ADVERTISEMENT

ಮುಂದಿನ ವರ್ಷ ಮೆಡಿಕಲ್ ಕಾಲೇಜು ಆರಂಭ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 8:54 IST
Last Updated 16 ಜುಲೈ 2017, 8:54 IST

ಚಿತ್ರದುರ್ಗ: ಕೇಂದ್ರ ಸರ್ಕಾರದಿಂದ ಮಂಜೂರಾತಿ  ದೊರೆತರೆ ಕೋಟೆನಾಡಿನಲ್ಲಿ 2018–19ರ ಜುಲೈ ನಿಂದ 150 ವಿದ್ಯಾರ್ಥಿಗಳನ್ನು ಒಳಗೊಂಡ ಸರ್ಕಾರಿ ವೈದ್ಯಕೀಯ ಕಾಲೇಜು ವಿಧ್ಯುಕ್ತವಾಗಿ ಆರಂಭವಾಗಲಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಚಿತ್ರದುರ್ಗಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆ ಮಾಡಿದ ನಂತರ, ಹಂತ ಹಂತವಾಗಿ ಪ್ರಕ್ರಿಯೆಗಳು ನಡೆಯುತ್ತಿದೆ. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ತಂಡ ಭೇಟಿ ನೀಡಿ, ನಗರದಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಬೇಕಾದ ಮೂಲ ಸೌಲಭ್ಯಗಳಿದ್ದು, ಮುಂದಿನ ವರ್ಷದಿಂದ ಕಾಲೇಜು ಆರಂಭಿಸಬಹುದು ಎಂದು ಹಸಿರು ನಿಶಾನೆ ತೋರಿಸಿತ್ತು.

ಆರೋಗ್ಯ ವಿಶ್ವವಿದ್ಯಾಲಯ ನೀಡಿದ ಮಾನ್ಯತೆ ಪತ್ರವನ್ನು ಆಧರಿಸಿ, ರಾಜ್ಯ ಸರ್ಕಾರ ಮುಂದಿನ ವರ್ಷದಿಂದ ಕಾಲೇಜು ಆರಂಭಕ್ಕೆ ಸಿದ್ಧತೆ ನಡೆಸಿದೆ. ಆರೋಗ್ಯ ಇಲಾಖೆಯ (ವೈದ್ಯಕೀಯ ಶಿಕ್ಷಣ ವಿಭಾಗ) ಹೆಚ್ಚುವರಿ ಕಾರ್ಯದರ್ಶಿ ಅವರು  ಕೇಂದ್ರ ಸರ್ಕಾರದ ಅನುಮತಿಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದಾರೆ. ಕಾಲೇಜು ಆರಂಭಕ್ಕೆ ಬೇಕಾದ ಸಿದ್ಧತೆ ಕುರಿತು ಶನಿವಾರ ಜಿಲ್ಲಾ ಆಸ್ಪತ್ರೆಯ ಬಿ.ಸಿ.ರಾಯ್ ಸಭಾಂಗಣದಲ್ಲಿ ಸಂಸದ ಬಿ.ಎನ್. ಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಜಗದೀಶ್, ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಸಭೆಗೆ ತಿಳಿಸಿದರು. ‘ಭಾರತೀಯ ವೈದ್ಯಕೀಯ ಮಂಡಳಿ ನಿಯಮಾನುಸಾರ ಕಾಲೇಜು ಆರಂಭಕ್ಕೆ ಅಗತ್ಯವಾದ ಜಮೀನು, 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಜತೆಗೆ ಎಲ್ಲ ಮೂಲಸೌಲಭ್ಯಗಳೂ ಇವೆ. ಇದನ್ನು  ಸ್ಥಳ ಪರಿಶೀಲನೆಗೆ ಭೇಟಿ ನೀಡಿದ ತಂಡಗಳಿಗೆ ಮಾಹಿತಿ ನೀಡಿದ್ದೇವೆ. ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನೀಡಿದ ಮಾನ್ಯತಾ ಪತ್ರಗಳನ್ನು ಸರ್ಕಾರಕ್ಕೆ ಕಳುಹಿಸಿದ್ದೇವೆ’ ಎಂದು ತಿಳಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಬಿ.ಎನ್.ಚಂದ್ರಪ್ಪ, ‘ಈ ವಾರದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರೊಂದಿಗೆ ಚರ್ಚಿಸುತ್ತೇನೆ. ಶೀಘ್ರ ಅನುಮತಿ ತರುವ ಕೆಲಸ ಮಾಡುತ್ತೇನೆ. ಉಳಿದ ಕೆಲಸಗಳನ್ನು ತ್ವರಿತಗತಿಯಲ್ಲಿ ಮುಂದುವರಿಸಿ’ ಎಂದು ಸಲಹೆ ನೀಡಿದರು.

ಡಾ.ಜಗದೀಶ್ ಮುಂದಿನ ಪ್ರಕ್ರಿಯೆಗಳ ಕುರಿತು ಮಾತನಾಡಿ, ‘ಸ್ಥಳ ಪರಿವೀಕ್ಷಣೆಗಾಗಿ ಭಾರತೀಯ ವೈದ್ಯಕೀಯ ಮಂಡಳಿಗೆ  ₹3.5 ಲಕ್ಷ ಶುಲ್ಕ ಪಾವತಿಸಿದ್ದೇವೆ. ಕಾಲೇಜು ಮಂಜೂರಾದರೆ, ಅದಕ್ಕೆ ಬೇಕಾದ ಸೌಲಭ್ಯಗಳನ್ನು ಮಾಡಿಕೊಳ್ಳುತ್ತೇವೆ. ಡೀನ್ ನಿಯೋಜನೆಯಾದ ಕೂಡಲೇ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಉಪನ್ಯಾಸಕರ ನೇಮಕ ಪ್ರಕ್ರಿಯೆ ನಡೆಯುತ್ತದೆ. ಆಗ ಈ ಎಲ್ಲ ಸೌಲಭ್ಯಗಳನ್ನೂ ನೀಡಲಾಗುತ್ತದೆ. ಕೇಂದ್ರದಿಂದ ಒಪ್ಪಿಗೆ ದೊರೆತರೆ, ಎಂಸಿಐ ತಂಡ ಪರಿಶೀಲನೆಗಾಗಿ ಬರಲಿದೆ’ ಎಂದರು.

‘ವೈದ್ಯಕೀಯ ಕಾಲೇಜಿಗಾಗಿ ಕಟ್ಟಡಗಳನ್ನು ನಿರ್ಮಿಸಬೇಕಾದರೆ ಈಗಿರುವ ಡಿಎಚ್ಒ ಕಚೇರಿ, ರಕ್ತ ನಿಧಿ ಮತ್ತು ನರ್ಸಿಂಗ್ ಕಾಲೇಜು ತೆರವು ಮಾಡಬೇಕಾಗುತ್ತದೆ. ಅವುಗಳಿಗೆ ಯಾವ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೀರಿ’ ಎಂದು ಚಂದ್ರಪ್ಪ ಕೇಳಿದರು.

‘ರಕ್ತ ನಿಧಿ ಹೊರತುಪಡಿಸಿ ಎಲ್ಲ ಕಟ್ಟಡಗಳಿಗೂ ಪರ್ಯಾಯ ವ್ಯವಸ್ಥೆ ಮಾಡಬಹದು. ಜಿಲ್ಲಾ ಆಸ್ಪತ್ರೆಗೆ ₹60 ಲಕ್ಷ ವೆಚ್ಚದಲ್ಲಿ ರಕ್ತ ವಿದಳ ಘಟಕ ಮಂಜೂರಾಗಿದ್ದು, ಉಪಕರಣ ಬಂದಿದ್ದು, ಅನುಷ್ಠಾನವಾಗಬೇಕಿದೆ. ಈ ಘಟಕ ಆರಂಭವಾದರೆ ರಕ್ತದ ಪ್ಲೇಟ್ ಲೆಟ್ಸ್‌ಗಳನ್ನು ಇಲ್ಲೇ ಸಂಗ್ರಹಿಸಿಡಬಹುದು. ರಕ್ತ ನಿಧಿ ಘಟಕವನ್ನೇ ತೆರವುಗೊಳಿಸುವ ವಿಚಾರದಲ್ಲಿ ನಾವು ಗೊಂದಲದಲ್ಲಿದ್ದೇವೆ. ಸದ್ಯ ಡೆಂಗಿ, ಚಿಕೂನ್‌ಗುನ್ಯಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಘಟಕ ಸ್ಥಳಾಂತರ ಕಷ್ಟ’ ಎಂದು ಜಗದೀಶ್ ವಿವರಿಸಿದರು.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ‘ಕಾಲೇಜಿಗೆ ಬೇಕಾದ ಜಾಗದ ಖಾತೆಯಾಗಿದೆ. ಜಿಲ್ಲಾಡಳಿತದಿಂದ ಆಗಬೇಕಾದ ಪ್ರತಿಯೊಂದು ಕೆಲಸಗಳನ್ನೂ ಪೂರ್ಣಗೊಳಿಸಿದ್ದೇವೆ. ಗಣಿ ಬಾಧಿತ ಪ್ರದೇಶ ಅಭಿವೃದ್ಧಿ ನಿಧಿಯಿಂದ ವೈದ್ಯಕೀಯ ಕಾಲೇಜಿಗಾಗಿ ₹220 ಕೋಟಿ ಮೀಸಲಿಟ್ಟಿದ್ದೇವೆ’ ಎಂದು ತಿಳಿಸಿದರು.

‘ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಬೇಕಾದ ಹಣ ಬಿಡುಗಡೆ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ಜತೆ ಸಮಾತನಾಡುವೆ. ನಂತರ ಸಚಿವರೊಂದಿಗೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಚರ್ಚಿಸುತ್ತೇನೆ’ ಎಂದರು. ಸಭೆಯಲ್ಲಿ ಕೆಎಚ್ಎಸ್‌ಡಿಆರ್ ಪಿ ಎಂಜಿನಿಯರ್ ರಮೇಶ್, ನಿವಾಸಿ ವೈದ್ಯಾಧಿಕಾರಿ ಡಾ.ಆನಂದ ಪ್ರಕಾಶ್, ಪೌರಾಯುಕ್ತ ಚಂದ್ರಪ್ಪ ಮತ್ತು ಆಸ್ಪತ್ರೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.