ADVERTISEMENT

ಸೇತುವೆ ಮುಳುಗಡೆ: ತಪ್ಪದ ನೆರೆಯ ಭೀತಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 10:05 IST
Last Updated 22 ಜುಲೈ 2017, 10:05 IST

ಉಪ್ಪಿನಂಗಡಿ: ಮಳೆಗಾಲ ಆರಂಭ ಆಗುವುದರ ಜತೆಗೆ ಉಪ್ಪಿನಂಗಡಿ- ಕಡಬ ರಸ್ತೆ ಸಂಚಾರದಲ್ಲಿ ಸಮಸ್ಯೆ ಆರಂಭ ಆಗಿದೆ. ಪ್ರತಿ ಮಳೆಗಾಲದಲ್ಲಿ ಕನಿಷ್ಠ 15 ಬಾರಿಯಾದರೂ ಇಲ್ಲಿನ ಸೇತುವೆ ಮುಳುಗಡೆ ಆಗುತ್ತದೆ. ಸಂಪರ್ಕ ಸೇತುವೆ ಕಡಿತವಾಗುತ್ತದೆ. ಆದರೆ, ಈ ಬಾರಿ ಅದು ಮುಕ್ತ ಆಗುತ್ತದೆ ಎಂದು ನಂಬಲಾಗಿತ್ತು. ಆದರೆ, ಈ ಮಳೆಗಾ ಲದಲ್ಲೂ ಮುಳುಗಡೆ ಆಗಿ ಸಮಸ್ಯೆ ಎದುರಿಸುವಂತಾಗುವುದು ತಪ್ಪುವುದಿಲ್ಲ ಎನ್ನುವಂತಾಗಿದೆ.

ಕಡಬ ಸಮೀಪದಲ್ಲಿ ಹೊಸಮಠ ಎಂಬಲ್ಲಿ ಗುಂಡ್ಯ ಹೊಳೆಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗುತ್ತಿರುವ ಸೇತುವೆ ಕಾಮಗಾರಿ ಮುಗಿದರೂ, ಸೇತುವೆ  ಸಂಪರ್ಕ ರಸ್ತೆ ನಿರ್ಮಾಣವಾಗದೆ ಬಾಕಿ ಉಳಿದಿದೆ. ಹೀಗಾಗಿ ಗುರುವಾರ ಸೇತುವೆ ಮುಳುಗಡೆಗೊಂಡು ಜನರು ಸಮಸ್ಯೆ ಎದುರಿಸುವಂತಾಯಿತು.

ಹೊಸ ಸೇತುವೆ ಕಾಮಗಾರಿ ಪೂರ್ಣ ಗೊಂಡರೂ ಸಂಪರ್ಕ ರಸ್ತೆ ನಿರ್ಮಾಣ ವಾಗದೆ ಈ ವರ್ಷವೂ ಹಳೆ ಸೇತುವೆ ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ನೆರೆಯ ಭೀತಿ ಹಾಗೂ ಅಪಾಯ ಇನ್ನೂ ಮುಂದುವರಿದಿದೆ. ಈ ಭಾಗದ ಜನತೆಯ ಬಹು ನಿರೀಕ್ಷೆಯ ಸೇತುವೆ ಕಾಮಗಾರಿ ಕಳೆದ ವರ್ಷವೇ ಒಂದು ಹಂತಕ್ಕೆ ಬಂದು ನಿಂತಿದ್ದರೂ, ಸೇತುವೆ ಎರಡೂ ತುದಿಗಳಲ್ಲಿ ನಿರ್ಮಾಣ ವಾಗಬೇಕಾದ ಸಂಪರ್ಕ ರಸ್ತೆ ಕಾಮಗಾರಿ ಅಪೂರ್ಣವಾಗಿರುವುದರಿಂದ ಈ ವರ್ಷ ಮಳೆಗಾಲಕ್ಕೆ ಮುನ್ನ ನೂತನ ಸೇತುವೆ ಲೋಕಾರ್ಪಣೆಯಾಗಿ ಉಪಯೋಗಕ್ಕೆ ಬರಬಹುದು ಎಂದು ನಂಬಿದ್ದ ಜನರ ಆಶಾಭಾವನೆ ಕಮರಿ ಹೋಗಿದೆ.

ADVERTISEMENT

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಡಿಯಲ್ಲಿ ರಾಜ್ಯ ಸರ್ಕಾರವು ₹ 7.5 ಕೋಟಿ ಮಂಜೂರಿ ಮಾಡಿತ್ತು. ಅನು ದಾನ ಮಂಜೂರಾಗಿ 2014 ರಲ್ಲಿ ಕಾಮ ಗಾರಿ ಆರಂಭಗೊಂಡ ಕೊನೆ ಹಂತಕ್ಕೆ ತಲುಪಿದೆ. ಹಳೆ ಸೇತುವೆಯಿಂದ ನಾಲ್ಕು ಮೀಟರ್ ಎತ್ತರದಲ್ಲಿ ಹೊಸ ಸೇತುವೆ ನಿರ್ಮಾಣವಾಗಿದೆ. 125 ಮೀಟರ್ ಉದ್ದ 12 ಮೀಟರ್ ಅಗಲದಲ್ಲಿ ಸೇತುವೆ ಆರು ಪಿಲ್ಲರ್‌ಗಳಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಂಡು ಎದ್ದು ನಿಂತಿದೆ.

ತಗಾದೆಯಿಂದ ವಿಳಂಬ: ನೂತನ ಸೇತುವೆ ದಕ್ಷಿಣ ಭಾಗದಲ್ಲಿ 7 ಸೆಂಟ್ಸ್ ಹಾಗೂ ಪೂರ್ವ ಭಾಗದಲ್ಲಿ 35 ಸೆಂಟ್ಸ್ ಜಾಗದ ಒತ್ತುವರಿ ಕಾರ್ಯ ಆಗಬೇಕಿತ್ತು. ದಕ್ಷಿಣ ಭಾಗದ ಒತ್ತುವರಿ ಕಾರ್ಯವು ಪೂರ್ಣಗೊಂಡು ಆ ಭಾಗದ ಕಾಮಗಾರಿ ಅಂತಿಮ ಹಂತದಲ್ಲಿದೆ. ಆದರೆ ಪೂರ್ವ ಭಾಗದ ಖಾಸಗಿ ಜಾಗದ ಒತ್ತುವರಿ ಕಾರ್ಯ ಇನ್ನೂ ಆಗಿಲ್ಲ.

ಇಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಂದ ತಗಾದೆ ಇದ್ದುದ ರಿಂದಾಗಿ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಇನ್ನು 10-15 ದಿನಗಳ ಒಳಗೆ ಈ ಜಾಗ ಒತ್ತುವರಿ ಕಾರ್ಯ ಮುಗಿಯಲಿದೆ. ಒಂದೂವರೆ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಆದರೆ, ಇದೀಗ ಮಳೆಗಾಲ ಪ್ರಾರಂಭವಾಗುವುದರಿಂದ ಕಾಮಗಾರಿ ಸುಸೂತ್ರವಾಗಿ ಸಾಗಲು ಸಾಧ್ಯವಿಲ್ಲ, ಮುಳುಗು ಸೇತುವೆಯ ಅಪಾಯದಿಂದ ದೂರವಾಗಲೂ ಜನ ಇನ್ನೂ ಕಾಯಬೇಕಾದ ಅನಿವಾರ್ಯತೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.