ADVERTISEMENT

ಗೊಂದಲಗಳಿಲ್ಲ, ಬಿಜೆಪಿ ಆಡಳಿತ ನಿಶ್ಚಿತ

ಬಿಜೆಪಿ ಜಿಲ್ಲಾ 3ನೇ ಕಾರ್ಯಕಾರಿಣಿಯಲ್ಲಿ ಗೋ.ಮಧುಸೂದನ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:11 IST
Last Updated 6 ಫೆಬ್ರುವರಿ 2017, 5:11 IST

ದಾವಣಗೆರೆ: ‘ಬಿಜೆಪಿಯಲ್ಲಿದ್ದ ಎಲ್ಲಾ ಗೊಂದಲಗಳು ತಿಳಿಯಾಗಿದ್ದು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಬಿಜೆಪಿ ರಾಜ್ಯ ವಕ್ತಾರ, ಜಿಲ್ಲಾ ಉಸ್ತುವಾರಿ ವಹಿಸಿರುವ ಗೋ. ಮಧುಸೂದನ್ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಬಿಜೆಪಿ ಜಿಲ್ಲಾ 3ನೇ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳನ್ನು ಮಾನಸಿಕವಾಗಿ ಪಕ್ಷ ಗೆದ್ದಂತೆ. ಉಳಿದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತ್ತಷ್ಟು ಜವಾಬ್ದಾರಿಯಿಂದ ಕೆಲಸ ಮಾಡುವ ಮೂಲಕ ದಕ್ಷಿಣದಲ್ಲೂ ಬಿಜೆಪಿ ಪತಾಕೆ ಹಾರಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ದೇಶವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಬೇಕು. ಗೊಂದಲಗಳಿಗೆ ಕಿವಿಗೊಡಬೇಡಿ. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿರುವ ಬಜೆಟ್‌ ರಾಷ್ಟ್ರದ ಆರ್ಥಿಕ ಸದೃಢತೆ, ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ಸಂಕೇತ ವಾಗಿದೆ’ ಎಂದು ಬಣ್ಣಿಸಿದರು.

ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ‘ರಾಜ್ಯದಲ್ಲಿ ಬರಗಾಲ ಆವರಿಸಿದ್ದರೂ ರಾಜ್ಯ ಸರ್ಕಾರವು ಜನರ ಕಷ್ಟಕ್ಕೆ ಸ್ಪಂದಿಸದೇ ಕೇಂದ್ರದತ್ತ ಬೊಟ್ಟು ಮಾಡುತ್ತಾ ಕಾಲಹರಣ ಮಾಡುತ್ತಿದೆ’ ಎಂದು ದೂರಿದರು. ‘ಕೇಂದ್ರ ಸರ್ಕಾರ ನೀಡಿದ ಅನುದಾನ ಸಮರ್ಪಕವಾಗಿ ಬಳಸದೆ, ಕೇಂದ್ರದತ್ತ ಬೊಟ್ಟು ಮಾಡುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ರಮೇಶ್, ಮಾಜಿ ಅಧ್ಯಕ್ಷೆ ಸಹನಾ ರವಿ, ಎಚ್.ಎನ್. ಶಿವಕುಮಾರ್, ಎನ್.ರಾಜಶೇಖರ, ರಮೇಶ ನಾಯ್ಕ, ಪಾಲಿಕೆ ಸದಸ್ಯ ಡಿ.ಕೆ.ಕುಮಾರ, ಹೇಮಂತಕುಮಾರ, ಓಂಕಾರಪ್ಪ, ಸವಿತಾ ರವಿಕುಮಾರ, ಟಿಂಕರ್ ಮಂಜಣ್ಣ ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.

‘ಸಿದ್ದರಾಮಯ್ಯ ಸ್ಥಾನಕ್ಕೆ ಕುತ್ತು ಸಾಧ್ಯತೆ’
ದಾವಣಗೆರೆ:
‘ಕಾಂಗ್ರೆಸ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ವಾಗಿ ಆತ್ಮಹತ್ಯೆ ಮಾಡಿಕೊಂಡರೆ ನಾವೇನು ಮಾಡಲಿಕ್ಕಾಗುತ್ತೆ? ನಾವು ಎಂದಿಗೂ ಸಿದ್ದರಾಮಯ್ಯ ಅವರಿಗೆ ಚಾಕು ಹಾಕಲ್ಲ’ ಎಂದು ಬಿಜೆಪಿ ಜಿಲ್ಲಾ ಉಸ್ತುವಾರಿ ವಹಿಸಿರುವ ಗೋ. ಮಧುಸೂದನ್ ವ್ಯಂಗ್ಯವಾಡಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಚಾಕು ಹಾಕುವುದು ಎಂದರೆ ರಾಜ್ಯ ದಲ್ಲಿ ರಾಷ್ಟ್ರಪತಿ ಆಡಳಿತ ಹೇರು ವುದು. ಇನ್ನು ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಎಂದರೆ, ಸಿದ್ದರಾಮಯ್ಯನವರೇ ತಮ್ಮ ಸ್ಥಾನಕ್ಕೆ ಕುತ್ತು ತಂದುಕೊಳ್ಳು ವುದು ಎಂದು ಅರ್ಥ’ ಎಂದರು.

‘ಎಸ್‌.ಎಂ.ಕೃಷ್ಣ ಅವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಲ್ಲ ಎನ್ನುತ್ತಿದ್ದ ಕಾಂಗ್ರೆಸ್ಸಿಗರು ಈಗ ಹಗುರ ಟೀಕೆ ಮಾಡುತ್ತಿರು ವುದು ಸರಿಯಲ್ಲ. ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಕೃಷ್ಣ ಮುನ್ನುಡಿ ಬರೆದಿದ್ದಾರೆ’ ಎಂದರು.

ಸರ್ಕಾರ ಪತನ ಸಾಧ್ಯತೆ: ‘ರಾಜ್ಯ ಕಾಂಗ್ರೆಸ್ ಸರ್ಕಾರ ಯಾವ ಕ್ಷಣದಲ್ಲಾ ದರೂ ಬೀಳಬಹುದು. ಒಂದು ತಿಂಗಳು ನಡೆಯಬೇಕಾದ ಬಜೆಟ್ ಅಧಿವೇಶನವನ್ನು ಸಿದ್ದರಾಮಯ್ಯ ಕೇವಲ  6 ದಿನಕ್ಕೆ ಮೊಟಕುಗೊಳಿಸಿ ದ್ದಾರೆ. ಆಡಳಿತ ಸರ್ಕಾರದ ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಸಂಕಷ್ಟ ಬಂದರೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಅವರು ಕೈ ಹಿಡಿಯ ಬಹುದು ಎಂಬ ದೂರಾಲೋಚನೆ ಸಿದ್ದರಾಮಯ್ಯ ಅವರಿಗಿದೆ. ಇಂತಹ ಆಲೋಚನೆಗೆ ದೇವೇಗೌಡರು ಸೊಪ್ಪು ಹಾಕಲ್ಲ. ಹೀಗಾಗಿ ಯಾವುದೇ ಕ್ಷಣದಲ್ಲಾ ದರೂ ರಾಜ್ಯ ಸರ್ಕಾರ ಬೀಳಬಹುದು. ನಾವೂ ಚುನಾವಣೆಗೆ ಸಜ್ಜಾಗಿದ್ದೇವೆ.  ಬ್ರಿಗೇಡ್‌ ಗೊಂದಲವು ಮುಕ್ತಾಯ ವಾಗಿದೆ’ ಎಂದು  ಸ್ಪಷ್ಟಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.