ADVERTISEMENT

ಆರೋಪ ತಳ್ಳಿಹಾಕಿದ ಅರಣ್ಯ ಇಲಾಖೆ

ಕೆ.ವಾಸುದೇವ
Published 18 ಮಾರ್ಚ್ 2017, 7:59 IST
Last Updated 18 ಮಾರ್ಚ್ 2017, 7:59 IST
ಆರೋಪ ತಳ್ಳಿಹಾಕಿದ ಅರಣ್ಯ ಇಲಾಖೆ
ಆರೋಪ ತಳ್ಳಿಹಾಕಿದ ಅರಣ್ಯ ಇಲಾಖೆ   

ಮೂಡಿಗೆರೆ: ತಾಲ್ಲೂಕಿನ ಹೊಸ್ಕರೆ ಗ್ರಾಮದ ಹೆರಿಕೆಯಲ್ಲಿ ಗುರುವಾರ ಸೆರೆ ಹಿಡಿದಿರುವ ಕಾಡಾನೆ ಒಂಟಿ ಸಲಗವಲ್ಲ ಎಂಬ ಆರೋಪ ರೈತರಿಂದ ವ್ಯಕ್ತವಾಗಿದ್ದು, ಇದು ತಾಲ್ಲೂಕಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ತಾಲ್ಲೂಕಿನ ಹೊಸ್ಕೆರೆ ಗ್ರಾಮದ ಹೇರಿಕೆಯ ದೊಡ್ಡತೋಟ ಎಂಬಲ್ಲಿ ನಾಗರಹೊಳೆ ಆನೆ ಶಿಬಿರದಿಂದ ಕರೆ ತಂದಿದ್ದ ಐದು ಸಾಕಾನೆಗಳು ಕಾರ್ಯಾಚರಣೆ ನಡೆಸಿ, ಗುರುವಾರ ಮಧ್ಯಾಹ್ನ ಕಾಡಾನೆಯೊಂದನ್ನು ಸೆರೆ ಹಿಡಿದಿದ್ದವು. ಇದಕ್ಕೆ ಸ್ಥಳೀಯರು ಭೈರಾಪುರದಲ್ಲಿರುವ ನಾಣ್ಯಭೈರವೇಶ್ವರ ದೇವರ ಕ್ಷೇತ್ರದ ನೆನಪಿಗಾಗಿ ‘ನಾಣ್ಯಭೈರವ’ ಎಂಬ ಹೆಸರ ನ್ನಿಟ್ಟಿದ್ದು, ಸೆರೆ ಹಿಡಿದ ಕಾಡಾನೆಯನ್ನು ಸಂಜೆ ವೇಳೆಗೆ ಲಾರಿಯಲ್ಲಿ ನಾಗರ ಹೊಳೆಗೆ ಕರೆದೊಯ್ಯಲಾಯಿತು.

ಸೆರೆ ಹಿಡಿದ ಕಾಡಾನೆಯ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ‘ಇದು ಒಂಟಿ ಸಲಗವಲ್ಲ’ ಎಂಬ ಚರ್ಚೆ ಪ್ರಾರಂಭವಾಗಿದ್ದು, ತಾಲ್ಲೂಕಿನ ಬಹುತೇಕರು ಇದು ಒಂಟಿ ಸಲಗವೆಂ ಬುದನ್ನು ತಳ್ಳಿಹಾಕಿದ್ದಾರೆ. ಏಕೆಂದರೆ ಒಂದು ವರ್ಷಗಳ ಹಿಂದೆ ಕೊಟ್ರಕೆರೆ ಗ್ರಾಮದ ಖಾಸಗಿ ಕಾಫಿ ಎಸ್ಟೇಟಿನಲ್ಲಿ ಸಿಸಿ ಕ್ಯಾಮೆರವನ್ನು ಅಳವಡಿಸಿ ಒಂಟಿ ಸಲಗದ ಚಿತ್ರ ಸೆರೆ ಹಿಡಿಯಲಾಗಿದ್ದು, ಆ ಒಂಟಿ ಸಲಗಕ್ಕೆ ಕೇವಲ ಎಡಬದಿಯಲ್ಲಿ ಮಾತ್ರ ದಂತ ಬೆಳೆದಿತ್ತು. ಆದರೆ, ಗುರುವಾರ ಸೆರೆ ಹಿಡಿದ ಆನೆಗೆ ಎರಡೂ ಕಡೆಗಳಲ್ಲಿ ದಂತ ಬೆಳೆದಿದ್ದು, ಒಂಟಿ ಸಲಗವಲ್ಲ ಎನ್ನಲು ಪ್ರಮುಖ ಕಾರಣವಾಗಿತ್ತು.

ADVERTISEMENT

(ಮೂಡಿಗೆರೆ ತಾಲ್ಲೂಕಿನ ಕೊಟ್ರಕೆರೆ ಗ್ರಾಮದ ಖಾಸಗೀ ಕಾಫಿ ತೋಟದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರದಲ್ಲಿ ಒಂದು ವರ್ಷದ ಹಿಂದೆ ಸೆರೆ ಸಿಕ್ಕಿದ್ದ ಒಂಟಿ ಸಲಗದ ಚಿತ್ರ (ಸಂಗ್ರಹ ಚಿತ್ರ))

ಅಲ್ಲದೆ, ಒಂಟಿ ಸಲಗವು ಕೆಂಜಿಗೆ ಪ್ರದೇಶದಲ್ಲಿ ಎರಡು ದಿನಗಳಿಂದ ಕಾಣಿಸಿಕೊಳ್ಳುತ್ತಿದೆ ಎಂಬ ಸುದ್ದಿ ಹರಡಿರುವುದು ಕೂಡ, ಸೆರೆ ಹಿಡಿದಿರುವ ಕಾಡಾನೆಯು ಒಂಟಿ ಸಲಗವೇ, ಅಲ್ಲವೇ ಎಂಬ ಗೊಂದಲ ಸೃಷ್ಟಿಸಿದೆ. ಅರಣ್ಯ ಇಲಾಖೆಯು ರೈತರ ಕಣ್ಣೊರೆಸಲು ಹೇರಿಕೆ ಗ್ರಾಮದಲ್ಲಿದ್ದ ಎರಡು ಕಾಡಾನೆಗಳ ಗುಂಪಿನಲ್ಲಿದ್ದ ಆನೆಯೊಂದನ್ನು ಹಿಡಿದು ಅದನ್ನೇ ಒಂಟಿ ಸಲಗವೆಂದು ಬಿಂಬಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗೋಣಿಬೀಡು ಹಾಗೂ ಬಣಕಲ್‌ ಹೋಬಳಿಯ ಕೆಲವು ಪ್ರದೇಶಗಳಲ್ಲಿ ಮೂರು ಕಾಡಾನೆಗಳು ಓಡಾಡುತ್ತಿದ್ದು, ಅದರಲ್ಲಿ ಎರಡು ಗಂಡಾನೆಗಳ ಒಂದು ತಂಡ ಹಾಗೂ ಒಂಟಿ ಸಲಗ ಪ್ರತ್ಯೇಕವಾಗಿ ಸಂಚರಿಸುತ್ತಿದ್ದವು. ಒಂಟಿ ಸಲಗವು ಬಣಕಲ್‌ ಹಾಗೂ ಫಲ್ಗುಣಿ ಗ್ರಾಮದಲ್ಲಿ ದಾಳಿ ನಡೆಸಿ ಇಬ್ಬರನ್ನು ಬಲಿ ಪಡೆದಿತ್ತು. ಇಂತಹ ಪುಂಡಾನೆಯನ್ನು ಹಿಡಿಯಲೇ ಬೇಕು ಎಂದು ಒತ್ತಾಯಿಸಿದ್ದರಿಂದ ಸರ್ಕಾರವು ಒಂಟಿ ಸಲಗವನ್ನು ಹಿಡಿಯಲು ಆದೇಶ ನೀಡಿತ್ತು. ಆದರೆ, ಅರಣ್ಯ ಇಲಾಖೆಯು ಒಂಟಿ ಸಲಗವನ್ನು ಹಿಡಿಯದೇ, ಎರಡು ಆನೆಗಳ ತಂಡದಲ್ಲಿದ್ದ ಒಂದು ಆನೆಯನ್ನು ಸೆರೆ ಹಿಡಿದಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.

‘ಈಗ ಹಿಡಿದಿರುವುದು ಒಂಟಿ ಸಗಲವೇ. ಅದರಲ್ಲಿ ಅನುಮಾನವೇ ಇಲ್ಲ. ಮೂಡಿಗೆರೆ ತಾಲ್ಲೂಕಿನಲ್ಲಿ ಮೂರು ಕಾಡಾನೆಗಳು ತಿರುಗಾಡುತ್ತಿದ್ದು, ಅವುಗಳಲ್ಲಿ ಎರಡು ಆನೆಗಳು ಒಂದೆಡೆ ಹಾಗೂ ಒಂಟಿ ಸಲಗ ಪ್ರತ್ಯೇಕವಾಗಿದ್ದು, ಪ್ರತ್ಯೇಕವಾಗಿದ್ದ ಆನೆಯನ್ನೇ ಸೆರೆ ಹಿಡಿಯಲಾಗಿದೆ. ಇಲಾಖೆಯಲ್ಲಿ ಒಂಟಿ ಸಲಗದ ಚಿತ್ರವಿದ್ದು, ಅದು ಸೆರೆ ಹಿಡಿದಿರುವ ಆನೆಯ ಚಿತ್ರವೇ ಆಗಿದೆ. ಆದ್ದರಿಂದ ಜನತೆಗೆ ಅನುಮಾನವೇ ಬೇಡ. ಸರ್ಕಾರದ ಆದೇಶದಂತೆ ಒಂಟಿ ಸಲಗವನ್ನು ಹಿಡಿದು ನಾಗರಹೊಳೆಗೆ ಕಳುಹಿಸಲಾಗಿದ್ದು, ಉಳಿದ ಕಾಡಾನೆಗಳನ್ನು ಹಿಡಿಯಲಾಗುವುದಿಲ್ಲ ಎಂದು ಡಿಎಫ್‌ಒ ಚಂದ್ರಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

**

ಈಗ ಹಿಡಿದಿರುವುದು ಒಂಟಿಸಲಗವೇ. ಹಿಂದೆ ತೆಗೆದ ಫೋಟೋ ಇದೆ. ಅದೇ ಆನೆಯನ್ನು ಈಗ ಸೆರೆ ಹಿಡಿಯಲಾಗಿದೆ. ಇದು ಒಂಟಿ ಸಲಗವಲ್ಲ ಎಂಬುದು ನಿರಾಧಾರ’
-ಚಂದ್ರಣ್ಣ, ಡಿಎಫ್‌ಒ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.