ADVERTISEMENT

ಆಸ್ತಿ ಒತ್ತುವರಿ: ಪೌರಾಯುಕ್ತ ನಿಷ್ಕ್ರಿಯ

​ಪ್ರಜಾವಾಣಿ ವಾರ್ತೆ
Published 25 ಮೇ 2016, 11:35 IST
Last Updated 25 ಮೇ 2016, 11:35 IST
ಗಂಗಾವತಿ ಮಹಾವೀರ ವೃತ್ತದಲ್ಲಿ ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ನಗರಸಭೆಯ ನಿವೇಶನ ಒತ್ತುವರಿಯಾಗಿ ತಲೆ ಎತ್ತುತ್ತಿರುವ               ಅನಧಿಕೃತ ಕಟ್ಟಡ
ಗಂಗಾವತಿ ಮಹಾವೀರ ವೃತ್ತದಲ್ಲಿ ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ನಗರಸಭೆಯ ನಿವೇಶನ ಒತ್ತುವರಿಯಾಗಿ ತಲೆ ಎತ್ತುತ್ತಿರುವ ಅನಧಿಕೃತ ಕಟ್ಟಡ   

ಗಂಗಾವತಿ: ನಗರಸಭೆಗೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆಯ ಆಸ್ತಿ ನಕಲಿ ದಾಖಲೆ ಸೃಷ್ಟಿಸಿ ಕೆಲ ವ್ಯಕ್ತಿಗಳು ಒತ್ತುವರಿ ಮಾಡಿದ್ದರೂ ಪೌರಾಯುಕ್ತರು ಯಾವುದೇ ಕಾನೂನು ಕ್ರಮಕ್ಕೆ ಮುಂದಾಗಿಲ್ಲ. ಈ ವಿಷಯ ಬುಧವಾರ ನಡೆಯುವ ಸಾಮಾನ್ಯ ಸಭೆಯಲ್ಲಿ ಚರ್ಚೆ ಆಗಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.

‘ಸಣ್ಣಹುಲಿಗೆಮ್ಮ ಅಧ್ಯಕ್ಷೆಯಾದ ಬಳಿಕ  ಮೊದಲ ಬಾರಿ  ಸಾಮಾನ್ಯಸಭೆ ನಡೆಯಲಿದ್ದು, ನಗರಾದ್ಯಂತ ಒತ್ತುವರಿಯಾದ ಆಸ್ತಿ ಉಳಿಸಿಕೊಳ್ಳುವ ಸಂಬಂಧ ಗಂಭೀರ ಚರ್ಚೆಯಾಗಬೇಕು’ ಎಂದು ಕಾರ್ಮಿಕ ಮುಖಂಡ ಜಿ. ನಾಗರಾಜ ಆಗ್ರಹಿಸಿದ್ದಾರೆ.

ಉದ್ಯಾನಕ್ಕೆ ಹಾಗೂ ವಿವಿಧ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸುವ ಮೂಲಕ ನಗರಸಭೆಯ ಕೆಲ ಸದಸ್ಯರು, ಬಲಾಢ್ಯರು ಕಬಳಿಸಿರುವುದು ಆಡಳಿತ ಮಂಡಳಿಯ ಎರಡು ಗುಂಪುಗಳ ಮಧ್ಯೆ ಘರ್ಷಣೆಗೆ  ಕಾರಣವಾಗಿದೆ. ಇದು ಪೌರಾಯುಕ್ತ ಕಾನೂನು ಕ್ರಮ ಕೈಗೊಳ್ಳದಿರಲು ಕಾರಣ ಎನ್ನಲಾಗುತ್ತಿದೆ.

ನಗರಸಭೆ  ಸದಸ್ಯ ರಾಘವೇಂದ್ರ ಶೆಟ್ಟಿ, ನಕಲಿ ದಾಖಲೆ ಸೃಷ್ಟಿಸಿ ನಗರಸಭೆಯ ಆಸ್ತಿಯನ್ನು ಹೇಗೆ ಕಬಳಿಸಲಾಗಿದೆ ಎಂಬುವುದರ ಬಗ್ಗೆ ಇತ್ತೀಚೆಗಷ್ಟೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.

ಎಲ್ಲೆಲ್ಲಿ ಕಬಳಿಕೆ:  ‘ಮಹಾವೀರ ವೃತ್ತದ ವಿಎಎಂ ಫುಡ್ ಬಜಾರ್ ಪಕ್ಕದಲ್ಲಿ ಸುಮಾರು ₹1 ಕೋಟಿ ಮೌಲ್ಯದ 60X80 ಅಡಿ ಅಳತೆಯ ನಿವೇಶನದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದೆ. ಪ್ರತಾಪ್‌ಸಿಂಗ್ ವೃತ್ತದಲ್ಲಿ ಐದು ದಶಕಗಳಿಂದ ಇದ್ದ ಆಕ್ಟ್ರಾಯ್ ಗೇಟ್ ಧ್ವಂಸಗೊಳಿಸಿದ ವ್ಯಕ್ತಿಗಳು, ಎರಡು ಕೋಟಿ ಮೌಲ್ಯದ 10ಗುಂಟೆ ನಿವೇಶನ ಕೊಳ್ಳೆ ಹೊಡೆಯಲು ಯತ್ನಿಸಿದ್ದಾರೆ’ ಎಂದು ತಿಳಿಸಲಾಗಿದೆ.

‘ಸರೋಜಾನಗರದ 3ನೇ ಕ್ರಾಸ್‌ನಲ್ಲಿರುವ ಮಹಿಳಾ ಶೌಚಾಲಯದ ಪಕ್ಕದಲ್ಲಿ ಸುಮಾರು₹20 ಲಕ್ಷ ಮೌಲ್ಯದ 60X100 ಅಡಿ ಅಳತೆಯ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ವ್ಯಕ್ತಿಯೊಬ್ಬರು ಕಬಳಿಸಲು ಯತ್ನಿಸಿದ್ದಾರೆ. ಹೊಸಳ್ಳಿ ರಸ್ತೆಯ ಕನ್ನಡ ಜಾಗತಿ ಭವನದ ಮುಂದಿರುವ ನಗರಸಭೆಯ ಉದ್ಯಾನವನ ಜಾಗ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗುತ್ತಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಪಾಡಗುತ್ತಿ ಲೇಔಟ್‌ನಲ್ಲಿ ಸಾರ್ವಜನಿಕ ರಸ್ತೆ ಕಬಳಿಸಿ ಉದ್ಯಮ ಘಟಕ ತಲೆ ಎತ್ತಿದೆ. ಎಚ್ಎಂಎಸ್ ಚಿತ್ರಮಂದಿರ ಮುಂದೆ ರಸ್ತೆ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ.
ದುರುಗಮ್ಮ ನಾಲೆಯ ದಂಡೆಯಲ್ಲಿ ಕಟ್ಟಡ ನಿರ್ಮಾಣವಾಗಿದೆ. ಬನ್ನಿಗಿಡದ ಕ್ಯಾಂಪಿನಲ್ಲಿ ಸಾರ್ವಜನಿಕ ಉದ್ಯಾನ ಒತ್ತುವರಿಗೆ ಯತ್ನಿಸಲಾಗಿದೆ.

ಟೀಚರ್ಸ್ ಕಾಲೊನಿಯ ಸಾರ್ವಜನಿಕ ಉದ್ಯಾನ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಲಾಗಿದೆ.  ಇದಕ್ಕೆಲ್ಲ ಕೆಲ ಸದಸ್ಯರೇ ಬೆಂಗಾವಲಾಗಿ ನಿಂತಿದ್ದಾರೆ’ ಎಂಬ ಆರೋಪ ಕೇಳಿ ಬರುತ್ತಿವೆ.  ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ವಿವಿಧ ಸಂಘಟನೆ, ಆರ್‌ಟಿಐ ಕಾರ್ಯಕರ್ತರು ಸಾಕಷ್ಟು ದೂರು ನೀಡಿದರೂ ನಗರಸಭೆ ಕ್ರಮಕ್ಕೆ ಮುಂದಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ಪೆಯಲು ಯತ್ನಿಸಿದರೆ ಪೌರಾಯುಕ್ತ ಸಿ.ಆರ್‌. ರಂಗಸ್ವಾಮಿ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.