ADVERTISEMENT

‘ಪದ್ಮಾವತಿ’ ಬಿಡುಗಡೆ ವಿರೋಧಿಸಿ ಇಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 7:13 IST
Last Updated 22 ನವೆಂಬರ್ 2017, 7:13 IST

ದಾವಣಗೆರೆ: ‘ಪದ್ಮಾವತಿ’ ಚಲನಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳನ್ನು ಕೈಬಿಡುವಂತೆ ಒತ್ತಾಯಿಸಿ ದಾವಣಗೆರೆ ರಜಪೂತ ಮಹಾಸಭಾ ನಗರದಲ್ಲಿ ನ.22ರಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.

ಮೆರವಣಿಗೆಯು ಬೆಳಿಗ್ಗೆ 10.30ಕ್ಕೆ ನಗರದ ಕಾಯಿಪೇಟೆ ವೃತ್ತದ ಮುಂಭಾಗದಿಂದ ಬೆಳ್ಳೂಡಿ ಗಲ್ಲಿ, ಎಂ.ಜಿ.ರಸ್ತೆ, ಮಂಡಿಪೇಟೆ, ಅಶೋಕ ಚಿತ್ರಮಂದಿರ ಹಿಂಭಾಗದಿಂದ ಮಹಾತ್ಮಗಾಂಧಿ ವೃತ್ತ, ಪಿ.ಬಿ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದೆ. ಅಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಮಹಾಸಭಾದ ಅಧ್ಯಕ್ಷ ಜೆ.ಈಶ್ವರ್‌ಸಿಂಗ್‌ ಕವಿತಾಳ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಣಿ ಪದ್ಮಾವತಿ ರಾಜಸ್ಥಾನದ ಚಿತ್ತೋಡಗಡದ ಮಹಾರಾಜ ರಾವಲ್ ರತನ್‌ಸಿಂಗ್ ಅವರ ಧರ್ಮಪತ್ನಿ. ಪತಿ ತೀರಿಕೊಂಡಾಗ ಈಕೆ ಶತ್ರುಗಳ ಎದುರು ಹೋರಾಡಿದ್ದ ವೀರ ರಾಣಿ. ಕ್ಷತ್ರಿಯ ರಜಪೂತ ಜನಾಂಗದ ಆತ್ಮಾಭಿಮಾನದ ಸಂಕೇತ ಈಕೆ. ಇಂತಹ ರಾಣಿಯನ್ನು ಬಾಲಿವುಡ್‌ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಕೆಟ್ಟದಾಗಿ ಚಿತ್ರಿಸಿರುವುದು ಇತಿಹಾಸಕ್ಕೆ ಮಾಡಿದ ಅಪಚಾರ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಚಿತ್ರ ಬಿಡುಗಡೆಗೆ ಆಕ್ಷೇಪ ಇಲ್ಲ. ಆದರೆ, ಸಮುದಾಯಕ್ಕೆ ಅಪಮಾನವಾಗುವಂತಹ ಭಾಗಗಳನ್ನು ತೆಗೆದು ಹಾಕಿ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿ ಗಳಾದ ಗಣಪತಿ ಸಿಂಗ್, ಸೇಲ್‌ ಸಿಂಗ್ ಠಾಕೂರ್, ಪ್ರತಾಪ್‌ ಸಿಂಗ್, ದಳಪತ್ ಸಿಂಗ್, ಉತ್ತಮ ಸಿಂಗ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.