ADVERTISEMENT

ಮೂಡಿಗೆರೆ: ಮಹಾಮಳೆಗೆ ಹಲವೆಡೆ ಅಪಾರ ಹಾನಿ

ಹೇಮಾವತಿ ನದಿಯಲ್ಲಿ ನೀರಿನಮಟ್ಟ ಹೆಚ್ಚಳ; ಕೆಲವು ಗ್ರಾಮಗಳ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 12:31 IST
Last Updated 13 ಜೂನ್ 2018, 12:31 IST

ಮೂಡಿಗೆರೆ: ತಾಲ್ಲೂಕಿನಾದ್ಯಂತ ಸೋಮವಾರ ತಡರಾತ್ರಿ ದಾಖಲೆ ಯ ಮಳೆ ಸುರಿದಿದ್ದು, ಅಪಾರ ಹಾನಿ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ಪಟದೂರಿನಲ್ಲಿ 20 ಇಂಚು, ಬಾಳೆಗದ್ದೆಯಲ್ಲಿ 22 ಇಂಚು, ಹಂತೂರಿನಲ್ಲಿ 21 ಇಂಚು, ಭೈರಾಪುರದಲ್ಲಿ 18 ಇಂಚು ಮಳೆ ಸುರಿದು ದಾಖಲೆ ಸೃಷ್ಟಿಸಿದೆ. ಸೋಮ ವಾರ ಸಂಜೆಯಿಂದಲೇ ಪ್ರಾರಂಭವಾದ ಮಳೆ, ಇಡೀ ರಾತ್ರಿ ಎಡಬಿಡದೇ ಸುರಿದಿ ದ್ದರಿಂದ ಒಂದೇ ರಾತ್ರಿಯಲ್ಲಿ ತಾಲ್ಲೂಕಿನ ನದಿಗಳೆಲ್ಲವೂ ಉಕ್ಕಿ ಹರಿದಿವೆ.

ಹೇಮಾವತಿ ನದಿಯಲ್ಲಿ ನೀರಿನಮಟ್ಟ ಹೆಚ್ಚಳವಾಗಿ ಉಗ್ಗೆಹಳ್ಳಿ ಕಾಲೋನಿ ಸಮೀಪದವರೆಗೂ ನೀರು ನುಗ್ಗಿದೆ. ಕಾಲೋನಿಯ ಬಹುತೇಕ ಜನರು ಊರ ಆಚೆಗಿರುವ ನೆಂಟರಿಷ್ಟರ ಮನೆಯಲ್ಲಿ ಇಡೀ ರಾತ್ರಿ ಕಳೆದಿದ್ದಾರೆ. ಮುಂಜಾನೆ ಶಾಸಕ ಎಂ.ಪಿ. ಕುಮಾರಸ್ವಾಮಿ ಗ್ರಾಮಕ್ಕೆ ಭೇಟಿ ನೀಡಿ, ಸ್ಥಳಕ್ಕೆ ಅಧಿಕಾರಿಗಳನ್ನು ಕರೆಯಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಬಿಳ್ಳೂರು– ದೇವರಮನೆ ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಈ ಭಾಗದಲ್ಲಿ ಹರಿಯುವ ರಾಮಕ್ಕನ ಹಳ್ಳ ತುಂಬಿ ಹರಿದಿದ್ದು, ಈ ಹಳ್ಳಕ್ಕೆ ಬಾಳೆಗದ್ದೆ ಗ್ರಾಮದಲ್ಲಿ ನಿರ್ಮಿಸಿರುವ ಸೇತುವೆ ಹಾನಿಯಾಗಿದೆ. ಸೇತುವೆಯ ಒಂದು ಭಾಗ ಸಂಪೂರ್ಣ ಕುಸಿದು, ಮೂಲರಹಳ್ಳಿ, ದೇವರಮನೆ, ಗುತ್ತಿ ಭಾಗಗಳಿಗೆ ಸಂಪರ್ಕ ಕಡಿತವಾಗುವ ಅಪಾಯ ಎದುರಾಗಿದೆ. ರಾಮಕ್ಕನಹಳ್ಳ ಉಕ್ಕಿ ಹರಿದಿದ್ದರಿಂದ ಸೀಗಡಿಮೂಲೆ ಕಾಲೋನಿ ಬಳಿಯಿರುವ ಸೇತುವೆಯ ಮೇಲೆ ನೀರು ಉಕ್ಕಿದ್ದು, ಸೀಗಡಿಮೂಲೆ ಗ್ರಾಮದ ಸಂಪರ್ಕ ಸಂಪೂರ್ಣ ಕಡಿತವಾಗಿತ್ತು. ಬಿಳ್ಳೂರು, ಪಟ್ಟದೂರು, ಗುತ್ತಿ, ಮೂಲರಹಳ್ಳಿ ಭಾಗಗಳಿಗೆ ವಿದ್ಯುತ್‌ ಪೂರೈಕೆ ಮಾಡಲು ಕಿಮ್ಮನೆ ಎಸ್ಟೇಟ್‌ ಬಳಿ ಅಳವಡಿಸಿರುವ ವಿದ್ಯುತ್‌ ಪರಿವರ್ತಕಗಳು ನೀರಿನಲ್ಲಿ ಮುಳುಗಿದ್ದು, ಅಪಾರ ಹಾನಿ ಸಂಭವಿಸಿದೆ.

ADVERTISEMENT

ಸೋಮವಾರ ತಡರಾತ್ರಿ ಗೌಡಳ್ಳಿ ಗ್ರಾಮದಲ್ಲಿ ಸುರಿದ ಮಳೆಗೆ ಹೆಮ್ಮದಿಯ ನಾರಾಯಣಗೌಡ ಎಂಬುವವರ ಮನೆಗೋಡೆ ಕುಸಿದಿದ್ದು, ಅಪಾರ ಹಾನಿ ಉಂಟಾಗಿದೆ. ಬಾಳೆಗದ್ದೆ ಗ್ರಾಮದ ಡಿ.ಎಲ್‌.ಅಶೋಕ್‌ ಎಂಬುವವರ ಕಾಫಿ ಕಣ ಕುಸಿದಿದ್ದು ಅಪಾರ ನಷ್ಟ ಸಂಭವಿಸಿದೆ.

ಮಳೆಯಿಂದಾಗಿ ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು. ಮಂಗಳವಾರ ಮುಂಜಾನೆ ಧಾರಾಕಾರ ಮಳೆ ಸುರಿದರೂ, ಮಧ್ಯಾಹ್ನದ ಬಳಿಕ ಮಳೆ ಕುಂಠಿತವಾಗಿದ್ದು ಐದು ದಿನಗಳ ಬಳಿಕ ಬಿಸಿಲು ಕಾಣುವಂತಾಯಿತು.

ಬೆಳೆ ನಾಶ

ಹಂತೂರು ಗ್ರಾಮದ ಬಳಿ ಹೇಮಾವತಿ ನದಿಯು ಗದ್ದೆ ಬಯಲಿಗೆ ನುಗ್ಗಿದ್ದು, ನದಿ ತೀರದ ಗದ್ದೆಗಳಲ್ಲಿ ಬೆಳೆಯಲಾಗಿದ್ದ ಭತ್ತದ ಸಸಿಮಡಿಗಳು, ಶುಂಠಿ ಬೆಳೆಯೆಲ್ಲವೂ ಜಲಾವೃತವಾಗಿ ಹಾನಿ ಉಂಟಾಗಿದೆ. ಹಲವೆಡೆ ಕಾಫಿ ತೋಟಗಳಲ್ಲಿ ಮರಬಿದ್ದು ಹಾನಿ ಸಂಭವಿಸಿದ್ದರೆ, ವಿಪರೀತ ಮಳೆ ಸುರಿದಿದ್ದರಿಂದ ಹೀಚುಕಟ್ಟಿದ ಕಾಫಿಯೆಲ್ಲವೂ ನೆಲಕ್ಕುರುಳಿದೆ. ಮಳೆಯಿಂದಾಗಿ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತವಾಗಿದ್ದು, ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್‌ ಪೂರೈಕೆ ಮರೀಚಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.