ADVERTISEMENT

ನಿರ್ವಹಣೆ ಇಲ್ಲದೆ ಪಾಳುಬಿದ್ದ ತಾ.ಪಂ ಕಟ್ಟಡ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 9:13 IST
Last Updated 12 ಜುಲೈ 2017, 9:13 IST
ಚಿಂತಾಮಣಿಯಲ್ಲಿ ನಿರುಪಯುಕ್ತವಾಗಿ ಪಾಳುಬಿದ್ದಿರುವ ಹಳೆಯ ತಾಲ್ಲೂಕು ಪಂಚಾಯಿತಿ ಕಟ್ಟಡ
ಚಿಂತಾಮಣಿಯಲ್ಲಿ ನಿರುಪಯುಕ್ತವಾಗಿ ಪಾಳುಬಿದ್ದಿರುವ ಹಳೆಯ ತಾಲ್ಲೂಕು ಪಂಚಾಯಿತಿ ಕಟ್ಟಡ   

ಚಿಂತಾಮಣಿ: ನಗರದ ಹೃದಯಭಾಗದಲ್ಲಿರುವ ಹಳೆಯ ತಾಲ್ಲೂಕು ಪಂಚಾಯಿತಿ ಕಟ್ಟಡ ನಿರುಪಯುಕ್ತವಾಗಿ ಪಾಳು ಬಿದ್ದಿದೆ. ಸಮರ್ಪಕ ನಿರ್ವಹಣೆ ಇಲ್ಲದೆ ಸರ್ಕಾರದ ಆಸ್ತಿ ಅಕ್ರಮಗಳಿಗೆ ಅವಕಾಶ ಮಾಡಿಕೊಟ್ಟಂತಾಗಿದೆ.

ನಗರದ ಜೋಡಿ ರಸ್ತೆಗೆ ಹೊಂದಿಕೊಂಡಿರುವ ಹಳೆಯ ತಾಲ್ಲೂಕು ಪಂಚಾಯಿತಿ ಕಟ್ಟಡ 1960ರಲ್ಲಿ ಎನ್‌.ಇ.ಎಸ್‌ ಕಚೇರಿಯಾಗಿ ನಿರ್ಮಾಣವಾಗಿದೆ ಎಂದು ತಿಳಿದು ಬರುತ್ತದೆ. ನಂತರ ‘ತಾಲ್ಲೂಕು ಬೋರ್ಡ್‌ ಕಚೇರಿ’ 1987 ರಲ್ಲಿ ತಾಲ್ಲೂಕು ಪಂಚಾಯಿತಿ ಸಮಿತಿ, 1994 ರಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿಯಾಗಿ ಬದಲಾವಣೆಯಾಗಿತ್ತು.

2015ರಲ್ಲಿ ತಾ.ಪಂ ಕಚೇರಿಯನ್ನು ನೂತನ ಕಟ್ಟಡ ಸಾಮರ್ಥ್ಯ ಸೌಧಗೆ ಸ್ಥಳಾಂತರಿಸಲಾಯಿತು. ಅಂದಿನಿಂದ ಹಳೆಯ ಎನ್ಇಎಸ್‌ ಕಟ್ಟಡ ನಾವಿಕನಿಲ್ಲದ ಹಡಗಿನಂತೆ ಪಾಳುಬಿದ್ದಿದೆ. ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಇದರ ಬಗ್ಗೆ ಗಮನ ಹರಿಸುವುದಕ್ಕೆ ಪುರಸೊತ್ತು ಇಲ್ಲ ಎಂಬುದು ಸಾರ್ವಜನಿಕರ ದೂರು.

ADVERTISEMENT

ಕಟ್ಟಡದ ನೆಲ ಮಹಡಿಯಲ್ಲಿ 10 ಹಾಗೂ ಮೊದಲ ಅಂತಸ್ತಿನಲ್ಲಿ 3 ಕೊಠಡಿಗಳಿವೆ. ಉತ್ತರ ಭಾಗಕ್ಕೆ 5 ಅಂಗಡಿ ಬಾಡಿಗೆಗೆ ನೀಡಲಾಗಿದೆ. ಜೋಡಿ ರಸ್ತೆಗೆ ಹೊಂದಿಕೊಂಡಿರುವ ಕಟ್ಟಡದ ಮುಂದೆ, ಬೆಂಗಳೂರು ರಸ್ತೆಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳ ನಿಲುಗಡೆ ಇದೆ. ಇಂತಹ ಕೋಟ್ಯಂತರ ಮೌಲ್ಯದ ಕಟ್ಟಡವನ್ನು ಪಾಳು ಬಿಟ್ಟಿರುವ ಬಗ್ಗೆ ನಗರದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ನಗರದಲ್ಲಿ ಹಲವು ಸರ್ಕಾರಿ ಕಚೇರಿಗಳು ಸೂಕ್ತವಲ್ಲದ ಹಾಗೂ ಮೂಲಸೌಕರ್ಯಗಳ ಕೊರತೆ ಇರುವ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಪಂಚಾಯಿತಿ ಕಟ್ಟಡವನ್ನು ಸ್ವಲ್ಪಮಟ್ಟಿಗೆ ದುರಸ್ತಿ ಮಾಡಿ ಸರ್ಕಾರಿ ಕಚೇರಿಗಳಿಗೆ ನೀಡಿದ್ದರೆ ಸರ್ಕಾರಕ್ಕೆ ಬಾಡಿಗೆಯಾದರೂ ಉಳಿತಾಯವಾಗುತ್ತಿತ್ತು. ಕಚೇರಿಗಳು ಅನುಕೂಲವಾಗುವಂತಹ ಸ್ಥಳದಲ್ಲಿರುವುದರಿಂದ ಸಾರ್ವಜನಿಕರಿಗೂ ಅನುಕೂಲವಾಗುತ್ತಿತ್ತು.

ಖಾಸಗಿಯವರಿಗೆ ಬಾಡಿಗೆಗೆ ನೀಡಿದ್ದರೆ, ತಾಲ್ಲೂಕು ಪಂಚಾಯಿತಿಗೆ ಸಾವಿರಾರು ರೂಪಾಯಿ ಬಾಡಿಗೆ ಬರುತ್ತಿತ್ತು. ಕಟ್ಟಡವನ್ನು ಪಾಳುಬಿಟ್ಟಿರುವುದರಿಂದ ಸಾರ್ವಜನಿಕರಿಗೂ ಅನುಕೂಲವಿಲ್ಲ, ತಾಲ್ಲೂಕು ಪಂಚಾಯಿತಿಯ ಆದಾಯಕ್ಕೂ ಕತ್ತರಿಯಾಗಿದೆ.

ತಾಲ್ಲೂಕು ಪಂಚಾಯಿತಿ ಕಚೇರಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸುವ ಮೊದಲೇ ಮುಖಂಡ ಡಾ.ಎಂ.ಸಿ.ಸುಧಾಕರ್‌ ತಾಲ್ಲೂಕು ಪಂಚಾಯಿತಿಗೆ ಸ್ವಂತ ಸಂಪನ್ಮೂಲವನ್ನು ರೂಢಿಸಿಕೊಳ್ಳುವ ಸಲುವಾಗಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ನೀಲನಕ್ಷೆ ತಯಾರಿಸಿದ್ದಾರೆ ಎನ್ನುವ ವದಂತಿ ಹರಡಿತ್ತು. ಅಷ್ಟರಲ್ಲಿ ಚುನಾವಣೆ ನಡೆದು ಅವರು ಸೋತರು.

ಚುನಾಯಿತ ಪ್ರತಿನಿಧಿಗಳು ಕಟ್ಟಡ ದುರಸ್ತಿಗೆ ಗಮನ ನೀಡಿ, ಸರ್ಕಾರಿ ಇಲಾಖೆಗಳ ಕಾರ್ಯ ನಿರ್ವಹಣೆಗೆ ಅವಕಾಶ ಮಾಡಿಕೊಟ್ಟರೆ ಪಂಚಾಯಿತಿಗೆ ಆರ್ಥಿಕ ಹೊರೆಯೂ ಕಡಿಮೆ ಆಗಲಿದೆ. ಈಗಿರುವ ಹಳೆಯ ಕಟ್ಟಡ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಿದರೆ ಲಾಭವೂ ಆಗಲಿದೆ ಎಂಬುದು ಸ್ಥಳೀಯರ ಮನವಿ.

ತಾ.ಪಂಗೆ ಆದಾಯ
ಹಳೇ ತಾಲ್ಲೂಕು ಪಂಚಾಯಿತಿ ಕಟ್ಟಡ ನಗರದ ಹೃದಯಭಾಗದಲ್ಲಿದೆ. ಹೊಸಕಟ್ಟಡವನ್ನು ನಿರ್ಮಿಸಿ ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಇಲಾಖೆ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರಿಸಿದರೆ ಸಾರ್ವಜನಿಕರಿಗೂ ಹಾಗೂ ಕೆಲಸ ಮಾಡುವ ಅಧಿಕಾರಿಗಳಿಗೂ ಅನುಕೂಲವಾಗುತ್ತದೆ, ತಾಲ್ಲೂಕು ಪಂಚಾಯಿತಿಗೆ ಆದಾಯವೂ ಬರುತ್ತದೆ.
ರಾಮರೆಡ್ಡಿ, ಹಿರಿಯ ನಾಗರಿಕ

* * 

ತಾಲ್ಲೂಕು ಪಂಚಾಯಿತಿ ನೂತನ ಕಟ್ಟಡಕ್ಕೆ ತಾ.ಪಂ. ಹಣವನ್ನೇ ಕ್ರೋಡೀಕರಿಸಿ ನಿರ್ಮಾಣ ಮಾಡಲಾಗಿದೆ. ಸದ್ಯಕ್ಕೆ ಪಂಚಾಯಿತಿಯಲ್ಲಿ ಹಣಕಾಸಿನ ಲಭ್ಯತೆ ಇಲ್ಲ. ಸರ್ಕಾರದಿಂದಲೇ ಅನುದಾನ ಅಗತ್ಯವಾಗಿದೆ.
ಶ್ರೀನಿವಾಸ್‌, ತಾ.ಪಂ. ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.