ADVERTISEMENT

ಸಮಾಜ ಸೇವಾ ಮನೋಭಾವ ಬೆಳೆಸಿಕೊಳ್ಳಿ: ರೋಟರಿ ಮಾಜಿ ರಾಜ್ಯಪಾಲ ಎಚ್.ಕೆ.ವಿ.ರೆಡ್ಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 5:29 IST
Last Updated 24 ಏಪ್ರಿಲ್ 2017, 5:29 IST
ಕೋಲಾರದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ರೋಟರಿ ಮಾಜಿ ರಾಜ್ಯಪಾಲ ಎಚ್.ಕೆ.ವಿ.ರೆಡ್ಡಿ ಮಾತನಾಡಿದರು
ಕೋಲಾರದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ರೋಟರಿ ಮಾಜಿ ರಾಜ್ಯಪಾಲ ಎಚ್.ಕೆ.ವಿ.ರೆಡ್ಡಿ ಮಾತನಾಡಿದರು   

ಕೋಲಾರ: ‘ಸಣ್ಣ ನೆರವಿನಿಂದಲೂ ಕೆಲವರಿಗೆ ಸಾಕಷ್ಟು ಅನುಕೂಲ ಆಗುತ್ತದೆ. ಆದ್ದರಿಂದ ಎಲ್ಲರೂ ಸಮಾಜ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ರೋಟರಿ ಮಾಜಿ ರಾಜ್ಯಪಾಲ ಎಚ್.ಕೆ.ವಿ.ರೆಡ್ಡಿ ಸಲಹೆ ನೀಡಿದರು.

ರೋಟರಿ ಸಂಸ್ಥೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ರೋಟರಿ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ‘ಒಬ್ಬರು ಮೇಲೆಕ್ಕೆ ಏರುತ್ತಿದ್ದಾರೆ ಅವರ ಕಾಲೆಳೆಯುವ ಸಂಸ್ಕೃತಿ ಸರಿಯಲ್ಲ. ಒಳ್ಳೆಯದು ಮಾಡದಿದ್ದರೂ ಕೆಟ್ಟದ್ದನ್ನು ಮಾತ್ರ ಮಾಡಬಾರದು’ ಎಂದು ಹೇಳಿದರು.

‘ಸ್ವಾರ್ಥಕ್ಕಿಂತ ಮಿಗಿಲಾಗಿ ಸೇವೆಯ ಉದ್ದೇಶದೊಂದಿಗೆ ರೋಟರಿ ಸಂಸ್ಥೆ ಆರಂಭಿಸಲಾಗಿದೆ. ಸಂಸ್ಥೆಯು ಪ್ರತಿ ವರ್ಷ ವಿಭಿನ್ನ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದೆ. ಈ ಧ್ಯೇಯಗಳನ್ನು ಸೇವೆಯ ಮೂಲಕ ಕಾರ್ಯಗತಕ್ಕೆ ತರಬೇಕು. ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದರೆ ಮಾತ್ರ ನಿಸ್ವಾರ್ಥ ಸೇವೆ ನೀಡಲು ಸಾಧ್ಯ’ ಎಂದು ತಿಳಿಸಿದರು.

ADVERTISEMENT

ಹಾಲು -ಜೇನು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜು ಮಾತನಾಡಿ, ‘ರೋಟರಿ ಸಂಸ್ಥೆಯಂತೆಯೇ ಪರಿಷತ್‌ ಸಮಾಜಕ್ಕೆ ನಿರಂತರವಾಗಿ ಸೇವೆ ನೀಡುತ್ತಿದೆ. ಎರಡೂ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಸೇರಿರುವುದು ಹಾಲು -ಜೇನು ಬೆರೆದಂತಿದೆ’ ಎಂದರು.

‘ರಾಜರ ಕಾಲದಲ್ಲಿ ಕವಿಗಳಿಗೆ ರಾಜಾಶ್ರಯವಿತ್ತು. ಅದೇ ರೀತಿ ಸಂಘ- ಸಂಸ್ಥೆಗಳು ಕವಿಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಸಾಹಿತ್ಯ ಕ್ಷೇತ್ರ ಶ್ರೀಮಂತವಾಗುತ್ತದೆ. ಯುವಕ ಯುವತಿಯರನ್ನು ಸರಿ ದಾರಿಯಲ್ಲಿ ಕೊಂಡೊಯ್ಯಲು ಒಳ್ಳೆಯ ಸಾಹಿತ್ಯ ರಚನೆಯಾಗಬೇಕು. ಮೇ ತಿಂಗಳ ಅಂತ್ಯದಲ್ಲಿ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಹಾಗೂ ಪರಿಷತ್‌ ವತಿಯಿಂದ ಹಳಗನ್ನಡ ಮತ್ತು ನಡುಗನ್ನಡ ಕುರಿತು 40 ಮಂದಿಗೆ ಐದು ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತದೆ’ ಎಂದು ವಿವರಿಸಿದರು.

‘ಕವಿಗಳು ಕಾವ್ಯ ರಚಿಸುವ ಅಗತ್ಯವಿದೆ. ಶುದ್ಧ ಕಾವ್ಯ ರಚನೆಯಾಗಬೇಕು ಎಂಬುದು ಕವನ ಸ್ಪರ್ಧೆಗಳ ಉದ್ದೇಶವಾಗಬೇಕು. ಕಾವ್ಯದ ಉದ್ದ ಮುಖ್ಯವಲ್ಲ. ಬದಲಿಗೆ ಅದರ ಮೌಲ್ಯಯುತ ಅರ್ಥ ಮುಖ್ಯ. ಹೀಗಾಗಿ ಮೌಲ್ಯಯುತ ಕಾವ್ಯಗಳ ರಚನೆಗೆ ಎಲ್ಲರೂ ಆದ್ಯತೆ ನೀಡಬೇಕು’ ಎಂದು ಸಾಹಿತಿ ವಿಜಯರಾಘವನ್ ಸಲಹೆ ನೀಡಿದರು.

ಕವನ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕವಿಗಳು ಭಾಗವಹಿಸಿದ್ದರು. ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ರಾಮಚಂದ್ರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯದರ್ಶಿಗಳಾದ ಆರ್.ಅಶ್ವತ್ಥ್, ಟಿ.ಚಂದ್ರಪ್ಪ, ಕೇಂದ್ರ ಆಹಾರ ನಿಗಮದ ಸದಸ್ಯ ವೆಂಕಟರೆಡ್ಡಿ, ಸ್ಪರ್ಧೆಯ ಸಂಚಾಲಕ ಡಾ.ಕೆ.ಎಂ.ಜೆ.ಮೌನಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.