ADVERTISEMENT

ಚಂದ್ರಮಂಡಲೋತ್ಸವದಲ್ಲಿ ಭಕ್ತಿಯ ಮಹಾಪೂರ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 8:14 IST
Last Updated 5 ಡಿಸೆಂಬರ್ 2017, 8:14 IST

ಹನೂರು: ಪಟ್ಟಣ ಸಮೀಪದ ಕಾಮಗೆರೆ ಗ್ರಾಮದಲ್ಲಿ ಭಾನುವಾರ ರಾತ್ರಿ ಕಂಡಾಯ ಮೆರವಣಿಗೆ ಹಾಗೂ ಚಂದ್ರಮಂಡಲೋತ್ಸವ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಕಾರ್ತಿಕ ಮಾಸದ ಬಳಿಕ ಅತ್ಯಂತ ಸಡಗರದಿಂದ ಜರುಗುವ ಈ ಉತ್ಸವವನ್ನು ಸುತ್ತಲ ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

ಗ್ರಾಮದ ದಲಿತರ ಬಡಾವಣೆಯಲ್ಲಿರುವ ಸಿದ್ದಪ್ಪಾಜಿ ಗದ್ದಿಗೆಯ ಮುಂಭಾಗ ಜರುಗುವ ಚಂದ್ರಮಂಡಲದ ಅಂಗವಾಗಿ ಗ್ರಾಮವನ್ನು ವಿದ್ಯುತ್‌ ದೀಪಗಳಿಂದ ಶೃಂಗರಿಸುವ ಮೂಲಕ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಈ ನಡುವೆ ಕುರುಬನ ಕಟ್ಟೆಯಿಂದ ಆಗಮಿಸಿದ ಕಂಡಾಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತ್ತು.

ಗ್ರಾಮದ ಹೊರವಲಯದಲ್ಲಿರುವ ಮಹದೇಶ್ವರ ಹಾಗೂ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಬಳಿ ಕಂಡಾಯಗಳನ್ನು ತಂದು ಶುಚಿಗೊಳಿಸಿ, ಪೂಜೆ ಮಾಡಿ ಬಳಿಕ ಮೆರವಣಿಗೆಯ ಮೂಲಕ ಕರೆತರಲಾಯಿತು.

ADVERTISEMENT

ಮೆರವಣಿಗೆಯುದ್ದಕ್ಕೂ ಇತರೆ ಸಮುದಾಯಗಳ ಜನರು ಕಂಡಾಯಗಳಿಗೆ ಎಡೆ ಕೊಟ್ಟು ಪೂಜೆ ಸಲ್ಲಿಸಿದರು. ವಾದ್ಯಮೇಳ, ಪಟಾಕಿಗಳ ಸದ್ದು, ಯುವಕರ ಮಾರಿಕುಣಿತ ನೆರೆದಿದ್ದ ಭಕ್ತರ ಗಮನಸೆಳೆದವು. ಮೆರವಣಿಗೆಯಲ್ಲಿ ಸಾಗಿದ ಕಂಡಾಯಗಳನ್ನು ಅಂತಿಮವಾಗಿ ಸಿದ್ದಪ್ಪಾಜಿ ಗದ್ದಿಗೆಗೆ ತರಲಾಯಿತು.

ಇದಕ್ಕೂ ಮೊದಲು ನೀಲಗಾರ ಹಾಗೂ ಒಕ್ಕಲಿನ ಜನರು ಚಂದ್ರಮಂಡಲ ಆಕೃತಿಯನ್ನು ಕಟ್ಟಿ ಹರಕೆ ಹೊತ್ತ ಭಕ್ತಾದಿಗಳು ತರುವ ಹೂವಿನಿಂದ ಚಿತ್ತಾಕಷರ್ಕವಾಗಿ ರಚಿಸಿದ್ದ ಚಂದ್ರಮಂಡಲ ಗದ್ದಿಗೆ ಮುಂದೆ ಝಗಮಗಿಸುವ ವಿದ್ಯುತ್‌ ದೀಪಗಳ ಬೆಳಕಿನಲ್ಲಿ ಗಮನ ಸೆಳೆಯಿತು.

ನೀಲಗಾರ ವಿಧಿಯಂತೆ ದೂಪ, ಸಾಂಬ್ರಾಣಿ ಮತ್ತು ಮಂಗಳಾರತಿ ಜತೆಗೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಚಂದ್ರಮಂಡಲಕ್ಕೆ ಪೂಜೆ ಸಲ್ಲಿಸಿದರು. ಬಳಿಕ, ಚಂದ್ರಮಂಡಲವನ್ನು ಹರ್ಷೋದ್ಗಾರದೊಂದಿಗೆ ಜೈಕಾರ ಕೂಗುತ್ತ ಆಕಾಶಮುಖಿಯಾಗಿ ನಿಲ್ಲಿಸಲಾಯಿತು.

ಮೊದಲಿಗೆ ಸಿದ್ದಪ್ಪಾಜಿ ನೆಲೆಸಿದ ಚಿಕ್ಕಲೂರು ಕಡೆಗೆ ವಾಲಿದ ಚಂದ್ರಮಂಡಲ ನಂತರ ಬೊಪ್ಪೆಗೌಡನಪುರದ ಕಡೆಗೆ ವಾಲಿದ ಚಂದ್ರಮಂಡಲ ಕತ್ತಲ ರಾಜ್ಯಕ್ಕೆ ಬೆಳಕು ಕೊಡುವ ಪರಂಜ್ಯೋತಿಯಂತೆ ಕಂಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.