ADVERTISEMENT

ಆಸ್ಪತ್ರೆ ಜೈವಿಕ ತ್ಯಾಜ್ಯ ನಿರ್ವಹಣೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 9:56 IST
Last Updated 25 ಅಕ್ಟೋಬರ್ 2016, 9:56 IST

ದಾವಣಗೆರೆ: ‘ಜಿಲ್ಲೆಯ ಆಸ್ಪತ್ರೆಗಳಲ್ಲಿ ಜೈವಿಕ ತ್ಯಾಜ್ಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಜೈವಿಕ ತ್ಯಾಜ್ಯ ಗಳನ್ನು ಏಜೆನ್ಸಿಯು ನಿತ್ಯವೂ ಸರಿಯಾಗಿ ಒಯ್ಯದಿದ್ದರೆ ಅವರ ಪರವಾನಗಿ ರದ್ದುಪಡಿಸಿ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆಸ್ಪತ್ರೆಗಳ ಜೈವಿಕ ತ್ಯಾಜ್ಯ ನಿರ್ವಹಣೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಮತ್ತು ಆರೋಗ್ಯ ಅಭಿಯಾನ ಸಭೆಯಲ್ಲಿ ಅವರು ಮಾತನಾಡಿದರು.

‘ಗುತ್ತಿಗೆಯ ಕರಾರಿನ ಪ್ರಕಾರ ಶುಶ್ರುತ ಏಜೆನ್ಸಿಯು ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಂದ ಪ್ರತಿ ದಿನವೂ ಜೈವಿಕ ತ್ಯಾಜ್ಯವನ್ನು ಒಯ್ದು, ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಇಲ್ಲದಿದ್ದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಏಜೆನ್ಸಿ ಬಗ್ಗೆ ವರದಿ ನೀಡಿ, ಬೇರೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಮಂಡಳಿಯ ಅಧಿಕಾರಿಗೆ ಸೂಚಿಸಿದರು.

ಇದಕ್ಕೂ ಮೊದಲು ಸಭೆಗೆ ಮಾಹಿತಿ ನೀಡಿದ ಮಂಡಳಿಯ ಪರಿಸರ ಅಧಿಕಾರಿ ಮಂಜುನಾಥ್‌, ‘ಜಿಲ್ಲೆಯಲ್ಲಿ 1,327 ಆರೋಗ್ಯ ಕೇಂದ್ರಗಳಲ್ಲಿ ಜೈವಿಕ ತ್ಯಾಜ್ಯ ಸಂಗ್ರಹವಾಗುತ್ತಿದೆ. ಹಲವು ಕೇಂದ್ರಗಳು ಪರವಾನಗಿಯನ್ನು ನವೀಕರಣ ಮಾಡಿ ಕೊಂಡಿಲ್ಲ. 11 ಬಗೆಯ ಜೈವಿಕ ತ್ಯಾಜ್ಯ ಗಳು ಬರುತ್ತಿದ್ದು, ಪ್ರತಿದಿನ ಎಷ್ಟು ಪ್ರಮಾಣದ ತ್ಯಾಜ್ಯ ನೀಡಲಾಗಿದೆ ಎಂಬ ವಾರ್ಷಿಕ ವರದಿಯನ್ನು ಮಂಡಳಿಗೆ ಸಲ್ಲಿಸಬೇಕು. ಆದರೆ, ಯಾರೂ ಮಾಹಿತಿ ನೀಡುತ್ತಿಲ್ಲ’ ಎಂದು ಹೇಳಿದರು.

‘ಎಷ್ಟು ಆರೋಗ್ಯ ಕೇಂದ್ರಗಳಿಂದ ತ್ಯಾಜ್ಯ ಒಯ್ಯಲಾಗುತ್ತಿದೆ?’ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದಾಗ, ‘ಈ ಹಿಂದೆ ಹರಿಹರದ ಸುಶಾಂತ ಏಜನ್ಸಿಯು ಜಿಲ್ಲೆ
ಯಲ್ಲಿ ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡದೇ ಇರುವುದರಿಂದ ಅವರ ಪರವಾನಗಿ ನವೀಕರಿಸಿಲ್ಲ. ಶಿವಮೊಗ್ಗದ ಸುಶ್ರೂತ ಏಜನ್ಸಿಗೆ ತ್ಯಾಜ್ಯ ಒಯ್ಯಲು ಅನುಮತಿ ನೀಡಲಾಗಿದೆ. ಹಾಸಿಗೆ ಇರುವ ಆಸ್ಪತ್ರೆಗಳಿಂದ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ’ ಎಂದು ಹೇಳಿದರು.

ಸುಶ್ರುತ ಏಜೆನ್ಸಿ ಪ್ರತಿನಿಧಿ ಪ್ರತಾಪ್‌ ಮಾತನಾಡಿ, ‘ಕೆಲವು ಆಸ್ಪತ್ರೆಯವರು ತ್ಯಾಜ್ಯವನ್ನು ನಮಗೆ ನೀಡದೇ ನಗರ ಸ್ಥಳೀಯ ಸಂಸ್ಥೆಯ ಕಸದ ವಾಹನಗಳಿಗೆ ನೀಡುತ್ತಿದ್ದಾರೆ. ಸಮರ್ಪಕವಾಗಿ ವಿಂಗಡಣೆ ಮಾಡುತ್ತಿಲ್ಲ’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಗಳೂರು ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮುರಳೀಧರ, ‘ಜಗಳೂರು ದೂರ ಇರುವುದರಿಂದ ವಾರಕ್ಕೆ ಒಮ್ಮೆ ಮಾತ್ರ ಬಂದು ತ್ಯಾಜ್ಯ ಸಂಗ್ರಹಿಸುತ್ತಿದ್ದಾರೆ. ನೋಂದಣಿ ಪುಸ್ತಕದಲ್ಲಿ ಇತರ ದಿನದ ಜಾಗದಲ್ಲೂ ಸಹಿ ಮಾಡಲಾಗುತ್ತಿದೆ’ ಎಂದರು.

‘ಆಸ್ಪತ್ರೆಯ ಪ್ರತಿ ಹಾಸಿಗೆಗೆ ದಿನಕ್ಕೆ₹ 8ರಂತೆ ತಿಂಗಳಿಗೆ ₹ 24,000 ಶುಲ್ಕ ಪಡೆಯುತ್ತಿದ್ದಾರೆ. ವಾರದಲ್ಲಿ ನಾಲ್ಕೈದು ದಿನ ಬರುತ್ತಿಲ್ಲ. ಹೀಗಾಗಿ ಎಷ್ಟು ದಿನ ಬರುತ್ತಾರೆಯೋ ಅಷ್ಟು ದಿನಕ್ಕೆ ಮಾತ್ರ ಹಣ ಪಾವತಿಸಲಾಗುವುದು. ವರ್ಷಕ್ಕೆ ಒಂದೇ ಬಾರಿ ಬಿಲ್‌ ನೀಡಿ ಅಷ್ಟೂ ಹಣ ಕೇಳಿದರೆ ಕೊಡಲು ಸಾಧ್ಯವಿಲ್ಲ’ ಎಂದು ಡಾ.ಮುರಳೀಧರ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಬಾ, ಚಿಗಟೇರಿ ಜಿಲ್ಲಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ನೀಲಾಂಬಿಕಾ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪಾರ್ವತಮ್ಮ, ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಯು.ಸಿದ್ದೇಶ್‌,

ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಮೀನಾಕ್ಷಿ, ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಸರೋಜಾಬಾಯಿ, ಕುಟುಂಬ ಕಲ್ಯಾಣಾಧಿಕಾರಿ ಡಾ.ನಂದಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.