ADVERTISEMENT

ಚಾಮರಾಜನಗರ | ಬೀನ್ಸ್‌, ಮಾವಿನ ಧಾರಣೆ ಇಳಿಕೆ: ಹೂವುಗಳಿಗೂ ಇಲ್ಲ ಹೆಚ್ಚು ಬೇಡಿಕೆ

​ಪ್ರಜಾವಾಣಿ ವಾರ್ತೆ
Published 7 ಮೇ 2024, 6:36 IST
Last Updated 7 ಮೇ 2024, 6:36 IST
ಚಾಮರಾಜನಗರದ ಹೂವಿನ ಮಳಿಗೆಯೊಂದರಲ್ಲಿ ಗ್ರಾಹಕರೊಬ್ಬರು ಹೂವು ಖರೀದಿಸಿದರು
ಚಾಮರಾಜನಗರದ ಹೂವಿನ ಮಳಿಗೆಯೊಂದರಲ್ಲಿ ಗ್ರಾಹಕರೊಬ್ಬರು ಹೂವು ಖರೀದಿಸಿದರು   

ಚಾಮರಾಜನಗರ: ನಗರದ ಮಾರುಕಟ್ಟೆಯಲ್ಲಿ ಈ ವಾರ ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಿದ್ದರೆ, ಇನ್ನೂ ಕೆಲವುದರ ಧಾರಣೆ ಏರಿಕೆ ಕಂಡಿದೆ. ಮಾವಿನ ಹಣ್ಣುಗಳ ಬೆಲೆ ಕೊಂಚ ಕಡಿಮೆಯಾಗಿದೆ.

ಕಳೆದ ವಾರ ದುಬಾರಿಯಾಗಿದ್ದ ಬೀನ್ಸ್‌ ಬೆಲೆ ಈ ವಾರ ಸ್ವಲ್ಪ ಕಡಿಮೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಹೋದ ವಾರ ₹160 ಇತ್ತು. ಅದೀಗ ₹120ಕ್ಕೆ ಇಳಿದಿದೆ.

ಮೂಲಂಗಿ ಬೆಲೆ ಈ ವಾರ ಹೆಚ್ಚಾಗಿದೆ. ಕಳೆದ ವಾರದವರೆಗೂ ₹40 ಇತ್ತು. ಸೋಮವಾರ ₹60 ಆಗಿದೆ. ಹೀರೇಕಾಯಿಯ ಬೆಲೆಯೂ ಕೆಜಿಗೆ ₹20 ಜಾಸ್ತಿಯಾಗಿ ₹60ಕ್ಕೆ ತಲುಪಿದೆ. ಈರುಳ್ಳಿಯೂ ಕೆಜಿಗೆ ₹5ರಿಂದ ₹10ನಷ್ಟು ತುಟ್ಟಿಯಾಗಿದೆ. ಉಳಿದಂತೆ ಟೊಮೆಟೊ, ಆಲೂಗಡ್ಡೆ ಸೇರಿದಂತೆ ಇತರ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ADVERTISEMENT

‘ಬೇಸಿಗೆಯಾಗಿರುವುದರಿಂದ ಕೆಲವು ತರಕಾರಿಗಳ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿದೆ’ ಎಂದು ಹಾಪ್‌ಕಾಮ್ಸ್ ವ್ಯಾಪಾರಿ ಮಧು ಹೇಳಿದರು. 

ಹಣ್ಣುಗಳ ಮಾರುಕಟ್ಟೆಯಲ್ಲಿ ಮಾವಿನಹಣ್ಣುಗಳ ಬೆಲೆಯಲ್ಲಿ ಇಳಿದಿದೆ. ಉಳಿದ ಹಣ್ಣುಗಳ ಧಾರಣೆ ಬದಲಾಗಿಲ್ಲ.

ಹಾಪ್‌ಕಾಮ್ಸ್‌ನಲ್ಲಿ ಬಾದಾಮಿಯ ಧಾರಣೆ ₹140ಕ್ಕೆ ಇಳಿದಿದೆ. ಸಿಂಧೂರಕ್ಕೆ ₹100, ರಸಪುರಿಗೆ ₹120, ಬೈಗನ್‌ಪಲ್ಲಿ ₹100 ಮತ್ತು ತೋತಾಪುರಿಗೆ ₹100 ಧಾರಣೆ ಇದೆ.

ಹೂವಿಗಿಲ್ಲ ಬೇಡಿಕೆ: ನಗರದ ಚೆನ್ನಿಪುರಮೋಳೆಯ ಬಿಡಿಹೂವಿನ ಮಾರುಕಟ್ಟೆಯಲ್ಲಿ ಕನಕಾಂಬರ ಬಿಟ್ಟು ಉಳಿದ ಹೂವುಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ.

‘ಜಾತ್ರೆ, ಉತ್ಸವಗಳು ಮತ್ತು ಶುಭ ಸಮಾರಂಭಗಳು ಕಡಿಮೆಯಾಗಿರುವುದರಿಂದ ಹೂವುಗಳನ್ನು ಖರೀದಿಸುವವರ ಸಂಖ್ಯೆ ಇಳಿದಿದೆ’ ಎಂದು ಹೇಳುತ್ತಾರೆ ಬಿಡಿ ಹೂವಿನ ವ್ಯಾಪಾರಿಗಳು. 

ಕನಕಾಂಬರಕ್ಕೆ ಕೆಜಿಗೆ ₹600ರಿಂದ ₹800ರವರೆಗೆ ಇದೆ. ಕಳೆದ ವಾರ ಕೆಜಿಗೆ ₹320 ಇದ್ದ ಮಲ್ಲಿಗೆಯ ಬೆಲೆ ₹120 ಆಗಿದೆ. ಮರ್ಲೆಗೂ ಅಷ್ಟೇ ಇದೆ. ಸೇವಂತಿಗೆ, ಚೆಂಡು ಹೂ, ಸುಗಂಧರಾಜ, ಬಟನ್‌ಗುಲಾಬಿಯ ಬೆಲೆಯೂ ಇಳಿದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.