ADVERTISEMENT

ರಾಜಕೀಯವಾಗಿ ಸಂಘಟಿತರಾಗಲು ಸಲಹೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 7:40 IST
Last Updated 29 ನವೆಂಬರ್ 2017, 7:40 IST
ಹನೂರು ಪಟ್ಟಣದಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಪಲ್ಲಕ್ಕಿ ಉತ್ಸವ ನಡೆಯಿತು
ಹನೂರು ಪಟ್ಟಣದಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಪಲ್ಲಕ್ಕಿ ಉತ್ಸವ ನಡೆಯಿತು   

ಹನೂರು: ‘ವಾಲ್ಮೀಕಿ ಸಮುದಾಯದ ಜನರು ರಾಜಕೀಯ ಇಚ್ಛಾಶಕ್ತಿ ಬೆಳೆಸಿಕೊಂಡು ಸಂವಿಧಾನದ ಆಶಯಗಳನ್ನು ತಿಳಿದುಕೊಳ್ಳುವ ಮೂಲಕ ಮುಖ್ಯವಾಹಿನಿಗೆ ಬರಬೇಕು’ ಎಂದು ರಾಜನಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿ ಹೇಳಿದರು. ಪಟ್ಟಣದ ಗೌರಿಶಂಕರ ಕಲ್ಯಾಣಮಂಟಪದ ಆವರಣದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದಿರುವ ನಾಯಕ ಸಮುದಾಯ ರಾಜಕೀಯವಾಗಿ ಸಂಘಟಿತರಾಗುವ ಅಗತ್ಯವಿದೆ. ಮುಖಂಡರು ಸಮುದಾಯದ ಸಮಸ್ಯೆಗಳನ್ನು ಗುರುತಿಸಿ ಸರ್ಕಾರದ ಗಮನ ಸೆಳೆದು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಏಳಿಗೆಗಾಗಿ ಶ್ರಮಿಸಬೇಕು ಎಂದರು.

ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು ಮಾತನಾಡಿ, ತ್ಯಾಗ ಬಲಿದಾನಕ್ಕೆ ಮತ್ತೊಂದು ಹೆಸರೇ ನಾಯಕ ಸಮುದಾಯ. ಈ ಜನಾಂಗ ಸಾವಿರಾರು ವರ್ಷಗಳಿಂದಲೂ ಅಸ್ತಿತ್ವದಲ್ಲಿದೆ ಎಂಬುದಕ್ಕೆ ರಾಮಾಯ ಣ ರಚಿಸಿದ ವಾಲ್ಮೀಕಿ ಮಹಿರ್ಷಿಯೇ ಉತ್ತಮ ನಿದರ್ಶನ ಎಂದರು.

ADVERTISEMENT

ದೇಶದ ಮಹಾಪುರಾಣಗಳು ಎನಿಸಿದ ರಾಮಾಯಣ ಹಾಗೂ ಮಹಾಭಾರತದಲ್ಲಿ ನಾಯಕ ಸಮುದಾಯದ ಉಲ್ಲೇಖವಿರುವುದನ್ನು ಕಾಣಬಹುದಾಗಿದೆ. ರಾಮನಿಗೆ ಆತಿಥ್ಯ ನೀಡಿದ ಶಬರಿ, ಗುರುವಿನ ಪ್ರತಿಮೆಯನ್ನಿಟ್ಟು ಏಕಾಂಗಿಯಾಗಿ ಧನುರ್ವಿದ್ಯೆಯನ್ನು ಕಲಿತ ಏಕಲವ್ಯ ಈ ಸಮುದಾಯದವರಾಗಿದ್ದಾರೆ. ಅಲ್ಲದೆ, ಸ್ವಾತಂತ್ತ್ಯ ಹೋರಾಟದಲ್ಲೂ ನಾಯಕ ಸಮುದಾಯದ ಕೊಡುಗೆ ಅಪಾರವಾದುದು. ಚರಿತ್ರೆಯಲ್ಲಿ ಮದಕರಿ ನಾಯಕನ ಹೆಸರು ಅಜರಾಮರ. ಇಂತಹ ಶ್ರೀಮಂತ ಹಿನ್ನೆಲೆ ಹೊಂದಿರುವ ನಾಯಕ ಸಮುದಾಯದಲ್ಲಿ ಇಂದು ಒಗ್ಗಟ್ಟಿನ ಕೊರತೆ ಕಾಡುತ್ತಿದೆ ಎಂದು ಹೇಳಿದರು.

ರಾಜ್ಯ ಸ್ಲಂ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಮಾತನಾಡಿ, ಇದುವರೆಗೂ ಆಡಳಿತ ನಡೆಸಿದ ಸರ್ಕಾರಗಳಲ್ಲಿ ನಾಯಕ ಸಮುದಾಯಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ಸಿಗದಿರಲು ಸಮರ್ಥ ನಾಯಕತ್ವದ ಕೊರತೆ ಕಾರಣ. ಆದ್ದರಿಂದ ಎಲ್ಲ ಮುಖಂಡರು ಒಗ್ಗೂಡುವ ಅವಶ್ಯಕತೆಯಿದೆ ಎಂದರು.

ಗಮನ ಸೆಳೆದ ಮೆರವಣಿಗೆ: ಪಟ್ಟಣದ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರಂಭವಾದ ಮೆರವಣಿಗೆ ಬಂಡಳ್ಳಿ ರಸ್ತೆ ಮಲೆಮಹದೇಶ್ವರ ರಸ್ತೆ ಮೂಲಕ ಆರ್.ಎಸ್. ದೊಡ್ಡಿಯಲ್ಲಿ ಏರ್ಪಡಿಸಿದ್ದ ವೇದಿಕೆಯವರೆಗೆ ನಡೆಯಿತು.

ಮೆರವಣಿಗೆಯುದ್ದಕ್ಕೂ ಪಲ್ಲಕ್ಕಿ ಉತ್ಸವ, ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ತಮಟೆ, ವಾದ್ಯ ಮೇಳ, ಯುವಕರ ಜನಪದ ನೃತ್ಯ, ರಂಗ ಕುಣಿತ, ಕುದುರೆ ಮೇಲೆ ವೀರಮದಕರಿ ವೇಷಧಾರಿ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ನಾಯಕ ಸಮುದಾಯದ ಸರ್ಕಾರಿ ನೌಕರರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕರಾದ ಪರಿಮಳಾ ನಾಗಪ್ಪ, ಜಿ.ಎನ್. ನಂಜುಂಡಸ್ವಾಮಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕಾಮರಾಜು, ನಾಯಕ ಸಮುದಾಯದ ಅಧ್ಯಕ್ಷ ಬಿ. ಜಯಸುಂದರ್, ಪ್ರಧಾನ ಕಾರ್ಯದರ್ಶಿ ಡಿ. ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.