀಕರಿಂದ ಹೇಳಿಕೆ ಪಡೆದು ನಿಖರ ನಷ್ಟವನ್ನು ಲೆಕ್ಕ ಹಾಕಲಾಗುವುದು ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.