ADVERTISEMENT

‘ಖಾಸಗಿ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳು ಬೇಡ’

ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಜಿಲ್ಲಾಧಿಕಾರಿ ತಾಕೀತು

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 7:35 IST
Last Updated 10 ಜನವರಿ 2017, 7:35 IST
ಕೆ.ಜಿ. ಜಗದೀಶ್‌
ಕೆ.ಜಿ. ಜಗದೀಶ್‌   
ಮಂಗಳೂರು: ಖಾಸಗಿ ಕಾರ್ಯಕ್ರಮ ಗಳಿಗೆ ಶಾಲಾ ಮಕ್ಕಳನ್ನು ಕರೆದೊಯ್ಯ ದಂತೆ ಜಿಲ್ಲೆಯ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಲು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್‌, ಶಿಕ್ಷಣ ಇಲಾಖೆಗೆ ಸೂಚನೆ ನೀಡಿದರು.
 
ಸೋಮವಾರ ನಗರದ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
 
ಇತ್ತೀಚೆಗೆ ಸುಳ್ಯ ತಾಲ್ಲೂಕಿನ ಸರ್ಕಾರಿ ಶಾಲೆಯೊಂದರ ಮಕ್ಕಳನ್ನು ಶಿಕ್ಷಕರು ಶಾಲಾ ಸಮೀಪದ ಗೃಹಪ್ರವೇಶಕ್ಕೆ ಕರೆದು ಕೊಂಡು ಹೋಗಿದ್ದಾಗ, ದಲಿತ ಮಕ್ಕ ಳನ್ನು ಮನೆಯ ಹೊರಗಡೆ ನಿಲ್ಲಿಸಿ, ಅಸ್ಪೃ ಶ್ಯತೆ ನಡೆಸಿದ ವಿಷಯ ಪ್ರಸ್ತಾಪಿ ಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಜಗದೀಶ್‌, ಇನ್ನು ಮುಂದೆ ಜಿಲ್ಲೆಯಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಮಕ್ಕಳನ್ನು ಶಾಲೆಯಿಂದ ಕರೆದೊಯ್ಯದಂತೆ ಶಾಲೆಗ ಳಿಗೆ ನಿರ್ದೇಶನ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು. 
 
ಈ ಪ್ರಕರಣದಲ್ಲಿ ಈಗಾಗಲೇ ಸಂಬಂಧಪಟ್ಟ ಶಿಕ್ಷಕರನ್ನು ಅಮಾನತು ಮಾಡಲಾಗಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ ಎಂದು ಡಿಡಿಪಿಐ ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದವರಿಗಾಗಿ ಕಾದಿರಿಸಿರುವ ಡಿಸಿ ಮನ್ನಾ ಭೂಮಿಯನ್ನು ಯಾವುದೇ ಒತ್ತುವರಿ ಆಗದಂತೆ, ಅದರ ರಕ್ಷಣೆಗೆ ನಿಗಾ ವಹಿಸಲು ಸೂಚಿಸಿದರು. 
 
ಡಿಸಿ ಮನ್ನಾ ಜಾಗ ಒತ್ತುವರಿ ಬಗ್ಗೆ ಹಲವಾರು ದೂರುಗಳು ಬರುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲ ತಹಶೀಲ್ದಾರರು, ತಮ್ಮ ವ್ಯಾಪ್ತಿಯ ಡಿಸಿ ಮನ್ನಾ ಜಾಗವನ್ನು ಸ್ಪಷ್ಟವಾಗಿ ಗುರುತಿಸಿ, ಅದರ ಮೇಲೆ ನಿಗಾ ಇಡುವಂತೆ ತಿಳಿಸಿದರು.
 
ಅಕ್ರಮ-ಸಕ್ರಮದಲ್ಲಿ ಮಂಜೂರಾತಿ ಪಡೆದ ಪರಿಶಿಷ್ಟ ಜಾತಿ, ಪಂಗಡದ ಸಮುದಾಯದವರಿಗೆ ಎಲ್ಲ ದಾಖಲಾತಿ ಹಾಗೂ ಪ್ರಕ್ರಿಯೆಗಳನ್ನು ತ್ವರಿತವಾಗಿ ನಡೆಸಿಕೊಡಬೇಕು. ಅವರಿಗೆ ಕಾದಿರಿಸ ಲಾದ ನಗರ ಸ್ಥಳೀಯ ಸಂಸ್ಥೆಗಳ ವಾಣಿಜ್ಯ ಸಂಕೀರ್ಣ ಕೊಠಡಿಗಳಲ್ಲಿ ಬೇರೆಯವರು ವ್ಯವಹಾರ ನಡೆಸುತ್ತಿದ್ದರೆ, ಕೂಡಲೇ ಅವರನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
 
ಮಂಗಳೂರಿನಲ್ಲಿ ಅಂಬೇಡ್ಕರ್ ಭವನದ ಶಂಕುಸ್ಥಾಪನೆ ಇದೇ 17ರಂದು ನೆರವೇರಲಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ. ಸಂತೋಷ್ ಕುಮಾರ್, ಮಾಹಿತಿ ನೀಡಿದರು.
 
ಜಿಲ್ಲಾ ಪಂಚಾಯಿತಿ ಉಪ ಕಾರ್ಯ ದರ್ಶಿ ಎನ್.ಆರ್, ಉಮೇಶ್, ಹೆಚ್ಚು ವರಿ ಜಿಲ್ಲಾಧಿಕಾರಿ ಕುಮಾರ್, ಡಿಸಿಪಿ ಶಾಂತರಾಜು, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ. ವೇದಮೂರ್ತಿ, ಮಂಗಳೂರು ಉಪವಿಭಾಗಾಧಿಕಾರಿ ಎ.ಸಿ. ರೇಣುಕಾ ಪ್ರಸಾದ್, ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಜೀರ್, ವಿವಿಧ ಇಲಾಖಾಧಿಕಾರಿಗಳು, ದಲಿತ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.