ADVERTISEMENT

ಖಬರಸ್ತಾನ: ಚೈನ್‌ಲಿಂಕ್‌ ಮೆಷ್‌ ಅಳವಡಿಕೆ, ಬೇಲಿ ಬಿಗಿ

ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ಪ್ರದೇಶ

ಬಿ.ಜೆ.ಧನ್ಯಪ್ರಸಾದ್
Published 27 ಸೆಪ್ಟೆಂಬರ್ 2018, 19:43 IST
Last Updated 27 ಸೆಪ್ಟೆಂಬರ್ 2018, 19:43 IST
ಚೈನ್‌ಲಿಂಕ್‌ ಮೆಷ್‌ ಅಳವಡಿಸಿರುವ ಬೇಲಿ
ಚೈನ್‌ಲಿಂಕ್‌ ಮೆಷ್‌ ಅಳವಡಿಸಿರುವ ಬೇಲಿ   

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ಮುಂಭಾಗದ ಖಬರಸ್ತಾನದ ಆವರಣದ ಸುತ್ತಲೂ ಚೈನ್‌ಲಿಂಕ್‌ ಮೆಷ್‌ ಅಳವಡಿಸಿ ಬೇಲಿ ಬಿಗಿಗೊಳಿಸಲಾಗಿದೆ.

ಮುಳ್ಳುತಂತಿಯನ್ನು ತೆಗೆಯಲಾಗಿದೆ. ಆವರಣದಲ್ಲಿನ ಕಂಬಗಳಿಗೆ ಅಡ್ಡಡ್ಡ ಕಬ್ಬಿಣದ ಪೈಪುಗಳನ್ನು ಬೆಸೆಯಲಾಗಿದೆ. ಒಂದೊಂದು ಅಡಿ ಅಂತರದಲ್ಲಿ ಪೈಪುಗಳನ್ನು ಅಳವಡಿಸಲಾಗಿದೆ. ಕಬ್ಬಿಣದ ಪೈಪುಗಳ ಮೇಲೆ ಸುತ್ತ ಚೈನ್‌ ಲಿಂಕ್‌ ಮೆಷ್‌ ಅಳವಡಿಸಲಾಗಿದೆ. ಆವರಣದೊಳಕ್ಕೆ ಯಾರು ನುಸುಳದಂತೆ ತಡೆಯಲು ಬೇಲಿ ಭದ್ರಗೊಳಿಸಲಾಗಿದೆ. ಖಬರಸ್ತಾನ ಪ್ರದೇಶ 170 ಮೀಟರ್‌ ಸುತ್ತಳತೆ ಇದೆ. ಬೇಲಿ ಆರು ಅಡಿ ಎತ್ತರ ಇದೆ.

‘ಬೇಲಿ ಬಿಗಿಗೊಳಿಸುವ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿಗೆ ₹ 7. 5ಲಕ್ಷ ವೆಚ್ಚ ತಗುಲಿದೆ. ಆರು ಅಡಿ ಎತ್ತರದ ಬೇಲಿಯನ್ನು ಜಿಗಿಯುವುದು ಕಷ್ಟ. ಬೇಲಿಯ ತುದಿ ಭಾಗದಲ್ಲಿ ಮುಳ್ಳುತಂತಿ ಸುರಳಿಯನ್ನು ಅಳವಡಿಸುವುದಿಲ್ಲ’ ಎಂದು ಕಾಮಗಾರಿ ನಿರ್ವಹಿಸಿದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಮಕೃಷ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮುಳ್ಳುತಂತಿ ಬೇಲಿ ಇದ್ದಾಗ ತಂತಿ ಬಾಗಿಸಿ, ವಾಲಿಸಿ ಒಳಕ್ಕೆ ನುಸುಳಬಹುದಾಗಿತ್ತು. ಈಗ ಚೈನ್‌ಲಿಂಕ್‌ ಮೆಷ್‌ ಅಳವಡಿಸಿದ್ದೇವೆ. ಅದನ್ನು ಭೇದಿಸಿಕೊಂಡು ಒಳ ನುಗ್ಗುವುದಕ್ಕೆ ಆಗುವುದಿಲ್ಲ. ಕಂಬಿಗಳಿಗೆ ಪೈಪುಗಳನ್ನು ಬೆಸೆಯಲಾಗಿದೆ’ ಎಂದು ತಿಳಿಸಿದರು.

2017ರ ಡಿಸೆಂಬರ್‌ನಲ್ಲಿ ಜರುಗಿದ ದತ್ತ ಜಯಂತಿ ಸಂದರ್ಭದಲ್ಲಿ ದರ್ಗಾ ಮುಂಭಾಗದಲ್ಲಿನ ಖಬರಸ್ತಾನದೊಳಕ್ಕೆ ಕೆಲವರು ನುಗ್ಗಿದ್ದರು. ಈ ಸಂದರ್ಭದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು.

ಐ.ಡಿ ಪೀಠದ ದರ್ಗಾ ಪ್ರದೇಶದ ಖಬರಸ್ಥಾನ ಮತ್ತು ಜಮಾಲ ಸುತ್ತ ಚೈನ್‌ಲಿಂಕ್‌ ಮೆಷ್‌ ಬೇಲಿ ಅಳವಡಿಸಲು ಜಿಲ್ಲಾಡಳಿತ ಆದೇಶ ನೀಡಿತ್ತು. ಕಾಮಗರಿಗೆ ಅನುದಾನ ಮಂಜೂರು ಮಾಡಿತ್ತು. ಕಾಮಗಾರಿ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿತ್ತು.

ಡಿಸೆಂಬರ್‌ನಲ್ಲಿ ದತ್ತ ಜಯಂತಿ ಜರುಗುತ್ತದೆ. ದತ್ತ ಪಾದುಕೆ ದರ್ಶನಕ್ಕೆ ಭಕ್ತರ ದಂಡು ಗಿರಿಗೆ ಹರಿದು ಬರುತ್ತದೆ. ನೂರಾರು ವಾಹನಗಳು ಬರುತ್ತವೆ. ನಗರ ಮತ್ತು ಗಿರಿಯಲ್ಲಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗುತ್ತದೆ.

‘ಸೆಪ್ಟೆಂಬರ್‌ ಅಂತ್ಯದೊಳಗೆ ಕಾಮಗಾರಿ ಮುಗಿಸುವಂತೆ ನಿರ್ಮಿತಿ ಕೇಂದ್ರದವರಿಗೆ ಸೂಚನೆ ನೀಡಲಾಗಿತ್ತು. ಜುಲೈ, ಆಗಸ್ಟ್‌ನಲ್ಲಿ ಮಳೆಯಿಂದಾಗಿ ಕೆಲದಿನ ಕಾಮಗಾರಿ ಸ್ತಗಿತಗೊಳಿಸಿದ್ದರು. ಕೆಲದಿನಗಳಿಂದ ಮಳೆ ಬಿಡುವು ನೀಡಿತ್ತು. ಕಳೆದ ವಾರ ಕಾಮಗಾರಿ ಮುಗಿಸಿದ್ದಾರೆ. ವಸತಿ ಗೃಹದ ಚಾವಣಿ ನೀರು ಬೀಳದಂತೆ ವ್ಯವಸ್ಥೆ, ಜನರೇಟರ್‌ ಇಡಲು ಕೊಠಡಿ ನಿರ್ಮಾಣ, ಚಾವಣಿಗೆ ಶೀಟುಗಳ ಅಳವಡಿಕೆ ಕಾಮಗಾರಿಗಳೂ ಮುಗಿದಿವೆ’ ಎಂದು ಧಾರ್ಮಿಕ ದತ್ತ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.