ADVERTISEMENT

ಅಧಿಕಾರಿಗಳಿಂದ ಸರ್ಕಾರಿ ಶಾಲೆಗಳಿಗೆ ದುಸ್ಥಿತಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಮೇ 2017, 7:21 IST
Last Updated 4 ಮೇ 2017, 7:21 IST

ಚಾಮರಾಜನಗರ:  ‘ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪುತ್ತಿವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಗರದ ದೀನಬಂಧು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆಗೆ ಬುಧವಾರ ಭೇಟಿ ನೀಡಿದ ಅವರು, ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಸ್ಥಿತಿ ಗತಿಗಳ ಕುರಿತು ಔಪಚಾರಿಕ ಸಂವಾದ ನಡೆಸಿದರು.

‘ಸರ್ಕಾರಿ ಶಾಲೆಗಳ ಉಳಿವಿಗೆ ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಇಲ್ಲ. ಇಲಾಖೆಯಲ್ಲಿ ಅವ್ಯವಹಾರ ತಾಂಡವ ವಾಡುತ್ತಿದೆ. ಅಧಿಕಾರಿಗಳಲ್ಲಿ ಬದ್ಧತೆ ಇದ್ದರೆ ಈ ಸಮಸ್ಯೆಗಳೆಲ್ಲವೂ ಸರಿದಾರಿಗೆ ಬರುತ್ತವೆ. ಕೇರಳದಲ್ಲಿ ಬದ್ಧತೆಯುಳ್ಳ ಅಧಿಕಾರಿಗಳು ಇದನ್ನು ಸಾಬೀತುಪಡಿಸಿ ದ್ದಾರೆ’ ಎಂದರು.

‘ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ದುರವಸ್ಥೆಗೆ ತಲುಪಲು ಮತ್ತು ಖಾಸಗಿ ಶಾಲೆಗಳು ತಲೆ ಎತ್ತಲು ರಾಜಕಾರಣಿಗಳು ಮತ್ತು ಮುಖಂಡರೇ ಕಾರಣ. ಶಾಲೆಗಳು ಮುಚ್ಚುವುದನ್ನು ಅವರೇ ಬಯಸುತ್ತಿ ದ್ದಾರೆ. ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿಸಿ ತಾವೇ ಇಂಗ್ಲಿಷ್‌ ಮಾಧ್ಯಮದ ಶಾಲೆ ಗಳನ್ನು ತೆರೆಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ದೀನಬಂಧು ಶಾಲೆಯಲ್ಲಿ ಅಳವಡಿಸಿ ಕೊಂಡಿರುವ ಶಿಕ್ಷಣ ವ್ಯವಸ್ಥೆಯನ್ನು ಮೆಚ್ಚಿಕೊಂಡ ಅವರು, ಆರ್‌ಟಿಇ ಯಂತಹ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ನೀಡುವ ಸರ್ಕಾರ, ಇಂತಹ ಶಾಲೆಗಳತ್ತ ಗಮನ ಹರಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚಿಸುವು ದಾಗಿ ಹೇಳಿದರು.

ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್‌. ಜಯದೇವ ಮಾತನಾಡಿ, ‘ಸರ್ಕಾರಿ ಶಾಲೆಗಳ ಅವಸಾನಕ್ಕೆ ಖಾಸಗಿ ಶಾಲೆಗಳು ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವುದೇ ಕಾರಣ ಎನ್ನಲಾಗುತ್ತಿದೆ.

ಆದರೆ ದೀನ ಬಂಧು ಸಂಸ್ಥೆ ನಡೆಸಿದ ಕ್ಷೇತ್ರ ಅಧ್ಯಯನ ಪ್ರಕಾರ, ಖಾಸಗಿ ಶಾಲೆಗಳಲ್ಲಿ ನಮ್ಮ ಮಕ್ಕಳನ್ನು ಗಮನಿಸು ತ್ತಾರೆ ಎಂಬ ಪೋಷಕರಲ್ಲಿನ ನಂಬಿಕೆಯೇ ಇದಕ್ಕೆ ಪ್ರಬಲ ಕಾರಣ. ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ಕಾಳಜಿ ಇದ್ದರೂ, ಖಾಸಗಿ ಶಾಲೆಗಳ ಮೇಲೆಯೇ ಅವರಿಗೆ ಹೆಚ್ಚು ನಂಬಿಕೆ. ಇದು ಬದಲಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಇಂಗ್ಲಿಷ್‌ ಮತ್ತು ತಂತ್ರಜ್ಞಾನದ ಶಿಕ್ಷಣ ದೊರೆಯುತ್ತದೆ ಎಂಬ ಭ್ರಮೆ ಪೋಷಕರಲ್ಲಿದೆ. ಆದರೆ ಅನೇಕ ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲಿಯೇ ಬೋಧಿಸುತ್ತಿವೆ. ಇಂಗ್ಲಿಷ್‌ ಮಾಧ್ಯಮ ದಲ್ಲಿ ಶಿಕ್ಷಣ ನೀಡಲು ಪರವಾನಗಿಯೇ ಸಿಕ್ಕಿರುವುದಿಲ್ಲ.

ಅನೇಕ ಶಾಲೆಗಳು ಶೆಡ್‌ನಂತಿವೆ. ಕಾವಲುಗಾರನಿಗೆ ಭವ್ಯ ಬಂಗಲೆ ಕಟ್ಟಿ ಕೊಟ್ಟಿರುತ್ತವೆ. ಮಕ್ಕಳನ್ನು ಕರೆದೊ ಯ್ಯುವ ಶಾಲಾ ವಾಹನಗಳು, ಸಮವಸ್ತ್ರ, ಹೋಮ್‌ವರ್ಕ್‌ ಮುಂತಾದ ನಿಯಮಗಳು ಖಾಸಗಿ ಶಾಲೆಗಳು ಶ್ರೇಷ್ಠ ಎಂಬ ಭಾವನೆ ಮೂಡಿಸುತ್ತವೆ. ಅದಕ್ಕೆ ಪೂರಕ ವಾಗಿ ಸರ್ಕಾರಿ ಶಾಲೆಗಳ ಶಿಕ್ಷಕರೂ ವರ್ತಿಸುತ್ತಾರೆ. ಹೇಗಿದ್ದರೂ ಸಂಬಳ ಬರುತ್ತದೆ ಎಂಬ ಉದಾಸೀನತೆ ಇರುತ್ತದೆ.

ಕೆಲವು ಶಿಕ್ಷಕರು ಕುಡಿದು ಶಾಲೆಗೆ ಬರುವ ನಿದರ್ಶನಗಳೂ ಇವೆ’ ಎಂದರು. ಹಿರಿಯ ಚಿಂತಕ ಪ್ರೊ.ಕೆ. ಮರುಳ ಸಿದ್ದಪ್ಪ, ಸಾಹಿತಿ ಪ್ರೊ. ಕೃಷ್ಣಮೂರ್ತಿ ಹನೂರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.