ADVERTISEMENT

ದೇಸಿ ತಳಿ ಜಾನುವಾರು ಸಂರಕ್ಷಣೆಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 6:35 IST
Last Updated 22 ಡಿಸೆಂಬರ್ 2017, 6:35 IST

ಕಮಠಾಣಾ (ಜನವಾಡ): ‘ಕೇಂದ್ರ ಸರ್ಕಾರವು ದೇಶಿ ತಳಿ ಜಾನುವಾರು ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಿದೆ. ಈ ದಿಸೆಯಲ್ಲಿ ಹಲವು ಕಾರ್ಯಕ್ರಮಗಳನ್ನೂ ಜಾರಿಗೊಳಿಸಿದೆ’ ಎಂದು ಕೇಂದ್ರ ಪಶು ಸಂಗೋಪನಾ ಆಯುಕ್ತ ಡಾ. ಸುರೇಶ ಎನ್‌. ಹೊನ್ನಪ್ಪಗೋಳ್‌ ತಿಳಿಸಿದರು.

ಬೀದರ್‌ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಆರಂಭವಾದ ಎರಡು ದಿನಗಳ 26ನೇ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಪ್ರಾಣಿ ಜೀವಕ್ರಿಯೆ ಶಾಸ್ತ್ರಜ್ಞರ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ಆಧುನಿಕ ಸಂತಾನೋತ್ಪತ್ತಿ ತಂತ್ರಜ್ಞಾನಗಳ ಬಳಕೆ ಮೂಲಕ ದೇಶಿ ತಳಿ ಜಾನುವಾರುಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.‘ಜಾನುವಾರುಗಳಿಂದ ಮಿಥೇನ್ ಅನಿಲದ ಬಿಡುಗಡೆ ಪ್ರಮಾಣ ತಗ್ಗಿಸುವ ವಿನೂತನ ಕ್ರಮಗಳ ಸಂಶೋಧನೆಗೆ ವಿಜ್ಞಾನಿಗಳು ಪ್ರಾತಿನಿಧ್ಯ ಕೊಡಬೇಕು’ ಎಂದು ತಿಳಿಸಿದರು.

ADVERTISEMENT

‘ಜಾನುವಾರು ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗೆಗೆ ಚರ್ಚಿಸಲು ರಾಷ್ಟ್ರೀಯ ವಿಚಾರ ಸಂಕಿರಣಗಳನ್ನೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸಬೇಕು. ಆ ಮೂಲಕ ಯುವ ಪ್ರಾಧ್ಯಾಪಕರನ್ನು ಪ್ರೋತ್ಸಾಹಿಸಬೇಕು’ ಎಂದು ಸಲಹೆ ಮಾಡಿದರು.

ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸಹಾಯಕ ಮಹಾನಿರ್ದೇಶಕ ಡಾ. ಬಿ.ಎಸ್. ಪ್ರಕಾಶ ಮಾತನಾಡಿ, ‘ಜಾನುವಾರು ಸಾಕಾಣಿಕೆಯು ರೈತರ ಆದಾಯ ದ್ವಿಗುಣಗೊಳಿಸುತ್ತದೆ. ಹೀಗಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಪ್ರತಿಯೊಬ್ಬರು ಜಾನುವಾರು ಸಾಕಾಣಿಕೆಗೆ ಮುಂದಾಗಬೇಕು’ ಎಂದು ತಿಳಿಸಿದರು.

‘ಪಶು ಸಂಗೋಪನೆ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ವಿಪುಲ ಅವಕಾಶಗಳು ಇವೆ. ಪಶು ವೈದ್ಯಕೀಯ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಸಂಶೋಧನೆಗೆ ಪ್ರಯತ್ನಿಸಬೇಕು’ ಎಂದು ಹೇಳಿದರು.

ಡಾ. ಎಂ.ಎಲ್. ಮದನ್‌ ಮಾತನಾಡಿ, ‘ಜಾನುವಾರು ಸಂತಾನೋತ್ಪತ್ತಿಗೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ಯುವ ವಿಜ್ಞಾನಿಗಳು ವಿನೂತನ ಮಾದರಿಯ ಸಂಶೋಧನಾ ಯೋಜನೆಗಳನ್ನು ಹಮ್ಮಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಭಾರತೀಯ ಪಶು ವೈದ್ಯಕೀಯ ಜೀವಕ್ರಿಯೆ ಶಾಸ್ತ್ರಜ್ಞರ ಸಂಘದ ಅಧ್ಯಕ್ಷ ಡಾ. ವಿ.ಎಚ್. ರಾವ್ ಮಾತನಾಡಿದರು. ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಎನ್.ಎ.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ವಿಶ್ವವಿದ್ಯಾಲಯದ ಕುಲಸಚಿವ ಡಾ. ಶಿವಾನಂದಮೂರ್ತಿ, ವ್ಯವಸ್ಥಾಪಕ ಮಂಡಳಿ ಸದಸ್ಯರಾದ ನಾಗಭೂಷಣ ಕಮಠಾಣೆ, ಮಲ್ಲಿಕಾರ್ಜುನ ಬಿರಾದಾರ, ಲುಂಬಿಣಿ ಗೌತಮ ಉಪಸ್ಥಿತರಿದ್ದರು.ಡಾ. ಶ್ರೀಕಾಂತ ಕುಲಕರ್ಣಿ ಸ್ವಾಗತಿಸಿದರು. ಡಾ. ವಿವೇಕ ಕಸರಾಳಿಕರ ನಿರೂಪಿಸಿದರು. ಡಾ. ಚನ್ನಪ್ಪಗೌಡ ಬಿರಾದಾರ ವಂದಿಸಿದರು.

ಭಾರತೀಯ ಪಶು ವೈದ್ಯಕೀಯ ಜೀವಕ್ರಿಯೆ ಶಾಸ್ತ್ರಜ್ಞರ ಸಂಘ, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್‌ನ ಪಶುವೈದ್ಯಕೀಯ ಮಹಾವಿದ್ಯಾಲಯ ಹಾಗೂ ಶರೀರಕ್ರಿಯೆ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.