ADVERTISEMENT

ಮೂರು ಸಾವಿರ ಪಡಿತರ ಕಾರ್ಡ್‌ಗಳಿಗೆ ವಿಳಾಸ ಇಲ್ಲ!

ಚಂದ್ರಕಾಂತ ಮಸಾನಿ
Published 20 ಡಿಸೆಂಬರ್ 2017, 6:43 IST
Last Updated 20 ಡಿಸೆಂಬರ್ 2017, 6:43 IST
ವಿಳಾಸ ಸರಿ ಇಲ್ಲದೆ ಮರಳಿ ಬಂದ ಪಡಿತರ ಚೀಟಿಗಳನ್ನು ಬೀದರ್‌ನ ಅಂಚೆ ಕಚೇರಿಯಲ್ಲಿ ಪರಿಶೀಲಿಸುತ್ತಿರುವ ಸಿಬ್ಬಂದಿ
ವಿಳಾಸ ಸರಿ ಇಲ್ಲದೆ ಮರಳಿ ಬಂದ ಪಡಿತರ ಚೀಟಿಗಳನ್ನು ಬೀದರ್‌ನ ಅಂಚೆ ಕಚೇರಿಯಲ್ಲಿ ಪರಿಶೀಲಿಸುತ್ತಿರುವ ಸಿಬ್ಬಂದಿ   

ಬೀದರ್‌: ಪಡಿತರ ಚೀಟಿ ವಿತರಣೆಯಲ್ಲಿನ ಗೊಂದಲ ಇಂದಿಗೂ ನಿವಾರಣೆಯಾಗಿಲ್ಲ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಕಡಿಮೆಯಾಗಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ನಡೆಸದ ಕಾರಣ ಮೂರು ಸಾವಿರ ಕಾರ್ಡ್‌ಗಳ ವಿಳಾಸ ದೊರೆಯದೇ ಆಹಾರ, ನಾಗರಿಕ ಸರಬರಾಜು ಇಲಾಖೆಗೆ ಮರಳುತ್ತಿವೆ.

ರಾಜ್ಯ ಸರ್ಕಾರ ವಾರ್ಷಿಕ ₹ 1.20 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಎಲ್ಲರಿಗೂ ಬಿಪಿಎಲ್‌ ಕಾರ್ಡ್‌ ಕೊಡಲು ಒಪ್ಪಿಗೆ ಸೂಚಿಸಿದೆ. ಸರ್ಕಾರದ ಯೋಜನೆಗಳ ಲಾಭ ಪಡೆಯಲು ಬಡವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ನಗರ ಪ್ರದೇಶದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ವರದಿ ನೀಡಿರುವ ಕಾರಣ ಕಾರ್ಡ್‌ ಬಂದರೂ ಪಡಿತರ ಚೀಟಿದಾರರ ಮನೆಗಳನ್ನು ಹುಡುಕುವುದು ಅಂಚೆ ಸಿಬ್ಬಂದಿಗೆ ತಲೆನೋವಾಗಿದೆ.

ನಗರ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಕಂದಾಯ ಇಲಾಖೆಯ ಸಿಬ್ಬಂದಿಯೇ ಪ್ರಮಾದ ಮಾಡಿದ್ದಾರೆ. ಇವರ ಕಾರ್ಯವೈಖರಿಗೆ ರಾಜ್ಯ ಸರ್ಕಾರದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣರೆಡ್ಡಿ ಸಹ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ಅವರು ಕೆಳಹಂತದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರೂ ವ್ಯವಸ್ಥೆಯಲ್ಲಿ ಸುಧಾರಣೆ ಕಂಡು ಬಂದಿಲ್ಲ.

ADVERTISEMENT

‘ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿ ವರದಿ ಕೊಡುವುದು ಕಂದಾಯ ಇಲಾಖೆ ಸಿಬ್ಬಂದಿ ಜವಾಬ್ದಾರಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಮಸ್ಯೆಯಾಗಿಲ್ಲ. ನಗರ ಪ್ರದೇಶದ ಮೂರು ಸಾವಿರ ಪಡಿತರ ಕಾರ್ಡ್‌ಗಳಲ್ಲಿ ಸರಿಯಾದ ವಿಳಾಸ ನಮೂದಿಸದ ಕಾರಣ ಮರಳಿ ಬಂದಿವೆ’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಬಸವರಾಜ ಹೇಳುತ್ತಾರೆ.

‘ಪಡಿತರ ಚೀಟಿ ಕೋರಿ 52 ಸಾವಿರ ಅರ್ಜಿಗಳು ಬಂದಿವೆ. ಈ ಪೈಕಿ 16 ಸಾವಿರ ಪಡಿತರ ಚೀಟಿ ಮಂಜೂರು ಆಗಿವೆ. ಅದರಲ್ಲಿ 3 ಸಾವಿರ ಕಾರ್ಡ್‌ಗಳ ವಿಳಾಸ ಸರಿ ಇಲ್ಲ. 13 ಸಾವಿರ ಪಡಿತರ ಚೀಟಿಗಳು ವಿತರಣೆ ಆಗಬೇಕಿದೆ’ ಎನ್ನುತ್ತಾರೆ.

‘ಕಂದಾಯ ಇಲಾಖೆಯ ಅಧಿಕಾರಿಗಳು ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವ ಕಾರಣ ಅರ್ಹರಿಗೆ ಪಡಿತರ ಚೀಟಿಗಳು ದೊರೆಯುತ್ತಿಲ್ಲ. ಕಚೇರಿಯಲ್ಲೇ ಕುಳಿತು ಅನರ್ಹರಿಗೆ ಪಡಿತರ ಚೀಟಿ ಮಂಜೂರು ಮಾಡುತ್ತಿದ್ದಾರೆ’ ಎಂದು ನಗರಸಭೆ ಸದಸ್ಯ ನಬಿ ಖುರೇಶಿ ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.