ADVERTISEMENT

ಲಾಲ್‌ಬಾಗ್‌ ನೋಡಬೇಕೇ? ಈಗಲೇ ಹೋಗಿ!

ಏರಿಕೆಯಾಗಲಿದೆ ಪಾರ್ಕಿಂಗ್‌ ಶುಲ್ಕ l ಜಿಎಸ್‌ಟಿ ಹೊರೆ ಜನರಿಗೆ ವರ್ಗಾಯಿಸಿದ ತೋಟಗಾರಿಕೆ ಇಲಾಖೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2018, 19:51 IST
Last Updated 8 ಅಕ್ಟೋಬರ್ 2018, 19:51 IST
ಡಬಲ್‌ ರಸ್ತೆ ಬಳಿಯ ಗೇಟ್‌ ಹತ್ತಿರ ವಾಹನಗಳನ್ನು ಪಾರ್ಕಿಂಗ್‌ ಮಾಡಲು ಲಾಲ್‌ಬಾಗ್‌ ಒಳಗಡೆ ಇರುವ ಸ್ಥಳಾವಕಾಶದ ಬಗ್ಗೆ ಮಾಹಿತಿ ನೀಡುವ ಫಲಕ ಅಳವಡಿಸಲಾಗಿದೆ
ಡಬಲ್‌ ರಸ್ತೆ ಬಳಿಯ ಗೇಟ್‌ ಹತ್ತಿರ ವಾಹನಗಳನ್ನು ಪಾರ್ಕಿಂಗ್‌ ಮಾಡಲು ಲಾಲ್‌ಬಾಗ್‌ ಒಳಗಡೆ ಇರುವ ಸ್ಥಳಾವಕಾಶದ ಬಗ್ಗೆ ಮಾಹಿತಿ ನೀಡುವ ಫಲಕ ಅಳವಡಿಸಲಾಗಿದೆ   

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ಗೆ ಹೋಗುವ ಆಸೆಯೇ? ಹಾಗಾದರೆ ಈಗಲೇ ಹೋಗಿ. ಇಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ಪ್ರವೇಶ ಹಾಗೂ ಪಾರ್ಕಿಂಗ್‌ ಶುಲ್ಕ ಏರಿಕೆಯಾಗಲಿದ್ದು ಜೇಬಿಗೆ ಕತ್ತರಿ ಬೀಳಲಿದೆ.

ಪಾಕೆಟ್‌ ಮನಿಯಲ್ಲಿ ಸುತ್ತುವ ಜೋಡಿಗಳು, ಮಾನಸಿಕ ಒತ್ತಡ ತಣಿಸಿಕೊಳ್ಳಲು ಉದ್ಯಾನಕ್ಕೆ ಬರುವವರು, ಕುಟುಂಬದೊಂದಿಗೆ ಭೇಟಿ ನೀಡುವ ಪ್ರವಾಸಿಗರು ಹೆಚ್ಚಿನ ಶುಲ್ಕ ಭರಿಸುವುದು ಅನಿವಾರ್ಯವಾಗಲಿದೆ.

ಹೌದು, ಪ್ರವೇಶ ಶುಲ್ಕ ಹೆಚ್ಚಳಕ್ಕೆ ತೋಟಗಾರಿಕಾ ಇಲಾಖೆ ನಿರ್ಧರಿಸಿದ್ದು, ₹20 ರಿಂದ ₹25ಕ್ಕೆ ಏರಿಕೆಯಾಗಲಿದೆ.ಸುವರ್ಣ ಕರ್ನಾಟಕ ಉದ್ಯಾನಗಳ ಪ್ರತಿಷ್ಠಾನದಿಂದ ಈಗಾಗಲೇ ಶುಲ್ಕ ಏರಿಕೆಗೆ ಹಸಿರು ನಿಶಾನೆ ತೋರಿಸಲಾಗಿದೆ.

ADVERTISEMENT

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾರಣದಿಂದಾಗಿ ಸಾರ್ವಜನಿಕರ ಮೇಲೆ ಈ ಹೊರೆ ಬೀಳಲಿದೆ. ಉದ್ಯಾನಕ್ಕೆ ಭೇಟಿ ನೀಡುವವರ ವಾಹನಗಳ ಪಾರ್ಕಿಂಗ್‌ ಮತ್ತು ಕ್ಯಾಮೆರಾ ಶುಲ್ಕ ಸಹ ಹೆಚ್ಚಳವಾಗಲಿದೆ. ಅಂದರೆ, ಈಗಿರುವ ಶುಲ್ಕಕ್ಕೆ ಶೇ 18ರಷ್ಟು ಜಿಎಸ್‌ಟಿ ಅನ್ವಯವಾಗಲಿದೆ.

‘ಪ್ರಸ್ತುತ ಇರುವ ಪ್ರವೇಶ ಮತ್ತು ಪಾರ್ಕಿಂಗ್‌ ಶುಲ್ಕ ಸಂಗ್ರಹದ ಟೆಂಡರ್‌ನ ಅವಧಿ ಶೀಘ್ರವೇ ಕೊನೆಯಾಗಲಿದೆ. ಹೊಸ ಟೆಂಡರ್‌ ಪ್ರಕ್ರಿಯೆ ಅಂತಿಮವಾದ ನಂತರ, ಶುಲ್ಕಗಳಲ್ಲಿ ಏರಿಕೆಯಾಗಲಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್‌ ತಿಳಿಸಿದರು.

‘ಪ್ರತಿನಿತ್ಯ ಉದ್ಯಾನಕ್ಕೆ ಅಂದಾಜು ಐದು ಸಾವಿರ ಜನ ಭೇಟಿ ನೀಡುತ್ತಾರೆ. ವಾರಾಂತ್ಯಗಳಲ್ಲಿ ದಿನನಿತ್ಯಕ್ಕಿಂತ ಸುಮಾರು ಮೂರು ಸಾವಿರದಷ್ಟು ಹೆಚ್ಚಿನ ಜನ ಬರುತ್ತಾರೆ ಹಾಗೂ ವಿಶೇಷ ರಜಾ ದಿನಗಳಲ್ಲಿ 10,000 ದಿಂದ 15,000 ಜನ ಭೇಟಿ ನೀಡುತ್ತಾರೆ. ‍ಪ್ರವೇಶ ಶುಲ್ಕದಲ್ಲಿ ₹5 ಹೆಚ್ಚಳ ಮಾಡುವುದರಿಂದ ಗ್ರಾಹಕರಿಗೆ ಹೊರೆಯಾಗುವುದಿಲ್ಲ’ ಎಂದೂ ಅವರು ಹೇಳಿದರು.

‘240 ಎಕರೆ ಉದ್ಯಾನದ ನಿರ್ವಹಣೆ ಭಾರವಾಗಿರುವ ಕಾರಣ ಜಿಎಸ್‌ಟಿ ಹೊರೆಯನ್ನು ಪ್ರವಾಸಿಗಳಿಗೆ ವರ್ಗಾಯಿಸಲು ಕಾರಣ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಜಿಎಸ್‌ಟಿ ವಿನಾಯಿತಿ ನೀಡುವ ಕುರಿತು ತೆರಿಗೆ ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದೇವೆ. ಅವರಿಂದ ವಿನಾಯಿತಿ ಸಿಕ್ಕರೆ ಸಾರ್ವಜನಿಕರಿಗೆ ಹೆಚ್ಚುವರಿ ಹೊರೆ ಬೀಳುವುದಿಲ್ಲ. ಇಲ್ಲದಿದ್ದರೆ ಅವರೇ ಜಿಎಸ್‌ಟಿ ಭಾರವನ್ನು ಹೊರುವುದು ಅನಿವಾರ್ಯ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್‌ ತಿಳಿಸಿದರು.

ಉದ್ಯಾನಕ್ಕೆ ಭೇಟಿ ನೀಡಿದ ಜಯಶ್ರೀ, ‘ನಮ್ಮಂತಹ ಮಧ್ಯಮ ಮತ್ತು ಸಾಮಾನ್ಯ ವರ್ಗವರಿಗೆ ಈ ಏರಿಕೆ ಭಾರವಾಗಲಿದೆ. ಜಿಎಸ್‌ಟಿ ವಿನಾಯಿತಿಗೆ ಕ್ರಮಕೈಗೊಳ್ಳಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶುಲ್ಕ: ಯಾವುದಕ್ಕೆ, ಎಷ್ಟು?

ಪ್ರವೇಶ ದರ;ಕ್ಯಾಮೆರಾ;ದ್ವಿಚಕ್ರ;ನಾಲ್ಕು ಚಕ್ರ;ಬಸ್ಸು;ವ್ಯಾನ್‌

ಸದ್ಯದ ದರ(ರೂಪಾಯಿಗಳಲ್ಲಿ);20;50;20;25;100;50

ಏರಿಕೆ ದರ(ರೂಪಾಯಿಗಳಲ್ಲಿ);25;60;25;30;120;60

ಬಂದಿದೆ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ

ಲಾಲ್‍ಬಾಗ್‍ನಲ್ಲಿ ವಾಹನಗಳ ನಿಲುಗಡೆಗೆ ಬಾಷ್‌ ಕಂಪನಿ ಡಿಜಿಟಲ್ ಸ್ಪರ್ಶ ನೀಡಿದ್ದು, ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯನ್ನು ನಿರ್ಮಾಣ ಮಾಡಿದೆ.‌

ಏನಿದು ಸ್ಮಾರ್ಟ್‌ ಪಾರ್ಕಿಂಗ್: ವಾಹನ ಸವಾರರು ಸ್ಮಾರ್ಟ್‌ ಪಾರ್ಕಿಂಗ್‌ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆಯೇ ಅಲ್ಲಿರುವ ಸೆನ್ಸಾರ್‌ಗಳ ನೆರವಿನಿಂದ ಟಿಕೆಟ್‌ ನೀಡುವ ಯಂತ್ರದಿಂದ ವಾಹನದ ಬಗೆ, ಪ್ರವೇಶದ ದಿನಾಂಕ, ವಾಹನದ ಐಡಿ, ಸಮಯದ ಬಗೆಗಿನ ಮಾಹಿತಿಯುಳ್ಳ ಟಿಕೆಟ್‌ ರಶೀದಿ ಬರುತ್ತದೆ.

ಪಾರ್ಕಿಂಗ್‌ ಪ್ರದೇಶದಲ್ಲಿ ಎರಡು, ಮೂರು, ನಾಲ್ಕು ಹಾಗೂ ಆರು ಚಕ್ರಗಳ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸುತ್ತಮುತ್ತಲಿನ ಪರಿಸರ ಹಸಿರಿನಿಂದ ಕೂಡಿದ್ದು, ಉತ್ತಮ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಉದ್ಯಾನದಿಂದ ನಿರ್ಗಮಿಸುವಾಗ ಶುಲ್ಕ ಪಾವತಿ ಮಾಡಬಹುದಾಗಿದೆ.

ಡಿಜಿಟಲ್‌ ಫಲಕ: ಸ್ಮಾರ್ಟ್‌ ಪಾರ್ಕಿಂಗ್‌ ಪ್ರದೇಶದಲ್ಲಿ ಇನ್ನೂ ಎಷ್ಟು ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶ ಇದೆ ಎನ್ನುವ ಮಾಹಿತಿ ನೀಡುವ ಡಿಜಿಟಲ್‌ ಫಲಕವನ್ನು ಡಬಲ್‌ ರಸ್ತೆ ಬಳಿಯ ಲಾಲ್‌ಬಾಗ್‌ ಗೇಟ್‌ ಹತ್ತಿರ ಅಳವಡಿಸಲಾಗಿದೆ.

ಲಾಲ್‍ಬಾಗ್‍ ಅಭಿವೃದ್ಧಿಗಾಗಿ ‘ಕ್ಲೀನ್ ಆ್ಯಂಡ್‌ ಗ್ರೀನ್’ ಅಭಿಯಾನವನ್ನು ಆಯೋಜಿಸಿತ್ತು. ಸದ್ಯ ಇಂಧನ ಉಳಿತಾಯಕ್ಕೆ ಸೌರ ಫಲಕಗಳು ಹಾಗೂ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ.

‘ಹಸಿ ಕಸಕ್ಕಾಗಿ ಹಸಿರು, ಒಣ ಕಸಕ್ಕಾಗಿ ನೀಲಿ ಬಣ್ಣದ 200 ಕಸ ಸಂಗ್ರಹದ ಡಬ್ಬಿಗಳನ್ನು ಬಾಷ್‌ ನೀಡಿದೆ. ಸದ್ಯ 75 ಡಬ್ಬಿಗಳನ್ನು ವಿವಿಧೆಡೆ ಅಳವಡಿಸಲಾಗಿದೆ’ ಎಂದು ಜಗದೀಶ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.