ADVERTISEMENT

ಏರುತ್ತಿರುವ ಬಿಸಿಲು; ಶುರುವಾದ ನೀರಿನ ಚಿಂತೆ

ಆರು ತಿಂಗಳಾದರೂ ಆರಂಭವಾಗದ ಕೆರೆ, ಬ್ಯಾರೇಜ್ ದುರಸ್ತಿ ಕಾರ್ಯ

ಚಂದ್ರಕಾಂತ ಮಸಾನಿ
Published 2 ಮಾರ್ಚ್ 2017, 7:36 IST
Last Updated 2 ಮಾರ್ಚ್ 2017, 7:36 IST
ಬೀದರ್‌ನ ಗೋಲೆಖಾನಾದಲ್ಲಿ ನಲ್ಲಿಯಿಂದ ನೀರು ಪಡೆಯುತ್ತಿರುವುದು. -ಚಿತ್ರ: ಗುರುಸಿದ್ದಪ್ಪ ಸಿರ್ಸಿ
ಬೀದರ್‌ನ ಗೋಲೆಖಾನಾದಲ್ಲಿ ನಲ್ಲಿಯಿಂದ ನೀರು ಪಡೆಯುತ್ತಿರುವುದು. -ಚಿತ್ರ: ಗುರುಸಿದ್ದಪ್ಪ ಸಿರ್ಸಿ   

ಬೀದರ್: ಶಿವರಾತ್ರಿಯ ನಂತರ ಬಿಸಿಲು ನಿಧಾನವಾಗಿ ಗರಿ ಬಿಚ್ಚಿಕೊಳ್ಳತೊಡಗಿದೆ. ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಜಿಲ್ಲೆಯ ಜನರಿಗೆ ಈವರೆಗೂ ಸುಲಭವಾಗಿ ಕುಡಿಯುವ ನೀರು ಲಭ್ಯವಾಗಿದೆ. ಆದರೆ ಇದೀಗ ಬೇಸಿಗೆ ಆರಂಭದಲ್ಲೇ  ಜನರಲ್ಲಿ ಕುಡಿಯುವ ನೀರಿಗಾಗಿ ಆತಂಕ ಶುರುವಾಗಿದೆ.

ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಅತಿವೃಷ್ಟಿಯಿಂದಾಗಿ ಕೆರೆ, ಕಟ್ಟೆಗಳು ಒಡೆದು ಬರಿದಾಗಿ ಹಾಗೂ ತೆರೆದ ಬಾವಿಗಳಲ್ಲಿ ಮಣ್ಣು ಕುಸಿದು ಆರು ತಿಂಗಳು ಕಳೆದಿವೆ. ಆದರೂ ದುರಸ್ತಿ ಕಾರ್ಯ ಆರಂಭವಾಗಿಲ್ಲ.

ಕೆಲ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿನ ತಾಂತ್ರಿಕ ಸಮಸ್ಯೆಗಳಿಗೆ ಅಧಿಕಾರಿಗಳು ಪರಿಹಾರ ಕಂಡುಕೊಂಡಿಲ್ಲ. ಔರಾದ್‌ ತಾಲ್ಲೂಕಿನ ನಂದ್ಯಾಳ ಗ್ರಾಮದಲ್ಲಿ ಆಗಲೇ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಬೀದರ್‌ ನಗರದಲ್ಲಿ ಒಳ ಚರಂಡಿ ಹಾಗೂ ನಿರಂತರ ನೀರು ಪೂರೈಕೆ ಯೋಜನೆಯ ಪೈಪ್‌ಲೈನ್‌ ಅಳವಡಿಸಲು ಅಲ್ಲಲ್ಲಿ ಅಗೆದಿರುವ ಕಾರಣ ನಗರಸಭೆಯ ಹಳೆಯ ಪೈಪ್‌ಲೈನ್‌ಗಳು ಕಿತ್ತುಹೋಗಿ ಮನೆಗಳ ನಲ್ಲಿಗಳಿಗೆ ಬರುವ ನೀರು ಸ್ಥಗಿತಗೊಂಡಿದೆ.

ಕೊಳವೆಬಾವಿಗಳಲ್ಲಿ ಸವಳು ನೀರು ಇರುವ ಕಾರಣ ಓಲ್ಡ್‌ಸಿಟಿಯ ನಿವಾಸಿಗಳು ಬೆಳಿಗ್ಗೆ ಏಳು ಗಂಟೆಗೆ ಮಿನಿವಾಟರ್‌ ಟ್ಯಾಂಕ್‌ ಮುಂದೆ  ಸರತಿಸಾಲಿನಲ್ಲಿ  ನಿಂತು ನೀರು ತುಂಬಿಕೊಂಡು ಹೋಗುತ್ತಿದ್ದಾರೆ.

ನಿರಂತರ ಕುಡಿಯುವ ನೀರು ಸರಬರಾಜು ಆಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ನಡುವೆ ತೆಲಂಗಾಣದ ಜಹೀರಾಬಾದ್‌ನಿಂದ ಅನೇಕ ಕೊಳವೆಬಾವಿ ಕೊರೆಯುವ ವಾಹನಗಳು ನಗರಕ್ಕೆ ಬಂದಿವೆ. ನಗರದ ಬಡಾವಣೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸುತ್ತಿರುವ ಸದ್ದು ಕೇಳಿ ಬರುತ್ತಿದೆ.

ಕಾರಂಜಾ ಜಲಾಶಯ ತುಂಬಿದೆ. ಈ ಜಲಾಶಯದಿಂದ ಬೀದರ್, ಹುಮನಾಬಾದ್ ಪಟ್ಟಣ, ಹುಮನಾಬಾದ್ ತಾಲ್ಲೂಕಿನ ಚಿಟಗುಪ್ಪ ಹಾಗೂ 14 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕೆರೆಗಳು ಒಡೆದಿರುವ ಗ್ರಾಮಗಳಲ್ಲಿ ಮಾತ್ರ ನೀರಿನ ಸಮಸ್ಯೆ ಆರಂಭವಾಗಿದೆ. ಕಳೆದ ವರ್ಷದ ಬೇಸಿಗೆಯಲ್ಲಿ 140 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗಿತ್ತು. ಪ್ರಸ್ತುತ ಅಂತಹ ಸ್ಥಿತಿ ನಿರ್ಮಾಣವಾಗಿಲ್ಲ.

ಎರಡು ವರ್ಷಗಳಲ್ಲಿ ಗ್ರಾಮಗಳು ಎದುರಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬಹುಗ್ರಾಮ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಹುಮನಾಬಾದ್‌ ತಾಲ್ಲೂಕಿನ 13 ಹಳ್ಳಿಗಳಿಗೆ ಬಹುಗ್ರಾಮ ಯೋಜನೆಯಿಂದ ಅನುಕೂಲವಾಗಲಿದೆ.

ಕೊಹಿನೂರಿನಲ್ಲೂ ಬಹುಗ್ರಾಮ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಇದರಿಂದ 20 ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಆರ್‌.ಸೆಲ್ವಮಣಿ.

ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿರುವ ಜನವಾಡ ಬ್ಯಾರೇಜ್ ದುರಸ್ತಿಗೆ ಅಗತ್ಯ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಬ್ಯಾರೇಜ್‌ ದುರಸ್ತಿ ಕಾಮಗಾರಿಯನ್ನು ಯಾವ ಏಜೆನ್ಸಿಗೆ ಕೊಡಬೇಕು ಎನ್ನುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳುತ್ತಾರೆ.

ಭಾಲ್ಕಿ ತಾಲ್ಲೂಕಿನ ನಿಟ್ಟೂರಿನಲ್ಲಿ ಐದು ಗ್ರಾಮಗಳಿಗೆ ಅನುಕೂಲವಾಗುವಂತೆ ಬಹುಗ್ರಾಮ ಯೋಜನೆಯನ್ನು ಜಾರಿಗೊಳಿಸಲಾಗುವುದು. ಮಾರ್ಚ್ 17ರಿಂದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಕುಡಿಯುವ ನೀರು ಪೂರೈಕೆಗೆ ಹಣದ ಕೊರತೆ ಇಲ್ಲ.

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹ 40 ಲಕ್ಷ ಕಾಯ್ದಿರಿಸಲಾಗಿದೆ ಎಂದು ಹೇಳುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು.

ಸಣ್ಣ ನೀರಾವರಿ ಇಲಾಖೆಯು ಜಿಲ್ಲೆಯ ನಾಲ್ಕು ಕೆರೆಗಳ ದುರಸ್ತಿಗೆ ₹ 7 ಕೋಟಿ ಮಂಜೂರು ಮಾಡಿದೆ. ತಾಂತ್ರಿಕ ಕಾರಣಗಳಿಂದಾಗಿ ಕಳೆದ ವರ್ಷ ಎರಡು ಬ್ಯಾರೇಜ್‌ಗಳಿಗೆ ಗೇಟ್‌ ಅಳವಡಿಸಿರಲಿಲ್ಲ. ಜನವಾಡ ಸಮೀಪದ ಬ್ಯಾರೇಜ್‌ ಸೇರಿ ಒಟ್ಟು ಮೂರು ಬ್ಯಾರೇಜ್‌ ದುರಸ್ತಿ ಕಾರ್ಯವನ್ನು ಆದಷ್ಟು ಬೇಗ ಶುರು ಮಾಡಲಾಗುವುದು ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ.

*
ಕಳೆದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡ ಗ್ರಾಮಗಳ ಪಟ್ಟಿ ಮಾಡಿ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಎಚ್‌.ಆರ್.ಮಹಾದೇವ,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT