ADVERTISEMENT

ಉದ್ಯೋಗದಾತನಿಗೆ ನೌಕರರ ಕ್ಷೇಮವೂ ಮುಖ್ಯ

‘ಆರೋಗ್ಯಭಾಗ್ಯ ಕಾರ್ಯಾಗಾರ’ದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಮಂಜುಶ್ರೀ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 10:59 IST
Last Updated 26 ನವೆಂಬರ್ 2015, 10:59 IST

ಚಿತ್ರದುರ್ಗ: ‘ಸಿಬ್ಬಂದಿಗೆ ಕೆಲಸಕ್ಕೆ ತಕ್ಕ ವೇತನ, ಪೂರಕ ವಾತಾವರಣ ಹಾಗೂ ಆರೋಗ್ಯ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವವನು ಮಾತ್ರ ಉತ್ತಮ ಉದ್ಯೋಗದಾತ ಎಂದು ಕರೆಸಿಕೊಳ್ಳಲು ಸಾಧ್ಯ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಮಂಜುಶ್ರೀ ಹೇಳಿದರು.

ನಗರದ ಗುರುಭವನದಲ್ಲಿ ಜಿಲ್ಲಾಡಳಿತ, ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ, ಆಶ್ರಯದಲ್ಲಿ ವಿವಿಧ ಇಲಾಖೆ ಡ್ರಾಯಿಂಗ್ ಅಧಿಕಾರಿಗಳು ಹಾಗೂ ವಿಷಯ ನಿರ್ವಾಹಕರಿಗಾಗಿ ಹಮ್ಮಿಕೊಂಡಿದ್ದ ‘ಜ್ಯೋತಿ ಸಂಜೀವಿನಿ’ ಆರೋಗ್ಯ ಭಾಗ್ಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಜ್ಯೋತಿ ಸಂಜೀವಿನಿ ಯೋಜನೆಯಡಿ ಯಾವ ರೀತಿ ಚಿಕಿತ್ಸೆ ಪಡೆದು ಕೊಳ್ಳಬೇಕು ಎಂಬ ಬಗ್ಗೆ ನೌಕರರಲ್ಲಿ ಸ್ಪಷ್ಟ ಮಾಹಿತಿ ಇಲ್ಲ. ಈ ಕುರಿತು ಅರಿವು ಮೂಡಿಸಲು ಈ ಕಾರ್ಯಗಾರ ಆಯೋಜಿಸಲಾಗಿದೆ’ ಎಂದು ಅವರು ತಿಳಿಸಿದರು.

ನಗದು ರಹಿತ ಚಿಕಿತ್ಸೆ:  ‘ಸರ್ಕಾರಿ ನೌಕರರು ತಮ್ಮ ಹಾಗೂ ಅವಲಂಬಿತರ ವೈದ್ಯಕೀಯ ವೆಚ್ಚ ಭರಿಸಲು ಒಂದೆರಡು ಲಕ್ಷ ಹಣವನ್ನು ಇಟ್ಟುಕೊಳ್ಳಬೇಕಾಗು ತ್ತಿತ್ತು. ಸರ್ಕಾರಿ ನೌಕರರಿಗೆ ಈವರೆಗೆ ಚಿಕಿತ್ಸೆ ನಂತರ ವೆಚ್ಚದ ಮರುಪಾವತಿ ಮಾಡುವ ವ್ಯವಸ್ಥೆ ಜಾರಿಯಲ್ಲಿತ್ತು. ಸರ್ಕಾರವು ಹೊಸದಾಗಿ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಲು ‘ಜ್ಯೋತಿ ಸಂಜೀವಿನಿ’ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸಿದೆ’ ಎಂದು ಹೇಳಿದರು.

ಆರ್ಥಿಕ ಇಲಾಖೆಗೆ ಜಿ.ಪಂ.ನಿಂದ ಪತ್ರ: ವಿವಿಧ ಇಲಾಖೆ ಅಧಿಕಾರಿಗಳ, ಸಿಬ್ಬಂದಿಯ ವೈದ್ಯಕೀಯ ವೆಚ್ಚದ ಬಿಲ್‌ ಗಳ ಮರುಪಾವತಿಗೆ ಸಾಕಷ್ಟು ಅನುದಾನ ಬೇಕಾಗಿದೆ. ಶಿಕ್ಷಣ ಇಲಾಖೆ ಸಿಬ್ಬಂದಿಯ ವೈದ್ಯಕೀಯ ವೆಚ್ಚದ ಬಿಲ್‌ಗಳಿಗೆ ₹ 2.5 ಕೋಟಿ ಮರುಪಾವತಿಸಬೇಕಾಗಿದೆ. ಅನುದಾನಕ್ಕಾಗಿ ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

ಜ್ಯೋತಿ ಸಂಜೀವಿನಿ ಯೋಜನೆ ಜಾರಿ ಮಾಡುತ್ತಿರುವುದರಿಂದ ಅನುದಾನ ನೀಡಿಲ್ಲ ಎಂದು ಸಂಬಂಧಿ ಸಿದ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬಾಕಿ ಇರುವ ವೈದ್ಯಕೀಯ ವೆಚ್ಚದ ಬಿಲ್ಲುಗಳಿಗೆ ಮರುಪಾವತಿಗೆ ಅನುದಾನ ನೀಡಲು ಆರ್ಥಿಕ ಇಲಾಖೆಗೆ ಜಿಲ್ಲಾ ಪಂಚಾಯ್ತಿ ವತಿಯಿಂದ ಪತ್ರ ಬರೆಯ ಲಾಗುವುದು’ ಎಂದು ಹೇಳಿದರು.

ಸದ್ಯ ಏಳು ಕಾಯಿಲೆಗಳಿಗೆ ಚಿಕಿತ್ಸೆ:  ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯಲ್ಲಿ ಪ್ರಸ್ತುತ ಏಳು ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿಯು ಕಾಲಕಾಲಕ್ಕೆ ಇದನ್ನು ಪರಾಮರ್ಶಿಸಿ ನೌಕರರ ಅವಶ್ಯಕತೆಗೆ ಅನುಗುಣವಾಗಿ ವಿಸ್ತರಣೆಗೆ ಕ್ರಮಕೈಗೊಳ್ಳಲಿದೆ’ ಎಂದರು.

ರಾಜ್ಯದಲ್ಲಿ ಈಗಾಗಲೇ ಹಲವು ಇಲಾಖೆಗಳಲ್ಲಿ 2.25 ಲಕ್ಷ ಹುದ್ದೆಗಳು ಖಾಲಿ ಇವೆ. 1968ರ ಜನಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ಸಂಖ್ಯೆ ನಿಗದಿ ಮಾಡಿ ಜಾಬ್‌ಚಾರ್ಟ್ ಮಾಡಲಾಗಿದೆ. ಆದರೆ, ಜನಸಂಖ್ಯೆ ಸಾಕಷ್ಟು ಹೆಚ್ಚಿದ್ದರೂ ನೌಕರರ ಸಂಖ್ಯೆ ಹೆಚ್ಚಾಗಿಲ್ಲ. ಇದರಿಂದ ನೌಕರರ ಮೇಲಿನ ಕೆಲಸದ ಒತ್ತಡ ಹೆಚ್ಚಾಗಿದೆ. ಒತ್ತಡ ಹೆಚ್ಚಾಗಿ ರಕ್ತದೊತ್ತಡ, ಮಧುಮೇಹದಂತ ಕಾಯಿಲೆಗಳಿಗೆ ಹೆಚ್ಚು ಸರ್ಕಾರಿ ನೌಕರರು ತುತ್ತಾಗುತ್ತಿದ್ದಾರೆ. ಸರ್ಕಾರ ನೌಕರರ ಆರೋಗ್ಯ ರಕ್ಷಣೆ ಮಾಡಲು ಈ ಯೋಜನೆ ಜಾರಿಗೆ ತಂದಿರುವುದು ಉತ್ತಮ ಬೆಳವಣಿಗೆ’ ಎಂದು ಮೆಚ್ಚುಗೆ ಸೂಚಿಸಿದರು.

ಎಸ್‌ಪಿ ಎಂ.ಎನ್.ಅನುಚೇತ್, ಶಿಕ್ಷಣ ಇಲಾಖೆ ಉಪನಿರ್ದೇಶಕ ರೇವಣಸಿದ್ದಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುಳಮ್ಮ, ಸುವರ್ಣ ಆರೋಗ್ಯ ಟ್ರಸ್ಟ್‌ನ ವಿಭಾಗೀಯ ವ್ಯವಸ್ಥಾಪಕ ಎಸ್.ವೀರೇಶ್, ಡಾ.ಕೋರಧಾನ್ಯಮಠ್ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

ಪ್ರಸಕ್ತ ಆರ್ಥಿಕ ವರ್ಷ ಮುಕ್ತಾಯಕ್ಕೆ ಕೆಲವೇ ತಿಂಗಳು ಬಾಕಿ ಇದ್ದು, ಇಲಾಖೆಗೆ ನೀಡಿದ ಗುರಿ ತಲುಪಲು ಎಲ್ಲರೂ ಒಟ್ಟಾಗಿ ಶ್ರಮಿಸಿ.
ಮಂಜುಶ್ರೀ,
ಜಿ.ಪಂ.ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.