ADVERTISEMENT

ಬೇಸಿಗೆ ಆರಂಭಕ್ಕೂ ಮುನ್ನ ನೀರಿಗೆ ಬರ

ಚಿಂತಾಮಣಿ ನಗರದಲ್ಲಿ ಅರ್ಧದಷ್ಟು ನೀರಿನ ಕೊರತೆ: ಬತ್ತಿದ ಕೆರೆ, ಕೊಳವೆ ಬಾವಿಗಳು

ಎಂ.ರಾಮಕೃಷ್ಣಪ್ಪ
Published 28 ಜನವರಿ 2017, 6:16 IST
Last Updated 28 ಜನವರಿ 2017, 6:16 IST
ಬೇಸಿಗೆ ಆರಂಭಕ್ಕೂ ಮುನ್ನ ನೀರಿಗೆ ಬರ
ಬೇಸಿಗೆ ಆರಂಭಕ್ಕೂ ಮುನ್ನ ನೀರಿಗೆ ಬರ   

ಚಿಂತಾಮಣಿ: ಬೇಸಿಗೆ ಇನ್ನೂ ಆರಂಭವಾಗುವ ಹಂತದಲ್ಲಿದೆ. ಆದರೆ ಈಗಲೇ ನಗರದಲ್ಲಿ ಕುಡಿಯುವ ನೀರಿಗಾಗಿ ಪರದಾಟ ಆರಂಭವಾಗಿದೆ. ಸಮಸ್ಯೆ ಉಲ್ಬಣಗೊಳ್ಳುತ್ತಿದೆ.
ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಕನಂಪಲ್ಲಿ ಕೆರೆಯಲ್ಲಿ ಒಂದು ತಿಂಗಳಿಗಾಗುವಷ್ಟು ಮಾತ್ರ ನೀರು ಸಂಗ್ರಹವಿದೆ. ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗುತ್ತಿದ್ದು ನೀರಿನ ಸಮಸ್ಯೆ ಬಿಗಡಾಯಿಸಿದೆ.

ನಗರದಲ್ಲಿ 31 ವಾರ್ಡ್‌ಗಳಿದ್ದು, 76,068 ಸಾವಿರ ಜನಸಂಖ್ಯೆ ಇದೆ. ಜೊತೆಗೆ ನಿತ್ಯ ವಾಣಿಜ್ಯ ವಹಿವಾಟುಗಳಿಗೆ ನಗರಕ್ಕೆ ಬಂದು ಹೋಗುವವರನ್ನು ಸೇರಿಸಿಕೊಂಡರೆ ನಿತ್ಯ ಒಂದು ಲಕ್ಷ ಜನರಿಗೆ ನೀರು ಪೂರೈಸಬೇಕಾಗಿದೆ.

ಒಬ್ಬರಿಗೆ  100 ಲೀಟರ್‌ ನೀರಿನಂತೆ ಪ್ರತಿನಿತ್ಯ 1 ಕೋಟಿ 26 ಲಕ್ಷ ಲೀಟರ್‌ ನೀರಿನ ಅವಶ್ಯಕತೆ ಇದೆ. ನಗರಸಭೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ನೀಡಿ ರುವ ಮಾಹಿತಿ ಪ್ರಕಾರ ನಗರದ ಎಲ್ಲ ಕೊಳವೆ ಬಾವಿಗಳಿಂದ ಒಟ್ಟು 40.84 ಲಕ್ಷ ಲೀಟರ್‌ ನೀರು ದೊರೆಯುತ್ತಿದೆ. 50.42 ಲಕ್ಷ ಲೀಟರ್‌ ನೀರಿನ ಕೊರತೆ ಉಂಟಾಗಿದೆ.

ಗಾಂಧಿನಗರ, ಚೌಡರೆಡ್ಡಿಪಾಳ್ಯ, ತಪತೇಶ್ವರ ಕಾಲೊನಿ, ತಿಮ್ಮಸಂದ್ರದಲ್ಲಿ ಸಮಸ್ಯೆ ತೀವ್ರವಾಗಿದೆ. ಪ್ರಸ್ತುತ ಒಂದು ವಾರ್ಡ್‌ನಲ್ಲಿ 3 ದಿನಗಳಿಗೆ ಒಮ್ಮೆ, 3 ವಾರ್ಡ್‌ಗಳಲ್ಲಿ 4 ದಿನಗಳಿಗೆ ಒಮ್ಮೆ, 11 ವಾರ್ಡ್‌ಗಳಲ್ಲಿ ವಾರಕ್ಕೆ ಒಮ್ಮೆ ಹಾಗೂ 16 ವಾರ್ಡ್‌ಗಳಲ್ಲಿ 10 ದಿನಗಳಿಗೆ ಒಮ್ಮೆ ನೀರು ಪೂರೈಸುತ್ತಿರುವುದಾಗಿ ಅಧಿಕಾರಿ ಗಳು ಮಾಹಿತಿ ನೀಡುವರು.

‘ಅಧಿಕಾರಿಗಳು ನೀಡುತ್ತಿರುವುದು ತಪ್ಪು ಮಾಹಿತಿ. ವಾಸ್ತವವೇ ಬೇರೆ. ಕೆಲವು ಕಡೆ 10 ದಿನಕ್ಕೆ ಒಮ್ಮೆ ಕೆಲವು ಕಡೆ 15– 20 ದಿನಗಳಿಗೆ ನೀರು ಪೂರೈಸ ಲಾಗುತ್ತಿದೆ’ ಎಂದು ನಾಗರಿಕರು ದೂರು ವರು. ಒಟ್ಟು 217 ಕೊಳವೆ ಬಾವಿ ಗಳಿದ್ದು, ಅವುಗಳಲ್ಲಿ 78 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. 136 ಕೊಳವೆ ಬಾವಿ ಗಳು ನೀರಿಲ್ಲದೆ ಬತ್ತಿವೆ. 3 ಕೊಳವೆ ಬಾವಿ ಗಳು ದುರಸ್ತಿಯಲ್ಲಿವೆ. ನಗರದಲ್ಲಿ ಅಂತ ರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಕಾರ್ಯನಿರ್ವಹಿಸುತ್ತಿರುವ ಬಾವಿ ಗಳ ಲ್ಲೂ ಅಲ್ಪ– ಸ್ವಲ್ಪ ನೀರು ಮಾತ್ರ ದೊರೆ ಯುತ್ತಿದೆ.

ನಗರದ 5– 6 ವಾರ್ಡ್‌ಗಳಿಗೆ ನೀರು ಪೂರೈಸುತ್ತಿರುವ ಕನಂಪಲ್ಲಿ ಕೆರೆಯಲ್ಲಿ ಕೆಲವೇ ದಿನಗಳಲ್ಲಿ ನೀರು ಖಾಲಿಯಾ ಗಲಿದೆ. ಕೆರೆ ನೀರಿಗೆ ಪರ್ಯಾಯವಾಗಿ 14 ಕೊಳವೆ ಬಾವಿಗಳನ್ನು ಕೊರೆಯಲು ₹ 33 ಲಕ್ಷ ಮಂಜೂರಾಗಿದೆ. ನೀರಿನ ಸಂಪರ್ಕದ ಮುಖ್ಯ ಕೊಳವೆ ಮಾರ್ಗಗಳ ಪೈಪ್‌ಲೈನ್‌ಗಾಗಿ ₹ 30 ಲಕ್ಷ , 4 ಹೊಸ ಜಿಎಲ್‌ಎಸ್‌ಆರ್‌ (ಸಂಪ್‌) ನಿರ್ಮಾಣಕ್ಕೆ ₹ 48 ಲಕ್ಷ ಮಂಜೂರಾಗಿದೆ. ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ರಾಜ್ಯ ದೂರ ಸಂವೇದಿ ಕೇಂದ್ರ ದಿಂದ ಸಮೀಕ್ಷೆ ನಡೆಸಿ ಕೊಳವೆ ಬಾವಿಗ ಳನ್ನು ಕೊರೆಯಲಾಗುತ್ತಿದೆ. ನಗರದಲ್ಲಿ ಅಂತರ್ಜಲ ತೀವ್ರವಾಗಿ ಕುಸಿದಿದ್ದು ನೀರು ದೊರೆಯುತ್ತಿಲ್ಲ. ಹೊರವಲಯದ ನಾರಾ ಯಣಹಳ್ಳಿ, ತಿಮ್ಮಸಂದ್ರ, ಮಾಳಪ್ಪಲ್ಲಿ, ಗೋಪಸಂದ್ರ ಮುಂತಾದ ಕಡೆ ಕೊಳವೆ ಬಾವಿ ಕೊರೆಸುವುದು ಉತ್ತಮ ಎಂದು ದೂರ ಸಂವೇದಿ ಕೇಂದ್ರ ವರದಿ ನೀಡಿದೆ.

‘ಮಳೆ ಇಲ್ಲದೆ ನೀರಿನ ಕೊರತೆ ಉಂಟಾಗಿರುವುದು ನಿಜ. ಆದರೆ ದೊರೆಯುವ ನೀರನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ. ಕೊರತೆ ನೆಪದಲ್ಲಿ ಮುಖಂ ಡರು, ಬಲಾಢ್ಯರು ಹಾಗೂ ಹಣ ಕೊಡುವವರಿಗೆ ನೀರು ಪೂರೈಕೆ ಮಾಡ ಲಾಗುತ್ತಿದೆ.  ಹಿಂದೆ ರೈಸಿಂಗ್‌ ಮೈನ್‌ ಗಳನ್ನು ಕಡಿತಗೊಳಿಸಲಾಗಿತ್ತು. ಮತ್ತೆ ರೈಸಿಂಗ್‌ ಮೈನ್‌ಗಳಿಂದ ಸಂಪರ್ಕ ಮಾಮೂಲಿಯಾಗಿದೆ. ವಾಟರ್‌ಮೆನ್‌ ಗಳ ಮೇಲೆ ಅಧಿಕಾರಿಗಳಿಗೆ ಹಿಡಿತವಿಲ್ಲ’ ಎಂದು ನಾಗರಿಕರು ದೂರುವರು.

ಇದರ ಲಾಭ ಪಡೆದಿರುವ ಟ್ಯಾಂಕರ್‌ ಮಾಲೀಕರು ಹೆಚ್ಚು ಲಾಭ ಗಳಿಸುತ್ತಿದ್ದಾರೆ. ₹ 300ರಿಂದ 400 ವರೆಗೆ ಒಂದು ಟ್ಯಾಂಕರ್‌ ನೀರು ಮಾರಾಟವಾಗುತ್ತಿದೆ. ಜನವರಿಯಲ್ಲೇ ಹೀಗಾದರೆ ಇನ್ನೂ ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ಏನು ಮಾಡುವುದು ಎನ್ನುವ ಆತಂಕ ನಾಗರಿಕರನ್ನು ಕಾಡುತ್ತಿದೆ.

***
ಕನಂಪಲ್ಲಿಯಲ್ಲಿನ ಕೆರೆ ನೀರಿನ ಕೊರತೆ ಸರಿದೂಗಿಸಿಕೊಳ್ಳುವ ಸಲುವಾಗಿ ಹೊಸದಾಗಿ ಹದಿನಾಲ್ಕು ಕೊಳವೆ ಬಾವಿ ಕೊರೆಯಲು ತೀರ್ಮಾನಿಸಲಾಗಿದೆ.
-ಮುನಿಸ್ವಾಮಿ
ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.