ADVERTISEMENT

ಬದುಕಿಗೆ ಭಾರವಾದ ಅತಿ ಎತ್ತರ

ಮನ್ನಥಪ್ಪ ಸ್ವಾಮಿ
Published 13 ಜುಲೈ 2018, 13:42 IST
Last Updated 13 ಜುಲೈ 2018, 13:42 IST
ಚಿಕ್ಕಪ್ಪನ ಜತೆ 7.4 ಅಡಿ ಎತ್ತರದ ಮಾರುತಿ ಕೋಳಿ
ಚಿಕ್ಕಪ್ಪನ ಜತೆ 7.4 ಅಡಿ ಎತ್ತರದ ಮಾರುತಿ ಕೋಳಿ   

ಔರಾದ್ (ಬೀದರ್‌ ಜಿಲ್ಲೆ): ಅತಿ ಎತ್ತರದ ವ್ಯಕ್ತಿ ಎಂದೇ ಗುರುತಿಸಿಕೊಂಡಿರುವ ತಾಲ್ಲೂಕಿನ ಮಾರುತಿ ಹಣಮಂತ ಕೋಳಿ ಅವರಿಗೆ ಈಗ ಎತ್ತರವೇ ಸಂಕಷ್ಟವಾಗಿ ಪರಿಣಮಿಸಿದೆ.

ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಚಿಂತಾಕಿ ಗ್ರಾಮದವರಾದ 37 ವರ್ಷದ ಮಾರುತಿ ಅವರ ಎತ್ತರ 7.4 ಅಡಿ. 35 ವರ್ಷಗಳ ವರೆಗೆ ಚೆನ್ನಾಗಿಯೇ ಇದ್ದ ಅವರು ಮೂರು ವರ್ಷಗಳಿಂದ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ‘ಈಗ ದೇಹ ಭಾರವಾಗಿದ್ದು, ಕೂತರೆ ಏಳಲು ಆಗುತ್ತಿಲ್ಲ. ನಿಶಕ್ತಿಯಿಂದ ನಡೆದಾಡಲು ಕಷ್ಟವಾಗುತ್ತಿದೆ. ದೇವರು ಯಾಕಾದರೂ ನನಗೆ ಇಂತಹ ಎತ್ತರದ ದೇಹ ಕೊಟ್ಟಿದ್ದಾನೆ’ ಎಂದು ದುಃಖಿಸುತ್ತಿದ್ದಾರೆ.

ಮಾರುತಿ ಅವರ ತಂದೆ 12 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ.ತಾಯಿ ಈರಮ್ಮ ಅವರು ಕೂಲಿಮಾಡಿ ಮಾರುತಿ ಸೇರಿ ಮೂವರು ಗಂಡು ಮಕ್ಕಳನ್ನು ಬೆಳೆಸಿದ್ದಾರೆ. ಇಬ್ಬರು ಮಕ್ಕಳು ಸಹಜವಾಗಿಯೇ ಬೆಳೆದು ದೊಡ್ಡವರಾಗಿ ಮದುವೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದಾರೆ. ಕಡು ಬಡತನದಿಂದಾಗಿ ಕುಟುಂಬದ ಯಾರೊಬ್ಬರೂ ಶಾಲೆಗೆ ಹೋಗಿಲ್ಲ.

ADVERTISEMENT

‘ಮಾರುತಿ ಎತ್ತರ ಮಾತ್ರ 15ರಿಂದ 30 ವರ್ಷ ವಯಸ್ಸಿನ ಅವಧಿಯಲ್ಲಿ ಮಿತಿಮೀರಿ ಬೆಳೆದಿದೆ. ಅದೇ ಈಗ ಅವನಿಗೆ ಸಮಸ್ಯೆಯಾಗಿದೆ’ ಎಂದು ಈರಮ್ಮ ಮಗನ ಸಂಕಟದ ಕುರಿತು ವ್ಯಥೆ ಪಡುತ್ತಾರೆ. ‘ಎರಡು ತಿಂಗಳಿನಿಂದ ಅಣ್ಣನ ಎರಡೂ ಕಾಲುಗಳಲ್ಲಿ ನೋವು ಕಾಣಿಸಿಕೊಂಡಿದೆ. ಊರಿನ ಆಸ್ಪತ್ರೆಯಲ್ಲಿ ತೋರಿಸಿದರೂ ಗುಣವಾಗಿಲ್ಲ. ಎರಡು ಸಲ ಬೀದರ್‌ನ ಜಿಲ್ಲಾ ಆಸ್ಪತ್ರೆಯ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದೇವೆ. ಆರೋಗ್ಯದಲ್ಲಿ ಆಗಾಗ ಏರುಪೇರು ಆಗುತ್ತದೆ. ಬಸ್‌, ಮ್ಯಾಕ್ಸಿಕ್ಯಾಬ್ ಅಥವಾ ಜೀಪ್‌ಗಳಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಕಾಲುಗಳನ್ನು ಮುದುಡಿಸಿಕೊಂಡು ಕುಳಿತುಕೊಳ್ಳಲು ಕಷ್ಟವಾಗುತ್ತಿದೆ’ ಎಂದು ಆತನ ಸಹೋದರ ಪ್ರಕಾಶ ಹೇಳುತ್ತಾರೆ.

‘ಇಬ್ಬರು ತಮ್ಮಂದಿರ ಮದುವೆಯಾಗಿದೆ. ನನಗೂ ಮದುವೆ ಆಗಬೇಕು ಎನ್ನುವ ಆಸೆ ಇದೆ. ಆದರೆ, ನನ್ನ ದೇಹವೇ ನನಗೆ ಭಾರವಾಗಿರುವಾಗ ಯಾರು ನನ್ನನ್ನು ಮದುವೆಯಾಗುತ್ತಾರೆ. ನನ್ನ ಕಟ್ಟಿಕೊಂಡವಳ ಬಾಳು ಹಾಳಾಗುವುದು ಬೇಡ ಎಂದು ಮದುವೆ ವಿಚಾರ ಕೈಬಿಟ್ಟಿದ್ದೇನೆ’ ಎನ್ನುತ್ತಾರೆ ಮಾರುತಿ.

‘ನನಗೆ ವೈದ್ಯಕೀಯ ಚಿಕಿತ್ಸೆಗೆ ತಿಂಗಳಿಗೆ ಕನಿಷ್ಠ ₹ 2 ಸಾವಿರ ಬೇಕು. ಸರ್ಕಾರ ಒಂದು ಸಾವಿರ ರೂಪಾಯಿ ಮಾಸಾಶನ ಕೊಡುತ್ತಿದೆ. ಉಳಿದ ಹಣವನ್ನು ತಾಯಿ ಕೂಲಿ ಮಾಡಿ ಕೊಡುತ್ತಾಳೆ. ಒಂದಿಷ್ಟು ದಿನ ಕಟ್ಟಿಗೆ ಒಡೆದು ಬದುಕು ಸಾಗಿದ್ದೇನೆ. ತಾಯಿ ಇರುವವರೆಗೆ ನನಗೆ ತೊಂದರೆ ಇಲ್ಲ. ಮುಂದೇನಾಗುತ್ತದೆಯೋ ದೇವರೆ ಬಲ್ಲ’ ಎಂದು ಮಾರುತಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.