ADVERTISEMENT

ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಶಿರ್ವ ಮಹಿಳೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 6:24 IST
Last Updated 15 ಮಾರ್ಚ್ 2017, 6:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವ ದಲ್ಲಾಳಿಗಳಿಂದ ಮೋಸ ಹೋಗಿ ಉಡುಪಿ ಜಿಲ್ಲೆಯ ಶಿರ್ವದ ಮಹಿಳೆಯೊಬ್ಬರು ಸೌದಿ ಅರೇಬಿಯಾ ದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತ ಮಹಿಳೆಯ ಮೂವರು ಮಕ್ಕಳು ನೆರವಿಗಾಗಿ ಮೊರೆ ಇಡುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರೊಂದಿಗಿನ ಸಂವಾದ ಕಾರ್ಯಕ್ರ ಮಕ್ಕೆ ಬಂದ ಸಂತ್ರಸ್ತ ಮಹಿಳೆಯ ಹಿರಿಯ ಮಗಳು, ತಾಯಿಯನ್ನು ವಾಪಸು ಕರೆ ತರಲು ನೆರವಾಗುವಂತೆ ಮನವಿ ಸಲ್ಲಿಸಿ ದರು. ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಫೌಂಡೇಷನ್‌ ಅವರ ನೆರವಿಗೆ ನಿಂತಿದೆ.

ಮನೆಗೆಲಸಕ್ಕೆ ಇರಿಸಿಕೊಂಡಿರುವ ಕುಟುಂಬದಿಂದ ತಾಯಿಯ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದ ಆಕೆ, ತನ್ನ ಗುರುತನ್ನು ಬಹಿರಂಗ ಪಡಿಸದಂತೆ ಮಾಧ್ಯಮ ಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರು. ಸೌದಿ ಅರೇಬಿಯಾದ ಮಾಧ್ಯಮಗಳಲ್ಲಿ ಈ ವಿಚಾರ ಪ್ರಕಟವಾದರೆ ತಾಯಿಯ ಮೇಲೆ ದೌರ್ಜನ್ಯ ಹೆಚ್ಚಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ತೊಂದರೆಗೆ ಸಿಲುಕಿರುವ ಮಹಿಳೆಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾನೆ. ಅವರ ಗಂಡ 2013ರಲ್ಲಿ ಮೃತಪಟ್ಟಿದ್ದಾರೆ. ಗಂಡನ ಆದಾಯ ದಿಂದಲೇ ಕುಟುಂಬ ನಿರ್ವಹಣೆ ನಡೆ ಯುತ್ತಿತ್ತು. ಅವರ ಮರಣದ ನಂತರ ಸಂಕಷ್ಟಕ್ಕೆ ಸಿಲುಕಿದ ಮಹಿಳೆ, ಕತಾರ್‌ ನಲ್ಲಿ ಉದ್ಯೋಗ ಅವಕಾಶ ಇರುವ ವಿಷಯ ತಿಳಿದು ದಲ್ಲಾಳಿಗಳನ್ನು ಸಂಪರ್ಕಿಸಿದ್ದರು. ಮುಂಬೈನಲ್ಲಿ ಶಾಖೆ ಹೊಂದಿರುವ ಸೌದಿಯ ದಲ್ಲಾಳಿಯೊಬ್ಬ ಕತಾರ್‌ನಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ, ಹಣ ಪಡೆದುಕೊಂಡಿದ್ದ. 2016ರ ಜೂನ್‌ ಕೊನೆಯ ವಾರ ಮನೆಯಿಂದ ಹೊರಟ ಮಹಿಳೆ ಮುಂಬೈ ತಲುಪಿದ್ದರು. ಅಲ್ಲಿ ದಲ್ಲಾಳಿಯ ಮನೆ ಯಲ್ಲಿ ಒಂದು ವಾರ ಇದ್ದರು. ಕತಾರ್‌ನ ಬದಲು ಸೌದಿ ಅರೇಬಿಯಾ ವಿಮಾನಕ್ಕೆ ಅವರನ್ನು ಹತ್ತಿಸಲಾಗಿತ್ತು. ಅಲ್ಲಿನ ಆ್ಯಂಬೋ ನಗರಕ್ಕೆ ಕರೆದೊಯ್ದು ಸರ್ಕಾರಿ ನೌಕರನೊಬ್ಬನ ಮನೆಯಲ್ಲಿ ಕೆಲಸಕ್ಕೆ ಬಿಟ್ಟಿದ್ದರು.

‘ಕೆಲಸಕ್ಕೆ ಇರಿಸಿಕೊಂಡವರು ಅಮ್ಮನಿಗೆ ಹಲ್ಲೆ ನಡೆಸುತ್ತಿದ್ದಾರೆ. ಒಮ್ಮೆ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮನೆಗೆ ಕರೆದೊಯ್ದು ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಇದರಿಂದ ಅಮ್ಮನ ಎಡ ತಲೆ ಮತ್ತು ದವಡೆಗೆ ಗಾಯವಾಗಿತ್ತು. ದೂರವಾಣಿ ಕರೆ ಮಾಡುವುದಕ್ಕೂ ಅವಕಾಶ ನೀಡುತ್ತಿಲ್ಲ. ಫೆಬ್ರುವರಿ 26ರ ಬಳಿಕ ಅಮ್ಮನ ಕರೆಯೇ ಬಂದಿಲ್ಲ’ ಎಂದು ಸಂತ್ರಸ್ತ ಮಹಿಳೆಯ ಮಗಳು ಗದ್ಗದಿತರಾದರು.

ತಾಯಿಗೆ ನಿಯಮಿತವಾಗಿ ವೇತನ ನೀಡಲಾಗುತ್ತಿದೆ. ಅದನ್ನು ಇಲ್ಲಿಗೆ ಕಳು ಹಿಸುತ್ತಿದ್ದಾರೆ. ಆದರೆ, ಅಲ್ಲಿ ಅನುಭವಿ ಸುತ್ತಿರುವ ಹಿಂಸೆಯ ಬದುಕಿಗೆ ಪರಿಹಾರ ಬೇಕಿದೆ. ಕೆಲಸಕ್ಕೆ ಕರೆದುಕೊಂಡು ಹೋದ ದಲ್ಲಾಳಿಗಳು ಸಂಪರ್ಕದಲ್ಲಿ ಇಲ್ಲ. ಆ್ಯಂಬೋ ನಗರದಲ್ಲಿ ದುಡಿಯು ತ್ತಿರುವ ಪರಿಚಿತ ಚಾಲಕರೊಬ್ಬರ ದೂರವಾಣಿ ಸಂಖ್ಯೆ ಮಾತ್ರ ತಮ್ಮ ಬಳಿ ಇದೆ ಎಂದು ಹೇಳಿದರು.

ಲಭ್ಯವಿರುವ ಎಲ್ಲ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದ ಆರತಿ, ವಿದೇಶಾಂಗ ಸಚಿವಾಲಯದ ಅಧಿಕಾರಿ ಗಳನ್ನು ಸಂಪರ್ಕಿಸಿ ಮಹಿಳೆಯನ್ನು ವಾಪಸು ಕರೆತರಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.