ADVERTISEMENT

ಒಂದು ತಿಂಗಳಲ್ಲಿ ನಾಲ್ವರು ರೈತರ ಆತ್ಮಹತ್ಯೆ

ರೈತರ ಪಾಲಿಗೆ ಕರಾಳವಾಗಿ ಕಾಣುತ್ತಿರುವ 2017

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:14 IST
Last Updated 6 ಫೆಬ್ರುವರಿ 2017, 5:14 IST
ಕ್ಯಾಪ್ಶನ್‌: ಗಿಡದಲ್ಲಿಯೇ ಬಾಡಿ ಹೋಗಿರುವ ಟೊಮೆಟೊ (ಸಂಗ್ರಹ ಚಿತ್ರ).
ಕ್ಯಾಪ್ಶನ್‌: ಗಿಡದಲ್ಲಿಯೇ ಬಾಡಿ ಹೋಗಿರುವ ಟೊಮೆಟೊ (ಸಂಗ್ರಹ ಚಿತ್ರ).   

ಪಿ.ಎಚ್‌.ಬಾಲಕೃಷ್ಣ

ದಾವಣಗೆರೆ: ಎರಡು ವರ್ಷಗಳಿಂದ ಕಾಡುತ್ತಿರುವ ಬರ ಈ ವರ್ಷ ಇನ್ನಷ್ಟು ತೀವ್ರವಾಗಿದೆ. ರೈತರ ಪಾಲಿಗೆ 2017 ಕರಾಳವಾಗುವ ಲಕ್ಷಣ ಕಾಣಿಸುತ್ತಿದೆ. ಜನವರಿ ಒಂದೇ ತಿಂಗಳಲ್ಲಿ ಜಿಲ್ಲೆಯಲ್ಲಿ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಳೆಯ ಕೊರತೆಯಿಂದ ಕೃಷಿ ಮಾಡುವುದೇ ದುಸ್ತರವಾದ ಕಾಲದಲ್ಲಿ ಸಾವಿರಾರು ಅಡಿ ಬೋರು ಕೊರೆದು ಬೆಳೆ ಬೆಳೆದರೂ ಅದಕ್ಕೆ ಸರಿಯಾಗಿ ಬೆಲೆ ಸಿಗದೆ ರಸ್ತೆ ಮೇಲೆ ಸುರಿಯಬೇಕಾದ ಮಾರುಕಟ್ಟೆ ವ್ಯವಸ್ಥೆ ಒಂದು ಕಡೆ ಜುಗುಪ್ಸೆ ಮೂಡಿಸಿದೆ. ಕೃಷಿಗಾಗಿ ಮಾಡಿದ ಸಾಲದ ಬಡ್ಡಿ ಕೂಡ ಕಟ್ಟಲಾಗದೆ ಬ್ಯಾಂಕ್‌, ಖಾಸಗಿ ಹಣಕಾಸು ಸಂಸ್ಥೆಗಳ ಕಣ್ಣುತಪ್ಪಿಸಿ ಬದುಕಬೇಕಾದ ಸ್ಥಿತಿ ಇನ್ನೊಂದೆಡೆ ಸೃಷ್ಟಿಯಾಗಿದೆ.

‘ರೈತಪರ ಕಾಳಜಿ ಎನ್ನುವುದು ಬರೀ ಭಾಷಣಗಳಿಗೆ ಸೀಮಿತಗೊಂಡಿರು ವುದರಿಂದ ರೈತರಿಗೆ ಉಪಯೋಗವಾಗಿತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಸರ್ಕಾರಗಳು, ರೈತಸಂಘಗಳು ಮನವಿ ಮಾಡಿಕೊಳ್ಳುತ್ತಿದ್ದರೂ ರೈತರಿಗೆ ಬೇರೆ ದಾರಿ ಕಾಣಿಸುತ್ತಿಲ್ಲ. ಸರ್ಕಾರದ ನೀತಿಯೇ ನಿಧಾನವಿಷವಾಗಿ ಪರಿಣಮಿಸುತ್ತಿರುವುದೇ ಇದಕ್ಕೆ ಕಾರಣ’ ಎನ್ನುವುದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ಅವರ ಅಭಿಪ್ರಾಯ.

ಆತ್ಮಹತ್ಯೆ ಮಾಡಿಕೊಂಡವರು: ವರ್ಷದ ಎರಡನೇ ದಿನವೇ ರೈತ ಆತ್ಮಹತ್ಯೆ ಮಾಡಿಕೊಂಡ ಈ ವರ್ಷದ ಪ್ರಥಮ ಪ್ರಕರಣ ಚನ್ನಗಿರಿಯಲ್ಲಿ ದಾಖಲಾಗಿತ್ತು. ಚನ್ನಗಿರಿ ತಾಲ್ಲೂಕು ಕಂಚಿಗನಾಳ್‌ ಗ್ರಾಮದ ಚಂದ್ರನಾಯ್ಕ ಅವರು ರಾಷ್ಟ್ರೀಕೃತ ಬ್ಯಾಂಕ್‌ ಮತ್ತು ಸಹಕಾರ ಸಂಘಗಳಲ್ಲಿ ಸಾಲ ಮಾಡಿ 7 ಎಕರೆ ಜಮೀನಿನಲ್ಲಿ ಕೃಷಿ ಮಾಡಿದ್ದರು. ಸಾಲ ತೀರಿಸಲಾಗದೆ ಜೋಳಕ್ಕೆ ಹಾಕುವ ಮಾತ್ರೆಯನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಚನ್ನಗಿರಿ ತಾಲ್ಲೂಕು ಕಾರಿಗನೂರು ಗ್ರಾಮದ ಹಾಲೇಶಪ್ಪ ಅವರ ಮಗ ರಾಜಪ್ಪ  ಜ.18ರಂದು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 3 ಎಕರೆ ಜಮೀನು ಹೊಂದಿದ್ದ ರಾಜಪ್ಪ ಅವರು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ₹1.75 ಲಕ್ಷ ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ನೇಣು ಹಾಕಿಕೊಂಡಿದ್ದರು.

ಬೆಳಲಗೆರೆ ಗ್ರಾಮದ ನಾಗೇಂದ್ರಪ್ಪ ಕಳೆದ ಎರಡು ವರ್ಷಗಳಿಂದ ಬೆಳೆಯು ಸರಿಯಾಗಿ ಬಾರದೆ, 6 ವರ್ಷದ ಹಿಂದೆ ಮಾಡಿದ ಸಾಲ ತೀರಿಸಲಾಗದೆ ಜ.15ರಂದು ನೇಣಿಗೆ ಕೊರಳೊಡ್ಡಿದ್ದರು.

ಇದಲ್ಲದೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಗ್ರಾಮದ ಉಪ್ಪಾರ ಬೀದಿಯ ರೈತ ನಿಂಗಪ್ಪ ಎಂಬವರು ದಾವಣಗೆರೆ ಜಿಲ್ಲೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಜ.19ರಂದು ಚನ್ನಗಿರಿ ತಾಲ್ಲೂಕು ದೇಗರದಹಳ್ಳಿ ಬಸವಾಪುರ ಗ್ರಾಮದಲ್ಲಿ ಭದ್ರಾ ನಾಲೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಎರಡು ಹಣಕಾಸು ಸಂಸ್ಥೆಗಳಲ್ಲಿ ₹6 ಲಕ್ಷ  ಸಾಲ ಮಾಡಿದ್ದರು.

ಈ ನಾಲ್ಕು ಪ್ರಕರಣಗಳಲ್ಲದೆ ಇನ್ನೂ ಒಂದು ಪ್ರಕರಣ ಈ ವರ್ಷದ ಮೊದಲ ದಿನ ಮಾಯಕೊಂಡ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಆದರೆ ಘಟನೆ ನಡೆದಿರುವುದು 2016ರಲ್ಲಿ. ಎರಡೆರಡು ಬೋರ್‌ವೆಲ್‌ ಹಾಕಿದರೂ ನೀರು ಬಾರದೆ ಅಡಿಕೆ ತೋಟ ಒಣಗಿಹೋಗುತ್ತಿದೆ ಎಂದು ನೊಂದು ಮಾಯಕೊಂಡದ ರೇವಣ ಸಿದ್ದಪ್ಪರ ಮಗ ತಿಪ್ಪೇಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದರು.

*
ಸರ್ಕಾರದ ನೀತಿಗಳೇ ರೈತರನ್ನು ಸಾವಿನತ್ತ ಸಾಗಿಸುತ್ತಿವೆ. ಕೃಷಿಕರ ರಕ್ಷಣೆಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.
-ಹೊನ್ನೂರು ಮುನಿಯಪ್ಪ,
ರಾಜ್ಯ ರೈತ ಸಂಘದ ಕಾರ್ಯದರ್ಶಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.