ADVERTISEMENT

ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:58 IST
Last Updated 22 ಮಾರ್ಚ್ 2017, 9:58 IST

ಚಾಮರಾಜನಗರ: ನಗರದ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಬೆಳಗಿನ ಜಾವ ಸುಮಾರು 4 ಗಂಟೆ ಧಾರಾಕಾರ ಮಳೆ ಸುರಿಯಿತು.

ಬೆಳಿಗ್ಗೆ 4 ಗಂಟೆ ಸುಮಾರಿಗೆ ಏಕಾಏಕಿ ಜೋರಾಗಿ ಆರಂಭವಾದ ಮಳೆ 6ಗಂಟೆಗೆ ಕಡಿಮೆಯಾಯಿತು. ನಂತರ 7.45ರವರೆಗೂ ತುಂತುರು ಮಳೆ ಆಗುತ್ತಲೇ ಇತ್ತು. ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ನಾಗರಿಕರಿಗೆ ಮಳೆ ಸ್ವಲ್ಪ ತಂಪೆರೆದಿದೆ.

ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ವೈಫಲ್ಯದಿಂದಾಗಿ ಕೃಷಿ ಚಟುವಟಿಕೆ ಅಷ್ಟಕ್ಕಷ್ಟೇ ಇತ್ತು. ಆದರೆ, ನಾಲ್ಕು ದಿನದ ಹಿಂದೆ ಸ್ವಲ್ಪ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿತ್ತು. ಈಗ ಮತ್ತೆ ಮಳೆಯಾಗಿದ್ದು ಜನರಲ್ಲಿ ಸಂತಸ ಮೂಡಿಸಿದೆ.

ಹಬ್ಬದ ಆಚರಣೆಗೆ ತೊಂದರೆ: ನಗರದಲ್ಲಿ ಸೋಮವಾರದಿಂದ ಮುದುಕು ಮಾರಮ್ಮನ ಹಬ್ಬ ನಡೆಯುತ್ತಿದೆ. ಮಂಗಳವಾರ ಬೆಳಿಗ್ಗೆ ಮಡೆಸೇವೆ ಮಾಡಲು ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಭಕ್ತರು ಮಳೆಯಿಂದ ಪರದಾಡುವಂತಾಯಿತು. ಗುಂಡ್ಲುಪೇಟೆ ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶದಲ್ಲೂ ಮಳೆಯಾಗಿದೆ.

ಸಮಾಧಾನ ತಂದ ಮಳೆ
ಗುಂಡ್ಲುಪೇಟೆ: 
ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಒಂದು ಗಂಟೆ ಸುರಿದ ಮಳೆ ಬಿಸಿಲ ಬೇಗೆಗೆ ತತ್ತರಿಸಿದ್ದ ತಾಲ್ಲೂಕಿನ ಜನತೆಗೆ ಸ್ವಲ್ಪ ಸಮಾಧಾನ ತಂದಿದೆ. ಬೆಳಿಗ್ಗೆ 6ಕ್ಕೆ ಶುರುವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ  ಮಳೆಯಾಗಿ ಭೂಮಿಯನ್ನು ತಂಪಾಗಿಸಿತು.

ಗುಂಡ್ಲುಪೇಟೆ, ಬಸವಪುರ, ಪುತ್ತನಪುರ, ಹಂಗಳ, ದೇವರಹಳ್ಳಿ, ಶಿವಪುರ, ಅಣ್ಣೂರುಕೇರಿ, ಶಿಂಡನಪುರ, ಕಗ್ಗಳ, ತೆರಕಣಾಂಬಿ ಸುತ್ತ ಸುಮಾರು ಒಂದು ಗಂಟೆಗೂ ಹೆಚ್ಚಿನ ಕಾಲ ಮಳೆ ಬಿದ್ದಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನದ 13 ವಲಯದಲ್ಲಿಯೂ ಉತ್ತಮ ಮಳೆಯಾಗಿದ್ದು  ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದೆ. ಇಡೀ ದಿನ ಮೋಡ ಮುಸುಕಿದ ವಾತಾವರಣವಿದ್ದು ರಾತ್ರಿ ಮಳೆಯಾಗುವ ಸಂಭವವಿದೆ.

ಎರಡು ದಿನಗಳ ಹಿಂದೆ ಕಬ್ಬಳ್ಳಿ ಮತ್ತು ತೆರಕಣಾಂಬಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿತ್ತು. ಇದರಿಂದ ಕೆಲ ರೈತರು ಭೂಮಿ ಹದ ಮಾಡಿಕೊಂಡಿದ್ದರು. ಮಂಗಳವಾರ ಮಳೆಯಾಗಿದ್ದರಿಂದ ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.