ADVERTISEMENT

ಸಶಕ್ತರಾಗಲು ಮಹಿಳೆಯರಿಗೆ ಸಲಹೆ

ಮಹಿಳಾ ದಿನಾಚರಣೆಯಲ್ಲಿ ಸಚಿವ ಯು.ಟಿ. ಖಾದರ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 9:14 IST
Last Updated 9 ಮಾರ್ಚ್ 2017, 9:14 IST
ಚಾಮರಾಜನಗರ:‘ಉತ್ತಮ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಕೊಡುಗೆ ಹೆಚ್ಚಿದೆ. ಮಹಿಳೆಯರು ಸಶಕ್ತರಾಗ ಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು.
 
ನಗರದ ಜಿಲ್ಲಾಡಳಿತ ಭವನದ ಹಳೇ ಕೆಡಿಪಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
 
ಮಹಿಳಾ ದಿನ ಆಚರಿಸುವ ಮೂಲಕ ಸ್ತ್ರೀಯರ ಶಕ್ತಿ ಹೆಚ್ಚಾಗಬೇಕು. ಸಮಾಜ ದಲ್ಲಿ ಶೇ 50ರಷ್ಟು ಮಹಿಳೆಯರು ಇದ್ದಾರೆ. ಅವರನ್ನು ಬಿಟ್ಟು ಸಮಾಜದ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಹಾಗಾಗಿ, ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.
 
ಸಮಾಜಕ್ಕೆ ಮಹಿಳೆಯರು ಹಲವು ಕೊಡುಗೆ ನೀಡಿದ್ದಾರೆ. ರಾಣಿ ಅಬ್ಬಕ್ಕ ದೇವಿ, ಕಿತ್ತೂರುರಾಣಿ ಚೆನ್ನಮ್ಮ, ಇಂದಿರಾಗಾಂಧಿ ಅವರ ಕೊಡುಗೆ ಅನನ್ಯ ವಾದುದು ಎಂದರು.
ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಶಿಕ್ಷಣ ಕ್ರಾಂತಿಯ ಮೂಲಕ ಮಹಿಳೆಯರು ಆರ್ಥಿಕ ಸಬಲೀಕರಣ ಸಾಧಿಸಬೇಕು. ಸರ್ಕಾರದ ಸೌಲಭ್ಯವನ್ನು ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
 
ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತ ನಾಡಿ, ಮಹಿಳೆಯರು ತಮ್ಮ ಹಕ್ಕು ಹಾಗೂ ಮೀಸಲಾತಿ ಪಡೆದುಕೊಳ್ಳಬೇಕು. ಸ್ವಸಹಾಯ ಸಂಘಗಳು ಪ್ರಾರಂಭವಾದ ಬಳಿಕ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷೆ ಎಸ್‌.ಎನ್‌. ರೇಣುಕಾ ಮಾತನಾಡಿದರು.
 
ಇದೇ ವೇಳೆ ಅಂಗವಿಕಲರ ಕಲ್ಯಾಣ ಇಲಾಖೆ ಯಿಂದ ಯಳಂದೂರಿನ ಜೆಎಸ್‌ ಎಸ್‌ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಎಚ್‌.ಎಸ್‌. ಮಮತಾ ಅವರಿಗೆ ಟಾಕಿಂಗ್‌ ಲ್ಯಾಪ್‌ಟಾಪ್‌ ವಿತರಿಸಲಾಯಿತು.
 
ಕಾರ್ಯಕ್ರಮದಲ್ಲಿ ಶಾಸಕ ಆರ್‌.ನರೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ಉಪಾಧ್ಯಕ್ಷ ಎಸ್‌. ಬಸವರಾಜು, ಸ್ಥಾಯಿಸಮಿತಿ ಅಧ್ಯಕ್ಷ ಕೆ.ಪಿ. ಸದಾಶಿವಮೂರ್ತಿ, ಸದಸ್ಯರಾದ ಶಶಿಕಲಾ, ಯೋಗೇಶ್‌, ಕೆ.ಎಸ್.ಮಹೇಶ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಚೂಡಾ ಅಧ್ಯಕ್ಷ ಸುಹೇಲ್‌ ಆಲಿಖಾನ್‌, ಜಿಲ್ಲಾಧಿಕಾರಿ ಬಿ.ರಾಮು, ಹೆಚ್ಚುವರಿ ಜಿಲ್ಲಾಧಿಕಾರಿ ಗಾಯಿತ್ರಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ. ಹರೀಶ್‌ಕುಮಾರ್ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಂ. ಸರ್ವೇಶ್ವರ್‌ ಸೇರಿದಂತೆ ಇತರರು ಹಾಜರಿದ್ದರು.

* ಮಹಿಳೆಯರು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ರಾಜಕೀಯ, ಸಾಮಾಜಿಕ, ಕ್ರೀಡೆ, ಕಲೆ ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು
ಯು.ಟಿ. ಖಾದರ್‌, ಜಿಲ್ಲಾ ಉಸ್ತುವಾರಿ ಸಚಿವ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.