ADVERTISEMENT

ಶುಂಠಿ ಬೆಳೆದು ಹಣ ಗಳಿಸಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 7:19 IST
Last Updated 15 ಸೆಪ್ಟೆಂಬರ್ 2017, 7:19 IST
ಬೀದರ್‌ನ ತೋಟಗಾರಿಕೆ ಕಾಲೇಜಿನಲ್ಲಿ ಈಚೆಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ವೈ.ಕೆ. ಕೊಟಿಕಲ್ ಮಾತನಾಡಿದರು
ಬೀದರ್‌ನ ತೋಟಗಾರಿಕೆ ಕಾಲೇಜಿನಲ್ಲಿ ಈಚೆಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ವೈ.ಕೆ. ಕೊಟಿಕಲ್ ಮಾತನಾಡಿದರು   

ಬೀದರ್: ‘ರೈತರು ಶುಂಠಿ ಬೆಳೆದು ಹಣ ಗಳಿಸಬೇಕು’ ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ವೈ.ಕೆ. ಕೊಟಿಕಲ್ ಹೇಳಿದರು. ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ, ಕ್ಯಾಲಿಕಟ್‌ನ ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ ಹಾಗೂ ಮತ್ತು ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ರೈತರಿಗೆ ಇಲ್ಲಿನ ತೋಟಗಾರಿಕೆ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ‘ಶುಂಠಿ ಕೃಷಿಯಲ್ಲಿ ಆಧುನಿಕ ಬೇಸಾಯ ಪದ್ಧತಿಗಳು ಮತ್ತು ಜೀವನ ಭದ್ರತೆಗಾಗಿ ಮೌಲ್ಯವರ್ಧನೆ’ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಶುಂಠಿ ಬೆಳೆಯಲು ಭೂಮಿ, ನೀರು, ಬಿಸಿಲನ್ನೇ ಸರಿಯಾಗಿ ಬಳಸಿಕೊಳ್ಳಬೇಕು. ಉತ್ತಮ ದರ ಸಿಗುವಂತಾಗಲು ಗುಣಮಟ್ಟ ಕಾಯ್ದುಕೊಳ್ಳಬೇಕು’ ಎಂದು ತಿಳಿಸಿದರು.
‘ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಶುಂಠಿ ಬೆಳೆಯುವ ಬಗೆಗೆ ಮಾಹಿತಿ ನೀಡಲು ‘ಹಾರ್ಟಿ’ ಹೆಸರಿನ ಆ್ಯಪ್ ಸಿದ್ಧಪಡಿಸಿದೆ. ರೈತರು ಆ್ಯಪ್‌ನ ಪ್ರಯೋಜನ ಪಡೆಯಬೇಕು. ಈ ಮೂಲಕ ವೈಜ್ಞಾನಿಕ ಪದ್ಧತಿಯಲ್ಲಿ ಶುಂಠಿ ಬೆಳೆಯಬೇಕು’ ಎಂದು ಹೇಳಿದರು.

‘ಮಸಾಲೆ ಪದಾರ್ಥಗಳನ್ನು ಬೆಳೆದು ರಫ್ತು ಮಾಡಲು ಸಾಕಷ್ಟು ಅವಕಾಶ ಇರುವ ಕಾರಣ ರೈತರು ಮಸಾಲೆ ಪದಾರ್ಥಗಳನ್ನು ಬೆಳೆಯುವತ್ತಲೂ ಗಮನ ಹರಿಸಬೇಕು’ ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ಮುಖ್ಯ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ.ಡಿ.ಆರ್. ಪಾಟೀಲ ತಿಳಿಸಿದರು.

ADVERTISEMENT

‘ಬೀದರ್ ಜಿಲ್ಲೆಯ ಶುಂಠಿ ಬೆಳೆ ಉತ್ಪಾದನೆಯ ವಸ್ತು ಸ್ಥಿತಿ’ ಕುರಿತು ಸಹಾಯಕ ಪ್ರಾಧ್ಯಾಪಕ ಡಾ. ಶ್ರೀನಿವಾಸ, ‘ಶುಂಠಿ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು’ ಕುರಿತು ಡಾ.ಮಹಮ್ಮದ್ ಫಾರೂಕ್, ‘ಶುಂಠಿ ಬೆಳೆಯಲ್ಲಿ ಸಮಗ್ರ ಕೀಟ ನಿರ್ವಹಣೆ’ ಕುರಿತು ಡಾ. ಸತ್ಯನಾರಾಯಣ, ‘ಶುಂಠಿ ಬೆಳೆಯಲ್ಲಿ ಸಮಗ್ರ ರೋಗ ನಿರ್ವಹಣೆ’ ಕುರಿತು ಡಾ. ಅರುಣಕುಮಾರ,‘ಶುಂಠಿ ಬೆಳೆಯಲ್ಲಿ ಕೋಯ್ಲೋತ್ತರ ನಿರ್ವಹಣೆ ಮತ್ತು ಮೌಲ್ಯವರ್ಧನೆ’ ಕುರಿತು ಡಾ.ತಿಪ್ಪಣ್ಣ, ‘ಶುಂಠಿ ಬೆಳೆಯ ಆರ್ಥಿಕತೆ’ ಕುರಿತು ಡಾ.ಗಣೇಶಗೌಡ ಪಾಟೀಲ್, ‘ಶುಂಠಿ ಬೆಳೆಯ ಯಾಂತ್ರೀಕರಣ’ ಕುರಿತು ಡಾ.ನಾಗೇಂದ್ರ ಕವಳೆ ಉಪನ್ಯಾಸ ನೀಡಿದರು.

ಶುಂಠಿ ಬೆಳೆದು ಯಶ ಗಳಿಸಿರುವ ಪ್ರಗತಿಪರ ರೈತ ವೈಜಿನಾಥರಾವ್ ನಿಡೋದಾ ತಮ್ಮ ಅನುಭವ ಹಂಚಿಕೊಂಡರು. ‘ಶುಂಠಿ ಬೆಳೆಯ ತಾಂತ್ರಿಕತೆ’ ಕೈಪಿಡಿ ಬಿಡುಗಡೆ ಮಾಡಲಾಯಿತು. ಬೀದರ್‌ನ ತೋಟಗಾರಿಕೆ ಕಾಲೇಜು ಡೀನ್ ಡಾ.ರವೀಂದ್ರ ಮೂಲಗೆ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವಗೆ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಸುನೀಲ್‌ಕುಮಾರ, ಎ.ಆರ್.ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.