ADVERTISEMENT

ಗೃಹ ನಿರ್ಮಾಣಕ್ಕೆ 310 ಎಕರೆ ಜಮೀನು ಮೀಸಲು: ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಎಂ.ಪಿ.ರವೀಂದ್ರ ಘೋಷಣೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 9:40 IST
Last Updated 9 ಸೆಪ್ಟೆಂಬರ್ 2017, 9:40 IST
ಹರಪನಹಳ್ಳಿಯಲ್ಲಿ ಈಚೆಗೆ ಶಾಸಕ ಎಂ.ಪಿ.ರವೀಂದ್ರ ಅವರು ವೃತ್ತಿಪರ ಶಿಕ್ಷಕರ ತರಬೇತಿ ಕೈಪಿಡಿಯನ್ನು ಬಿಡುಗಡೆ ಮಾಡಿದರು.
ಹರಪನಹಳ್ಳಿಯಲ್ಲಿ ಈಚೆಗೆ ಶಾಸಕ ಎಂ.ಪಿ.ರವೀಂದ್ರ ಅವರು ವೃತ್ತಿಪರ ಶಿಕ್ಷಕರ ತರಬೇತಿ ಕೈಪಿಡಿಯನ್ನು ಬಿಡುಗಡೆ ಮಾಡಿದರು.   

ಹರಪನಹಳ್ಳಿ: ಪಟ್ಟಣ ವ್ಯಾಪ್ತಿ ಪ್ರದೇಶವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಬಳಿ 310 ಎಕರೆ ಜಮೀನನ್ನು ಗೃಹ ಮಂಡಳಿಗೆ ಹಸ್ತಾಂತರಿಸಿ ಮನೆಗಳನ್ನು ನಿರ್ಮಿಸುವ ಯೋಜನೆ ರೂಪಿಸಿದೆ ಎಂದು ಶಾಸಕ ಎಂ.ಪಿ.ರವೀಂದ್ರ ಅವರು ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣ ಇಲಾಖೆ, ಕ್ಷೇತ್ರ ಸಮನ್ವಯ ಕಚೇರಿ, ಶಿಕ್ಷಕರ ಸಂಘಟನೆಗಳು ಸಂಯುಕ್ತವಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪುರಸಭೆಯನ್ನು ನಗರಸಭೆಯಾಗಿ ಪರಿವರ್ತಿಸಲು ಪ್ರಸ್ತಾವ ಸಲ್ಲಿಸಲಾಗಿದೆ. 100 ಎಕರೆ ಟೌನ್‌ಶಿಪ್‌ ನಿರ್ಮಾಣಕ್ಕೆ ಜಮೀನನ್ನು ಕಾಯ್ದಿರಿಸಲಾಗಿದ್ದು ಶಿಕ್ಷಕರ ಕಾಲೊನಿ ನಿರ್ಮಿಸಲು 10 ಎಕರೆ ಜಮೀನು ನೀಡುವುದಾಗಿ ಭರವಸೆ ನೀಡಿದರು.

ದಾನದಲ್ಲಿ ವಿದ್ಯಾದಾನ ಶ್ರೇಷ್ಠವಾಗಿದೆ. ಶಿಕ್ಷಕರು ನಿರ್ಲಕ್ಷ ವಹಿಸಿದೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಇಚ್ಛಾಶಕ್ತಿ ಇದ್ದಲ್ಲಿ ಪ್ರಗತಿ ಸಾಧಿಸಬಹುದು. ನೈಯಾಪೈಸೆ ಖರ್ಚಿಲ್ಲದೆ ಮನೆಬಾಗಿಲಿಗೆ ಶಿಕ್ಷಕರ ನೇಮಕಾಗಿ ಆದೇಶ ನೀಡಿದ ಗೋವಿಂದೆ ಗೌಡರನ್ನು ಸ್ಮರಿಸಬೇಕು ಎಂದು ತಿಳಿಸಿದರು. ಚಿಂತಕಿಯಾಗಿದ್ದ ಗೌರಿ ಲಂಕೇಶ್‌ ಅವರ ಹತ್ಯೆ ದುರದೃಷ್ಟಕರ ಇದನ್ನು ಖಂಡಿಸುತ್ತೇನೆ ಎಂದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ದುರಸ್ತಿಗೆ ಐದು ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಹರಿಹರ ಎಸ್‌ಜೆವಿಪಿ ಕಾಲೇಜಿನ ಪ್ರಾಧ್ಯಾಪಕ ಡಾ.ಎ.ಬಿ.ರಾಮಚಂದ್ರಪ್ಪ ಉಪನ್ಯಾಸ ನೀಡಿದರು. ಉಪ ವಿಭಾಗಾಧಿಕಾರಿಯಾಗಿ ಆಯ್ಕೆಯಾದ ಕುಂಚೂರು ಶಾಲೆ ಶಿಕ್ಷಕಿ ಅನ್ನಪೂರ್ಣಮ್ಮ ಮತ್ತು ತಾಲ್ಲೂಕು ಪಂಚಾಯ್ತಿ ನಿರ್ವಹಣಾಧಿಕಾರಿ ಆಯ್ಕೆಯಾದ ಮತ್ತಿಹಳ್ಳಿ ಶಾಲೆ ಶಿಕ್ಷಕ ರವಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣಮ್ಮ ಉಪಾಧ್ಯಕ್ಷ ಮಂಜ್ಯಾನಾಯ್ಕ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಡಾ.ಮಂಜುನಾಥ್‌ ಉತ್ತಂಗಿ, ಎಚ್‌.ಬಿ.ಪರುಶುರಾಮಪ್ಪ, ಸುವರ್ಣ ಆರುಂಡಿ, ಕೆ.ಆರ್‌.ಜಯಶೀಲ, ಕೆ.ಸತ್ಯನಾರಯಣ, ಅರುಣ್‌ಪೂಜಾರ್‌, ಜಾವೀದ್‌, ಕೋಡಿಹಳ್ಳಿ ಭೀಮಪ್ಪ, ಬೇಲೂರು ಅಂಜಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ರವಿ, ಎಸ್‌.ಬಸವರಾಜ್‌, ಎಂ.ಆಂಜನೇಯ, ಸಿದ್ದಲಿಂಗನಗೌಡ, ಎಲ್‌.ಯಶೋಧರ, ಎಚ್‌.ದೇವೇಂದ್ರಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.