ADVERTISEMENT

₨ 5.23 ಲಕ್ಷ ಮೌಲ್ಯದ ಸಾಮಗ್ರಿ ವಶ

3 ತಿಂಗಳಲ್ಲಿ ಕೊಳ್ಳೇಗಾಲ ಪೊಲೀಸರ ಭರ್ಜರಿ ಬೇಟೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2014, 10:22 IST
Last Updated 31 ಜುಲೈ 2014, 10:22 IST

ಚಾಮರಾಜನಗರ: ಮೂರು ವರ್ಷದ ಅವಧಿಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಕಡಿಮೆಯಾಗಿದೆ. 2014ನೇ ಸಾಲಿನ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಅಂತ್ಯಕ್ಕೆ  ₨ 13,07,700 ಮೌಲ್ಯದ ಸಾಮಗ್ರಿ ಕಳ್ಳತನವಾಗಿತ್ತು. ಇದರಲ್ಲಿ ಚಿನ್ನ, ಬೆಳ್ಳಿ, ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ಸೇರಿದಂತೆ ₨ 5,23,150 ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ಹೇಳಿದರು.

ಕೊಲೆ ಪ್ರಕರಣ, ಸಾಮಾನ್ಯ ಕಳ್ಳತನ ಸೇರಿದಂತೆ ಮೂರು ತಿಂಗಳಲ್ಲಿ ಒಟ್ಟು 59 ಪ್ರಕರಣ ವರದಿಯಾಗಿದೆ. ಇದರಲ್ಲಿ 37 ಪ್ರಕರಣಗಳನ್ನು ಭೇದಿಸಲಾಗಿದೆ. ದರೋಡೆ ಮತ್ತು ದರೋಡೆಗೆ ಸಂಚು ಪ್ರಕರಣ ವರದಿಯಾಗಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸಂಚಾರ ಠಾಣೆ ಪ್ರಾರಂಭ: ಜಿಲ್ಲಾ ಕೇಂದ್ರಕ್ಕೆ ಸಂಚಾರ ಪೊಲೀಸ್‌ ಠಾಣೆ ಮಂಜೂರಾಗಿದೆ. ಅಗತ್ಯವಿರುವ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯಾರಂಭ ಮಾಡಲಿದ್ದಾರೆ ಎಂದು ತಿಳಿಸಿದರು.

ರಸ್ತೆ ಅಪಘಾತ: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಹೆಚ್ಚುತ್ತಿದೆ. ಆದ್ದರಿಂದ, ಸಾರ್ವಜನಿಕರಿಗೆ ಸಂಚಾರ ನಿಯಮ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದ ಅವರು, ಎನ್‌ಜಿಒ, ಸಂಘ– ಸಂಸ್ಥೆಯವರು ಸಹಕಾರ ನೀಡಿದರೆ ಸಂಚಾರ ನಿಯಮ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಚಾಲಕರ ನಿರ್ಲಕ್ಷ್ಯ: 2012ರಲ್ಲಿ ಜಿಲ್ಲೆಯಲ್ಲಿ 542 ರಸ್ತೆ ಅಪಘಾತದ ವರದಿಯಾಗಿತ್ತು. ಇದರಲ್ಲಿ 135 ಜನ ಮೃತರಾದರೆ, 781 ಜನ ಗಾಯಗೊಂಡಿದ್ದರು. 2013ರಲ್ಲಿ 518 ಪ್ರಕರಣ ವರದಿಯಾಗಿತ್ತು. ಇದರಲ್ಲಿ 140 ಜನ ಮೃತರಾದರೆ, 694 ಜನ ಗಾಯಗೊಂಡಿದ್ದರು. 2014ರ ಜೂನ್ ವರೆಗೆ 256 ರಸ್ತೆ ಅಪಘಾತ ಪ್ರಕರಣ ವರದಿಯಾಗಿದೆ. 75 ಮಂದಿ ಮೃತರಾದರೆ, 246 ಮಂದಿ ಗಾಯಗೊಂಡಿದ್ದಾರೆ. ಶೇ 95ರಷ್ಟು ರಸ್ತೆ ಅಪಘಾತ ಪ್ರಕರಣಗಳಲ್ಲಿ ಚಾಲಕನ ನಿರ್ಲಕ್ಷ್ಯತನವೇ ಕಾರಣವಾಗಿದೆ. ಸಂಚಾರ ನಿಯಮ ಕುರಿತು ಮೊದಲು ವಾಹನ ಚಾಲಕರಿಗೆ ಜಾಗೃತಿ ಮೂಡಿಸಬೇಕು.

ದಂಡದ ಪ್ರಮಾಣ ಕಡಿಮೆ: ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಇತರೆ ದೇಶಗಳಲ್ಲಿ ದಂಡದ ಪ್ರಮಾಣ ಹೆಚ್ಚಿರುತ್ತದೆ. ಹೀಗಾಗಿ, ಅಲ್ಲಿ ಸಂಚಾರ ನಿಯಮ ಉಲ್ಲಂಘನೆ ಮತ್ತು ರಸ್ತೆ ಅಪಘಾತ ಪ್ರಮಾಣ ಕಡಿಮೆ. ಆದರೆ, ನಮ್ಮ ರಾಜ್ಯದಲ್ಲಿ ದಂಡದ ಪ್ರಮಾಣ ಕಡಿಮೆ ಇರುವ ಪರಿಣಾಮ ಹೆಚ್ಚು ಅಪಘಾತಗಳು ಸಂಭವಿಸುತ್ತಿದೆ ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ  ಎ.ಪಿ. ವೆಂಕಟನಾಯಕ್‌, ಕೊಳ್ಳೇಗಾಲದ ಡಿವೈಎಸ್‌ಪಿ ಚೆನ್ನಬಸವಣ್ಣ, ಡಿವೈಎಸ್‌ಪಿ ಮಹಾಂತೇಶ ಈ. ಮುಪ್ಪಿನಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.