ADVERTISEMENT

ಜಾನುವಾರುಗಳಿಂದ ಅರಣ್ಯ ನಾಶವೇ?

ರಾಮಚಂದ್ರಪುರ ಮಠದ ರಾಘವೇಂದ್ರಭಾರತೀ ಸ್ವಾಮೀಜಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 10:14 IST
Last Updated 16 ಫೆಬ್ರುವರಿ 2017, 10:14 IST
ಹನೂರು: ‘ಅರಣ್ಯಕ್ಕೆ ಜಾನುವಾರು ಬಿಡಬಾರದು ಎಂಬ ನಿಯಮ ರಾಷ್ಟ್ರೀಯ ಉದ್ಯಾನಗಳಿಗೆ ಅನ್ವಯಿಸುತ್ತದೆಯೇ ಹೊರತು ವನ್ಯಜೀವಿಧಾಮಗಳಿಗೆ ಅಲ್ಲ’ ಎಂದು ರಾಮಚಂದ್ರಪುರ ಮಠದ ರಾಘವೇಂದ್ರ ಭಾರತೀ ಸ್ವಾಮೀಜಿ ಹೇಳಿದರು.
 
ಪಟ್ಟಣದಲ್ಲಿ ರಾಮಚಂದ್ರಪುರ ಮಠ ಹಾಗೂ ಗೋ ಪರಿವಾರ ವತಿಯಿಂದ ಬುಧವಾರ ನಡೆದ ‘ನಮ್ಮ ಬೆಟ್ಟ ನಮಗೆ ಬಿಡಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
‘ಅರಣ್ಯದಲ್ಲಿ ಜಾನುವಾರು ಮೇಯಿಸಲು ಹಾಗೂ ದನದದೊಡ್ಡಿ ನಿರ್ಮಿಸಲು ಕಾನೂನಿನ ಅಡ್ಡಿ ಇಲ್ಲ. ಬದಲಾಗಿ, ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಂದ ಅಡ್ಡಿ ಇದೆ. 2006ರ ಅರಣ್ಯ ಕಾಯ್ದೆ ಪ್ರಕಾರ ಕಾಡಂಚಿನ ಜನರು ಹಾಗೂ ಅರಣ್ಯವಾಸಿಗಳು ಅರಣ್ಯದಲ್ಲಿ ಜಾನುವಾರು ಮೇಯಿಸಬಹುದು. ಅರಣ್ಯದಲ್ಲಿರುವ ಶಾಖಾಹಾರಿ ಪ್ರಾಣಿಗಳು ತಿಂದರೆ ನಾಶವಾಗದ ಅರಣ್ಯ, ಜಾನುವಾರು ತಿಂದರೆ ನಾಶವಾಗುವುದೇ? ಎಂದು ಪ್ರಶ್ನಿಸಿದರು.
 
ಮುಡಿಗುಂಡ ವಿರಕ್ತ ಮಠದ ಶ್ರೀಕಂಠ ಸ್ವಾಮೀಜಿ ಮಾತನಾಡಿ, ಅರಣ್ಯಕ್ಕೆ ಜಾನುವಾರು ಬಿಡಲು ಅನುಮತಿ ನೀಡುವಂತೆ ಒತ್ತಾಯಿಸಿ ರೈತರು ಹಾಗೂ ಗೋಪಾಲಕರು ನಡೆಸುತ್ತಿರುವ ಪ್ರತಿಭಟನೆ ಕಾವು ಸರ್ಕಾರ ಹಾಗೂ ಅಧಿಕಾರಿಗಳಿಗೆ ತಟ್ಟಿಲ್ಲ. ಹೀಗಾಗಿ, ಗೋಪಾಲಕರು ಗೋವುಗಳ ಸಮೇತ ಕೋರ್ಟ್‌ ಮುಂಭಾಗ ಜಮಾಯಿಸಿ ನ್ಯಾಯ ಕೇಳಬೇಕು ಎಂದು ಸಲಹೆ ನೀಡಿದರು.
 
ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ‘ಅರಣ್ಯದಲ್ಲಿ ಜಾನುವಾರು ದೊಡ್ಡಿ ನಿರ್ಮಾಣ ಮಾಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಆರ್ಎಂಸಿ ಯಾರ್ಡ್‌ನಿಂದ ಮೆರವಣಿಗೆ ಹೊರಟು ರೈತರು ಮುಖ್ಯ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು.
 
ಮಲೆಮಹದೇಶ್ವರಬೆಟ್ಟ ಸಾಲೂರು ಮಠದ ಪಟ್ಟದ ಗುರುಸ್ವಾಮಿ, ಬರಗೂರು ದ್ರೋಣಗಿರಿ ಮಠದ ಅಶೋಕ ರಾಜೇಂದ್ರ ಸ್ವಾಮೀಜಿ, ಗುಂಡೆಗಾಲ ತೋಟದ ಮಠದ ವೃಷಭ ರಾಜೇಂದ್ರ ಸ್ವಾಮೀಜಿ, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಪೊನ್ನಾಚಿ ಮಹದೇವಸ್ವಾಮಿ, ರೈತ ಸಂಘ ಜಿಲ್ಲಾ ಘಟಕದ ಕಾರ್ಯದರ್ಶಿ ಹೊನ್ನೂರು ಬಸವಣ್ಣ, ಹನೂರು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.