ADVERTISEMENT

‘ಸೋಲಾರ್‌ ಕಂಪೆನಿಗೆ ಎನ್‌ಒಸಿ ಬೇಡ’

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 5:03 IST
Last Updated 18 ಜುಲೈ 2017, 5:03 IST

ಧರ್ಮಪುರ: ಕಣಜನಹಳ್ಳಿಯಿಂದ ಮದ್ದಿಹಳ್ಳಿಯ ಬೆಸ್ಕಾಂ ಘಟಕಕ್ಕೆ ವಿದ್ಯುತ್‌ ಸರಬರಾಜು ಮಾಡಲು ಉದ್ದೇಶಿಸಿರುವ ಸೋಲಾರ್‌ ವಿದ್ಯುತ್‌ ಕಂಪೆನಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಬಾರದು ಎಂದು ಒತ್ತಾಯಿಸಿ ರೈತರು ಸೋಮವಾರ ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗಹಾಕಿ ಧರಣಿ ನಡೆಸಿದರು.

‘ವಿದ್ಯುತ್‌ ಕಂಬ ಅಳವಡಿಸುವ ಮೊದಲು ಸೋಲಾರ್‌ ಕಂಪೆನಿ ರೈತರಿಗೆ ಪರಿಹಾರದ ಹಣ ಸಂದಾಯ ಮಾಡಬೇಕು ಎಂಬ ನಿಯಮವಿದೆ. ಆ ಬಳಿಕವೇ ಗ್ರಾಮ ಪಂಚಾಯ್ತಿಯು ಎನ್‌ಒಸಿ ನೀಡಬೇಕು. ಆದರೆ, ಕಣಜನಹಳ್ಳಿ, ಬೇತೂರು, ಬೆಟ್ಟಗೊಂಡನಹಳ್ಳಿ ಗ್ರಾಮಗಳ ಸುಮಾರು 165 ಎಕರೆಗೆ ಕಂಪೆನಿ  ಇನ್ನೂ ಹಣ ಪಾವತಿಸಿಲ್ಲ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ಈಗಾಗಲೇ ರೈತರ ಜಮೀನಿನಲ್ಲಿ ಗುತ್ತಿಗೆದಾರರು ಕಂಬ ನಿಲ್ಲಿಸಿದ್ದಾರೆ. ಕೆಲವೇ ದಿನಗಳಲ್ಲಿ ಕಾಮಗಾರಿ ಸಂಪೂರ್ಣ ಮುಗಿದು, ವಿದ್ಯುತ್‌ ಸರಬರಾಜು ಕೂಡ ಆಗಲಿದೆ. ಈ ಪ್ರಕ್ರಿಯೆಗೂ ಮುನ್ನ ನ್ಯಾಯ ಒದಗಿಸಿಕೊಡಿ’ ಎಂದು ರೈತರು ಒತ್ತಾಯಿಸಿದರು.

ADVERTISEMENT

ಪಿಡಿಒ ಹೇಳಿಕೆ:  ‘ಕಣಜನಹಳ್ಳಿಯ 58 ಎಕರೆಯ ಪಹಣಿ ಈಗಾಗಲೇ ಕಂಪೆನಿ ಹೆಸರಿಗಾಗಿದೆ. ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಅಂಥವುಗಳಿಗೆ ಮಾತ್ರ ಎನ್‌ಒಸಿ ಕೊಡಲು ತೀರ್ಮಾನಿಸಲಾಗಿದೆ. ಇದರಲ್ಲಿ ರೈತರಿಗೆ ತೊಂದರೆಯಾಗಿಲ್ಲ. ಬೆಟ್ಟಗೊಂಡನಹಳ್ಳಿ ಜಮೀನಿನ ಬಗ್ಗೆ ಎನ್‌ಒಸಿ ನೀಡಿಲ್ಲ’ ಎಂದು ಪಿಡಿಒ ಶ್ರೀನಿವಾಸ್‌ ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಡಾ.ಶ್ರೀಧರ್‌ ಬಾರಿಕೇರ್‌ ಮಾತನಾಡಿ, ‘ಯಾರಿಗೂ ಅನ್ಯಾಯವಾಗಿಲ್ಲ. ಎನ್‌ಒಸಿ ಯನ್ನೂ ನೀಡಿಲ್ಲ. ರೈತರು ಆತಂತಕ್ಕೆ ಒಳಗಾಗಬೇಡಿ’ ಎಂದು ಹೇಳಿದರು.

ತಿಪ್ಪೇಸ್ವಾಮಿ, ನಾಗರಾಜ್‌, ಓಬಳೇಶ್‌, ಶಿವಣ್ಣ, ಕದುರಪ್ಪ, ಸಣ್ಣಮ್ಮ, ಹೊನ್ನೇಶ್‌, ಕಾಂತರಾಜ್‌, ಗಿರಿಯಪ್ಪ, ಯರಗುಂಟಮ್ಮ, ಭೂತರಾಯ, ಸಿದ್ದಯ್ಯ, ರಂಗೇಗೌಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.