ADVERTISEMENT

ನಾಗಮಲೆ: ಭಕ್ತರ ಪಾಲಿನ ಪುಣ್ಯಕ್ಷೇತ್ರ

ಮಲೆಮಹದೇಶ್ವರ ಸ್ವಾಮಿ ತಪಸ್ಸು ಮಾಡಿದ ಸ್ಥಳಗಳಲ್ಲಿ ಒಂದು

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 12:34 IST
Last Updated 17 ಜೂನ್ 2018, 12:34 IST
ಬೆಟ್ಟದ ಏರುಹಾದಿಯಲ್ಲಿ ಕ್ಷೇತ್ರದತ್ತ ಹೆಜ್ಜೆ ಹಾಕುತ್ತಿರುವ ಭಕ್ತರು
ಬೆಟ್ಟದ ಏರುಹಾದಿಯಲ್ಲಿ ಕ್ಷೇತ್ರದತ್ತ ಹೆಜ್ಜೆ ಹಾಕುತ್ತಿರುವ ಭಕ್ತರು   

ಮಲೆಮಹದೇಶ್ವರ ಬೆಟ್ಟ: ಪವಾಡಪುರುಷನೆಂದೇ ಕರೆಯಲಾಗುವ ಮಲೆಮಹದೇಶ್ವರ ಸ್ವಾಮಿ ಪವಾಡ ಮಾಡಿದ ಎಪ್ಪತ್ತೇಳು ಮಲೆಗಳಲ್ಲಿ ಒಂದಾದ ನಾಗಮಲೆಯು ತನ್ನದೇ ವೈಶಿಷ್ಟ್ಯದಿಂದ ಭಕ್ತರನ್ನು ಸೆಳೆಯುತ್ತಿದೆ.

ಮಲೆಮಹದೇಶ್ವರ ಬೆಟ್ಟದಿಂದ 12 ಕಿಲೋಮೀಟರ್ ದೂರದಲ್ಲಿರುವ ನಾಗಮಲೆ ಕ್ಷೇತ್ರವು ಪ್ರಮುಖ ಭಕ್ತಿಯ ತಾಣವಾಗಿ ಹೆಸರುವಾಸಿಯಾಗಿದ್ದು, ವಿಶಿಷ್ಟ ಅಧ್ಯಾತ್ಮ ಸ್ಥಳವಾಗಿದೆ.

ಇಲ್ಲಿ ಮಹದೇಶ್ವರ ಸ್ವಾಮಿಯ ವಿಗ್ರಹವು ಕಲ್ಲಿನ ರೂಪದಲ್ಲಿದ್ದು, ಅದಕ್ಕೆ ನೆರಳಾಗಿರುವ ಹಾವಿನ ಹೆಡೆಯ ಕಲ್ಲಿನ ಕೆತ್ತನೆ ಆಕರ್ಷಕವಾಗಿದೆ. ಅಮಾವಾಸ್ಯೆ, ಹುಣ್ಣಿಮೆ ಮತ್ತು ಜಾತ್ರೆಯ ಸಂದರ್ಭಗಳಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಭಕ್ತರಲ್ಲಿ ಶೇ 30ರಷ್ಟು ಜನರು ನಾಗಮಲೆಗೂ ಭೇಟಿ ನೀಡಿ ದೇವರ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.

ADVERTISEMENT

ಬೆಟ್ಟದ ಸಾಲುಗಳ ನಡುವೆ ಇರುವ ಈ ಕ್ಷೇತ್ರವನ್ನು ತಲುಪಲು ಕಾಲುದಾರಿಯನ್ನೇ ಆಶ್ರಯಿಸಬೇಕು. ದಟ್ಟ ಅರಣ್ಯ ಪ್ರದೇಶದ ಮಧ್ಯಭಾಗದಲ್ಲಿರುವ ಭಕ್ತಿ ತಾಣವು, ತನ್ನ ಸುತ್ತಲೂ ವೈವಿಧ್ಯ ಜೀವಿಸಂಕುಲಗಳನ್ನು ಹೊಂದಿದೆ. ಆದರೆ, ಇಲ್ಲಿಗೆ ಬರುವಂತಹ ಭಕ್ತರಿಗೆ ಕಾಡು ಪ್ರಾಣಿಗಳಿಂದ ತೊಂದರೆಯಾಗಿರುವ ಉದಾಹರಣೆ ಇಲ್ಲ. ಇದು ಕ್ಷೇತ್ರದ ಮಹಿಮೆ ಎಂಬುದು ಭಕ್ತರ ನಂಬಿಕೆ.

ಏರು ನಡಿಗೆಯ ಹಾದಿ: ಸಮುದ್ರ ಮಟ್ಟದಿಂದ ಅಂದಾಜು 900 ಮೀಟರ್‌ಗಳಷ್ಟು ಎತ್ತರ ವಿರುವ  ನಾಗಮಲೆಯನ್ನು ತಲುಪಬೇಕಾದರೆ ಏಳು ಬೆಟ್ಟಗಳನ್ನು ಹತ್ತಿ ಇಳಿಯಬೇಕು. ಒಂದೊಂದು ಬೆಟ್ಟವೂ ಸಮುದ್ರ ಮಟ್ಟದಿಂದ ಸುಮಾರು 900 ರಿಂದ 1,000 ಮೀಟರ್‌ಗಳಷ್ಟು ಎತ್ತರವಿದೆ.

ಇಂತಹ ಕಡಿದಾದ ಪ್ರದೇಶವನ್ನೂ ಲೆಕ್ಕಿಸದೆ ಇಲ್ಲಿಗೆ ತಲುಪುವ ಭಕ್ತರ ಮನಸ್ಸಿಗೆ, ಸುಂದರವಾದ ಪರಿಸರ ಮತ್ತು ಕಾವೇರಿ ನದಿ ಮೆಟ್ಟೂರು ಜಲಾಶಯವನ್ನು ಸೇರುವ ರಮಣೀಯ ದೃಶ್ಯಗಳು ಮುದ ನೀಡುವುದರ ಜೊತೆಗೆ  ನಡೆದುಕೊಂಡು ಬಂದಿದ್ದರಿಂದ ಉಂಟಾದ ದಣಿವನ್ನು ಹೋಗಲಾಡಿಸುತ್ತದೆ.

ಕ್ಷೇತ್ರದ ಹಿನ್ನೆಲೆ

ಎಪ್ಪತ್ತೇಳು ಮಲೆಗಳಲ್ಲಿ ಪವಾಡವನ್ನು ನಡೆಸಿದ ನಂತರ, ಮಹದೇಶ್ವರ ಸ್ವಾಮಿಯು ನಡುಮಲೆಯಲ್ಲಿ ನೆಲೆ ನಿಲ್ಲುತ್ತಾನೆ. ನಂತರ, ತಾನು ಬ್ರಹ್ಮಚಾರಿಯಾಗಿರುವುದರಿಂದ ತನ್ನ ಬಳಿಗೆ ಹೆಂಗಸರು ಬರಬಾರದೆಂದು ನಡುಮಲೆಯನ್ನು ತೊರೆದು ನಾಗಮಲೆಯ ಪುಣ್ಯಸ್ಥಳಕ್ಕೆ ಹೋಗಿ ತಪ್ಪಸ್ಸು ಮಾಡುತಿದ್ದಾಗ ನಾಗರಹಾವು ಸ್ವಾಮಿಗೆ ನೆರಳಾಗಿ ನಿಲ್ಲುತ್ತದೆ.

ಈ ಕ್ಷೇತ್ರಕ್ಕೆ ಮಹಿಳೆಯರು ಹೋಗಬಾರದು ಎಂಬ ಮಾತನ್ನು ಈ ಭಾಗದ ಹಿರಿಯರು ಹೇಳುತ್ತಾರೆ. ಆದರೆ, ದೇವರ ಅನುಗ್ರಹಕ್ಕಾಗಿ ಲಿಂಗ ಭೇದ ಮರೆತು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಲ್ಲಿಗೆ ಭೇಟಿ ನೀಡುತ್ತಾರೆ.

ಜಿ. ಪ್ರದೀಪ್ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.