ADVERTISEMENT

ಮಾಧವನಗರ: ಸ್ಮಶಾನದ ದುರ್ಗಮ ದಾರಿ

ಅಂತ್ಯಸಂಸ್ಕಾರಕ್ಕೂ ಪ್ರಯಾಸ ಪಡಬೇಕಾದ ಸ್ಥಿತಿ, ಮನವಿ ಸಲ್ಲಿಸಿದರೂ ಸಿಗದ ಸ್ಪಂದನೆ

ಚಂದ್ರಕಾಂತ ಮಸಾನಿ
Published 16 ಜನವರಿ 2017, 8:26 IST
Last Updated 16 ಜನವರಿ 2017, 8:26 IST
ಮಾಧವನಗರ: ಸ್ಮಶಾನದ ದುರ್ಗಮ ದಾರಿ
ಮಾಧವನಗರ: ಸ್ಮಶಾನದ ದುರ್ಗಮ ದಾರಿ   

ಬೀದರ್‌: ನಗರದ ಮಾಧವ ನಗರದ ಲ್ಲಿರುವ ಸಕಲ ಸಮುದಾಯಗಳ ಸ್ಮಶಾನ ದಲ್ಲಿ ಅಗತ್ಯ ಮೂಲ ಸೌಕರ್ಯ ಗಳಿಲ್ಲದ ಕಾರಣ ಶವ ಸಂಸ್ಕಾರಕ್ಕೆ ಬರುವ ಜನರು ತೊಂದರೆ ಅನುಭವಿಸಬೇಕಾಗಿದೆ. ಬೆಟ್ಟದ ಇಳಿಜಾರು ಪ್ರದೇಶದಲ್ಲಿ ಸ್ಮಶಾನ ಇರುವ ಕಾರಣ ಶವ ಹೊತ್ತು ತರುವುದೇ  ಕಷ್ಟಕರವಾಗಿದೆ.

ಮಾಧವನಗರ ಮುಕ್ತಿಧಾಮದಲ್ಲಿ ಎರಡು ಧರ್ಮಗಳ ಸ್ಮಶಾನಗಳಿವೆ. ದಾರಿಯ ಎಡಕ್ಕೆ ಕ್ರೈಸ್ತರ ಸ್ಮಶಾನ, ಬಲಕ್ಕೆ ಹಿಂದೂಗಳ ಸ್ಮಶಾನ ಇದೆ. ಹಿಂದೂಗಳ ಸ್ಮಶಾನದಲ್ಲಿ ಲಿಂಗಾಯತರು, ಕುರುಬರು, ಕಬ್ಬಲಿಗರು, ರಜಪೂತರು ಹಾಗೂ ದಲಿತರು ತಮ್ಮ ಸಮುದಾಯದ ವ್ಯಕ್ತಿ ಸಾವಿಗೀಡಾದರೆ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ. ಲಿಂಗಾಯತರು ಹಾಗೂ ದಲಿತ ಸಮುದಾಯದಲ್ಲಿ ಶವ ವನ್ನು ಹೂಳುವ ಸಂಪ್ರದಾಯ ಇದೆ. ರಜಪೂತ ಮತ್ತಿತರ ಸಮುದಾಯಗಳಲ್ಲಿ ದಹಿಸುವ ಪದ್ಧತಿ ರೂಢಿಯಲ್ಲಿದೆ.

ಒಂದು ಕಾಲದಲ್ಲಿ ನೌಬಾದ್‌ನಿಂದ ಅಲಿಯಾಬಾದ್‌ಗೆ ಚಕ್ಕಡಿಗಳು ಸಾಗುತ್ತಿ ದ್ದವು. ಎತ್ತಿನಗಾಡಿಯ ಭಾರದ ಚಕ್ರ ಗಳಿಂದ ದಾರಿ ನಿರ್ಮಾಣವಾಗಿದೆ. ಈಗ ಅದೇ ಸ್ಮಶಾನದ ದಾರಿಯಾಗಿ ಗುರುತಿಸಿಕೊಂಡಿದೆ. ಇಲ್ಲಿ ಅಚ್ಚುಕಟ್ಟಾದ ದಾರಿ ಇಲ್ಲ. ನೌಬಾದ್, ಶಿವನಗರ ಹಾಗೂ ಮಾಧವನಗರದಲ್ಲಿ ಯಾರಾ ದರೂ ಮೃತಪಟ್ಟರೆ ಮಾಧವನಗರದ ಸ್ಮಶಾನಕ್ಕೆ ತರಲಾಗುತ್ತದೆ. ಮಾಧವ ನಗರದ ರಮಾಬಾಯಿ ಶಾಲೆಯವರೆಗೂ ಸಿಮೆಂಟ್‌ ರಸ್ತೆ  ಇದೆ.

ನಂತರ ಸರಿ ಯಾದ ದಾರಿ ಇಲ್ಲ. ಖರ್ಗೆ ಲೇಔಟ್‌ ವರೆಗೂ ಶವವನ್ನು ವಾಹನದಲ್ಲಿ ತರಬಹುದು. ಮುಂದೆ ವಾಹನ ಸಾಗಲು ಸರಿಯಾದ ದಾರಿ ಇಲ್ಲ.  ಹೀಗಾಗಿ ಶವವನ್ನು ಹೆಗಲ ಮೇಲೆಯೇ ಹೊತ್ತು ಸಾಗಬೇಕು.

ಮಾಧವನಗರದ ಅಂಚಿನಲ್ಲಿ ನಗರಸಭೆಯವರು ಗಟಾರು ನಿರ್ಮಿಸಿ ಸ್ಮಶಾನಕ್ಕೆ ಹೋಗುವ ರಸ್ತೆ ಮೇಲೆ ನೀರು ಹರಿದು ಹೋಗುವಂತೆ ಮಾಡಿ ಕಚ್ಚಾ ರಸ್ತೆಯೂ ಹಾಳಾಗುವಂತೆ ಮಾಡಿದ್ದಾರೆ.

ಬೆಟ್ಟವನ್ನು ಸೀಳಿಕೊಂಡು ಹೋಗಿ ರುವ ರಸ್ತೆಯ ಎರಡೂ ಬದಿಗೂ ಗಿಡ ಗಂಟಿಗಳು ಬೆಳೆದು ನಿಂತಿವೆ. ಸುಮಾರು ಒಂದು ಕಿ.ಮೀ ದೂರದ ದುರ್ಗಮ ರಸ್ತೆಯನ್ನು ದಾಟಿದ ನಂತರ ಸ್ಮಶಾನ ಇದೆ. ಶವ ಹೊತ್ತು ತರುವವರು ಹಾಗೂ ಶವ ಸಂಸ್ಕಾರಕ್ಕೆ ಬರುವವರು ಪ್ರತಿ ಬಾರಿಯೂ ಚುನಾಯಿತ ಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ನಗರಸಭೆಗೆ ಶಾಪ ಹಾಕುತ್ತಾರೆ.

ಈ ವಾರ್ಡ್‌ನಿಂದ ಆಯ್ಕೆಯಾ ದವರು ಸ್ಮಶಾನದ ಅಭಿವೃದ್ಧಿಗಾಗಿ ನಗರಸಭೆಗೆ ಪ್ರಸ್ತಾವ ಸಲ್ಲಿಸಿದ ಉದಾಹರಣೆಗಳೇ ಇಲ್ಲ. ಹೀಗಾಗಿ ನಗರಸಭೆಯ ಅಧಿಕಾರಿಗಳು ಗಂಭೀರ ವಾಗಿ ಪರಿಗಣಿಸಿಲ್ಲ. ಕೆಲ ಪ್ರಭಾವಿಗಳು ಸ್ಮಶಾನದ ಭೂಮಿಯನ್ನೇ ಕಬಳಿಸಲು ಯತ್ನಿಸಿದ್ದಾರೆ. ಕಟ್ಟಡ ಕಟ್ಟಲು ಅಲ್ಲಿ ನೀರಿನ ತೊಟ್ಟಿ ನಿರ್ಮಿಸಿರುವ, ಕಲ್ಲುಗಳನ್ನು ಸಂಗ್ರಹಿಸಿರುವ ಹಾಗೂ ಕಟ್ಟಡಕ್ಕೆ ಅಡಿಪಾಯ ಹಾಕಲು ಭೂಮಿ ಅಗೆದಿರುವ ಕುರುಹುಗಳಿವೆ.

ಸ್ಮಶಾನಕ್ಕೆ ತೆರಳುವ ಮಾರ್ಗವನ್ನು ಜೆಸಿಬಿಯಿಂದ ಸಮತಟ್ಟುಗೊಳಿಸಬೇಕು. ಗಟಾರ ನೀರು ಹರಿದು ಹೋಗಲು ರಸ್ತೆಯ ಎರಡೂ ಬದಿಗೆ ಗಟಾರ ನಿರ್ಮಿಸಬೇಕು. ಸ್ಮಶಾನದಲ್ಲಿ ಮರಗಳನ್ನು ಬೆಳೆಸಬೇಕು. ಸ್ಮಶಾನದಲ್ಲಿ ಚಿಕ್ಕದೊಂದು ಕೊಠಡಿ ನಿರ್ಮಿಸಿ ಶವ ಸಂಸ್ಕಾರಕ್ಕೆ ಅಗತ್ಯವಿರುವ  ಕಟ್ಟಿಗೆ, ಸೀಮೆ ಎಣ್ಣೆ ಹಾಗೂ ದಪ್ಪ ಉಪ್ಪು ಸಿಗುವಂತೆ ಮಾಡಬೇಕು. ಸ್ಮಶಾನದ ಕೊಠಡಿಯಲ್ಲಿ ನೋಂದಣಿ ಪುಸ್ತಕ ಇಡಬೇಕು. ಈ ಮೂಲಕ ಮರಣ ದಾಖಲೆಗಳನ್ನು ಇಡುವ ವ್ಯವಸ್ಥೆ ಆರಂಭಿಸಬೇಕು ಎಂದು ಹೇಳುತ್ತಾರೆ ಸ್ವಾಮಿದಾಸ್‌ ಕೆಂಪೆನೋರ್.

ನಗರದಲ್ಲಿ ಭೂಗಳ್ಳರ ಸಂಖ್ಯೆ ಅಧಿಕವಾಗಿದೆ. ಸ್ಮಶಾನಗಳಿಗೆ ಬೇಲಿ ಹಾಕದಿದ್ದರೆ ಸ್ಮಶಾನಗಳೂ ಭೂಕಳ್ಳರ ಪಾಲಾಗಲಿವೆ.
ಸ್ಮಶಾನಕ್ಕೆ ಹೋಗಲು ಸರಿಯಾದ ರಸ್ತೆ ನಿರ್ಮಿಸಬೇಕು. ಸ್ಮಶಾನ ಅಭಿವೃದ್ಧಿಗೂ ಜಿಲ್ಲಾ ಆಡಳಿತ ಒತ್ತುಕೊಡಬೇಕು ಎಂದು ಒತ್ತಾಯಿ ಸುತ್ತಾರೆ ವಿಲ್ಸನ್‌ ಕುಡತೆನೋರ್.

*

ಸ್ಮಶಾನದಲ್ಲಿ ಕೊಠಡಿಯನ್ನು ನಿರ್ಮಿಸಿ ಕಾವಲುಗಾರನನ್ನು ನಿಯೋಜಿಸಬೇಕು. ಅಲ್ಲಿ ನೋಂದಣಿ ಪುಸ್ತಕ ಇಟ್ಟು ಅಂತ್ಯಸಂಸ್ಕಾರದವರ ಹೆಸರು ನೋಂದಣಿ ಮಾಡಬೇಕು.
-ಸ್ವಾಮಿದಾಸ ಕೆಂಪೆನೋರ್ ನಿವಾಸಿ, ಮಾಧವನಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.