ADVERTISEMENT

ಸೇತುವೆ ತಡೆಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 5:36 IST
Last Updated 6 ಸೆಪ್ಟೆಂಬರ್ 2017, 5:36 IST
ಔರಾದ್ ತಾಲ್ಲೂಕಿನ ಕೌಠಾ ಬಳಿಯ ಸೇತುವೆ ತಡೆಗೋಡೆ ಕುಸಿದಿರುವುದನ್ನು ತೋರಿಸುತ್ತಿರುವುದು
ಔರಾದ್ ತಾಲ್ಲೂಕಿನ ಕೌಠಾ ಬಳಿಯ ಸೇತುವೆ ತಡೆಗೋಡೆ ಕುಸಿದಿರುವುದನ್ನು ತೋರಿಸುತ್ತಿರುವುದು   

ಔರಾದ್: ಮಾಂಜ್ರಾ ನದಿಗೆ ಅಡ್ಡಲಾಗಿರುವ ತಾಲ್ಲೂಕಿನ ಕೌಠಾ (ಬಿ) ಬಳಿಯ ಸೇತುವೆಯ ಒಂದು ಭಾಗದ ತಡೆಗೋಡೆ  ಕುಸಿದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ಅಂತರರಾಜ್ಯ ಸಂಪರ್ಕ ಕಲ್ಪಿಸುವ ಬೀದರ್–ನಾಂದೇಡ್ ರಸ್ತೆಗೆ ಅಡ್ಡಲಾಗಿರುವ ಈ ಸೇತುವೆ ಸುಮಾರು ಐದು ದಶಕದಷ್ಟು ಹಳೆಯದಾಗಿದ್ದು, ಮೂರು ದಿನಗಳ ಹಿಂದೆ ಗಣೇಶ ವಿಸರ್ಜನೆ ವೇಳೆ ಒಂದು ಭಾಗದ ತಡೆಗೋಡೆ ಕುಸಿದಿದೆ ಎಂದು ಕೌಠಾ ಗ್ರಾಮಸ್ಥರು ಹೇಳಿದರು.

ತಡೆಗೋಡೆ ಕುಸಿತದಿಂದ ಸದ್ಯ ಅಲ್ಲಿಂದ ಹೋಗಿ ಬರುವ ಪ್ರಯಾಣಿಕರಲ್ಲಿ ಭೀತಿ ಆವರಿಸಿದೆ. ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಅನಾಹುತ ಸಂಭವಿಸುವ ಅಪಾಯವಿದೆ.
‘ಹಳೆಯದಾದ ಈ ಸೇತುವೆ ಎರಡೂ ಬದಿಯ ತಡೆಗೋಡೆ ಶಿಥಿಲವಾಗಿದೆ. ಕೆಲ ದಿನಗಳ ಹಿಂದೆ ನಡೆದ ರಿಪೇರಿ ಕೆಲಸವೂ ಸರಿ ಆಗಿಲ್ಲ.

ಸೇತುವೆ ಆಚೆ ಈಚೆ ತಿರುವಿನಲ್ಲಿ ರಸ್ತೆ ಸರಿ ಇಲ್ಲ. ಆಯಾ ತಪ್ಪಿದರೆ ದುರಂತ ಖಚಿತ. ಇಷ್ಟೆಲ್ಲ ಗೋತ್ತಿದ್ದರೂ ಸಂಬಂಧಿತರು ಕಂಡು ಕಾಣದಂತಿರುತ್ತಾರೆ’ ಎಂದು ಕೌಠಾ ಗ್ರಾಮದ ನಿವಾಸಿ ರಮೇಶ ಬಿರಾದಾರ ದೂರಿದ್ದಾರೆ.

ADVERTISEMENT

ಸೇತುವೆ ಮೇಲಿಂದ ಸಣ್ಣ ವಾಹನ ಸಂಚರಿಸಿದರೂ ನಡಗುತ್ತದೆ. ಹೀಗಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇತುವೆ ಸಾಮರ್ಥ್ಯದ ಬಗ್ಗೆ ಪರೀಕ್ಷೆ ನಡೆಸಬೇಕು’ ಎಂದು ಹಿರಿಯ ಎಂಜಿನಿಯರ್ ದಿಲೀಪ ನಿಟ್ಟೂರೆ ಹೇಳಿದರು.

ಹೋರಾಟ: ಸಿಥಿಲಗೊಂಡ ಕೌಠಾ ಸೇತುವೆ ಮತ್ತು ಹಾಳಾದ ಬೀದರ್–ಔರಾದ್ ರಸ್ತೆ ದುರಸ್ತಿ ಮಾಡುವಂತೆ ಸಂತಪುರ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಸಿದ್ದಯ್ಯ ಸ್ವಾಮಿ ಆಗ್ರಹಿಸಿದ್ದಾರೆ.

ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಇದರಿಂದ ನಿತ್ಯ ಶಾಲಾ ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಆಸ್ಪತ್ರೆಯಂತಹ ತುರ್ತು ಕೆಲಸಕ್ಕಾಗಿ ಹೋಗಿ ಬರಲು ಜನ ನರಕಯಾತನೆ ಅನುಭವಿಸಬೇಕಾಗಿದೆ. ಕೂಡಲೇ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳದಿದ್ದಲ್ಲಿ   ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.