ADVERTISEMENT

ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗಲಿದೆ 22 ಸೇವೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 20:01 IST
Last Updated 3 ಜನವರಿ 2018, 20:01 IST
ಯು.ಟಿ. ಖಾದರ್
ಯು.ಟಿ. ಖಾದರ್   

ಬೆಂಗಳೂರು: ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ಮುಂದೆ ಬಸ್, ರೈಲು, ವಿಮಾನ ಮುಂಗಡ ಟಿಕೆಟ್‌ ಕಾಯ್ದಿರಿಸುವ, ಪ್ಯಾನ್, ಆಧಾರ್‌ಗೆ ಅರ್ಜಿ ಸಲ್ಲಿಸುವ ಸೌಲಭ್ಯ ಲಭ್ಯವಾಗಲಿವೆ.

ಕೇಂದ್ರ ಸರ್ಕಾರದ ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್‌ಸಿ) ಯೋಜನೆ ನೆರವಿನಲ್ಲಿ 22 ಸೇವೆಗಳನ್ನು ಒದಗಿಸುವ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ಬಯೊಮೆಟ್ರಿಕ್‌ ಸೌಲಭ್ಯ ಇರುವ ನ್ಯಾಯಬೆಲೆ ಅಂಗಡಿಗಳು ಇನ್ನು 15 ದಿನಗಳಲ್ಲಿ ಸೇವಾ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸಲಿವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಬ್ರಾಡ್‌ ಬ್ಯಾಂಡ್ ಸೇವೆಯನ್ನು ಸಿಎಸ್‌ಸಿ ಪೂರೈಸಲಿದೆ. ಇದರಿಂದ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಪ್ರತಿ ತಿಂಗಳು ₹15,000 ದಿಂದ ₹20,000 ದವರೆಗೆ ದುಡಿಮೆಗೆ ಅವಕಾಶ ಸಿಗಲಿದೆ ಎಂದರು.

ADVERTISEMENT

₹1.20 ಲಕ್ಷದೊಳಗೆ ಆದಾಯ ಇದ್ದವರಿಗೆ ಅನ್ನಭಾಗ್ಯ: ಜಾತಿ, ಆದಾಯ ಪರಿಗಣಿಸಿ ಆದ್ಯತಾ ವಲಯಕ್ಕೆ ಸೇರಿದವರು ಎಂಬ ಹೆಸರಿನಲ್ಲಿ ಪಡಿತರ ಚೀಟಿ ನೀಡಲಾಗುತ್ತಿದೆ. ಈ ಚೀಟಿ ಪಡೆದವರು ಮಾತ್ರ ಈ ಹಿಂದೆ ಬಿಪಿಎಲ್‌ ಚೀಟಿದಾರರು ಪಡೆಯುತ್ತಿದ್ದ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ ಎಂದು ಖಾದರ್ ವಿವರಿಸಿದರು.

ಮುಖ್ಯಮಂತ್ರಿ ಅನಿಲ ಭಾಗ್ಯ: ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಅನುಷ್ಠಾನ ಕುರಿತು ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಸೂಕ್ತ ವಿವರಣೆ ನೀಡಿ, ಸಮಸ್ಯೆ ಬಗೆಹರಿಸಲಾಗಿದೆ. ಇದೇ 16ರಿಂದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.