ADVERTISEMENT

ಬೆಳ್ತಂಗಡಿ ತಾಲ್ಲೂಕು: ದಾಖಲೆ ಹಾಲು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 8:53 IST
Last Updated 18 ಜುಲೈ 2017, 8:53 IST

ಬೆಳ್ತಂಗಡಿ: ಹಾಲಿನ ಉತ್ಪಾದನೆಯಲ್ಲಿ ಬೆಳ್ತಂಗಡಿ ತಾಲ್ಲೂಕು ಸಮೃದ್ಧವಾಗಿದ್ದು, ಉಳಿದ ತಾಲ್ಲೂಕುಗಳಿಗೆ ಮಾದರಿಯಾ ಗಿದೆ. ಸುಮಾರು 78 ಸಾವಿರ ಲೀಟರ್ ದಾಖಲೆಯ ಹಾಲು ಸಂಗ್ರಹವಾಗುತ್ತಿದೆ ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದರು.

ಬೆಳ್ತಂಗಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದ ಪಿನಾಕ ಸಭಾಗೃಹದಲ್ಲಿ ಸೋಮವಾರ ನಡೆದ ಬೆಳ್ತಂಗಡಿ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ನಂದಿನಿ ಎಂಬುದು ಗ್ರಾಹಕರ ಬ್ರಾಂಡ್ ಆಗಿ ಮಾರ್ಪಟ್ಟಿದ್ದು, ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಶೇ 10ರಷ್ಟು ಬೆಳವಣಿಗೆ ಕಂಡಿದೆ. ಒಕ್ಕೂಟವು ₹5,05,47,000 ನಿವ್ವಳ ಲಾಭ ಗಳಿಸಿದ್ದು, ಒಕ್ಕೂಟದ ವತಿಯಿಂದ ವಿವಿಧ ಯೋಜನೆಗಳ ಅಡಿಯಲ್ಲಿ ₹7.64ಕೋಟಿ ಪ್ರೋತ್ಸಾಹ ಧನ ನೀಡಲಾಗಿದೆ’ ಎಂದರು.

ADVERTISEMENT

‘ಜನಶ್ರೀ ಯೋಜನೆಯಡಿ ₹28.20 ಲಕ್ಷದ ಮರಣ ಸಾಂತ್ವನ ನಿಧಿ ಹಾಗೂ ₹85.47 ಲಕ್ಷ ವಿದ್ಯಾರ್ಥಿ ವೇತನ ನೀಡಲಾಗಿದೆ. ಸದಾಕಾಲ ಗುಣಮಟ್ಟ ಕಾಪಾಡಿರುವುದರಿಂದ ನಂದಿನಿ ಗ್ರಾಹಕರಿಗೆ ಮೆಚ್ಚುಗೆಯಾಗಿದೆ. ಕ್ಷೀರಭಾಗ್ಯಕ್ಕಾಗಿ ಹಾಲಿನ ಹುಡಿಯನ್ನು ಒದಗಿಸಲಾಗುತ್ತಿದೆ. ಇದರಿಂದ ನಷ್ಟವುಂಟಾಗುತ್ತಿದ್ದರೂ, ಅದನ್ನು ಸರಿದೂಗಿಸುವ ಪ್ರಯತ್ನ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಂದಿನಿ ಸುವಾಸಿತ ಹಾಲನ್ನು ಪೆಟ್‌ ಬಾಟಲಿಗಳಲ್ಲಿ ಮಾರುಕಟ್ಟೆಗೆ ತರುವ ಯೋಚನೆ ಇದೆ’ ಎಂದರು.

ಒಕ್ಕೂಟದ ನಿರ್ದೇಶಕರಾದ ವೀಣಾ ಆರ್.ರೈ, ನಾರಾಯಣ ಪ್ರಕಾಶ್, ಪದ್ಮನಾಭ ಅರ್ಕಜೆ, ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ವಿ.ಸತ್ಯನಾರಾಯಣ, ವ್ಯವಸ್ಥಾಪಕರಾದ ನಿತ್ಯಾನಂದ ಭಕ್ತ, ಶಿವಶಂಕರ ಸ್ವಾಮಿ ಇದ್ದರು. ಒಕ್ಕೂಟದ ನಿರ್ದೇಶಕ ನಿರಂಜನ ಬಾವಂತಬೆಟ್ಟು ಸ್ವಾಗತಿಸಿದರು. ಉಪ ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್  ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.