ADVERTISEMENT

ಮುಷ್ಕರ: ಚಿಕಿತ್ಸೆ ಸಿಗದೆ ಆರು ಹಸುಗಳ ಸಾವು

​ಪ್ರಜಾವಾಣಿ ವಾರ್ತೆ
Published 21 ಮೇ 2017, 5:24 IST
Last Updated 21 ಮೇ 2017, 5:24 IST

ಹರಿಹರ: ಪಶು ವೈದ್ಯರ ಮುಷ್ಕರದಿಂದ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ನಾಲ್ಕು ದಿನಗಳಲ್ಲಿ ಆರು ಹಸುಗಳು ಮೃತಪಟ್ಟಿವೆ.ನಗರದ ಹೈನುಗಾರ ಜಾಕೀರ್ ಹುಸೇನ್ ಅವರ ಎಚ್.ಎಫ್ ತಳಿಯ ಹಸು ಜ್ವರದಿಂದ ಶನಿವಾರ ಅಸುನೀಗಿದೆ. ಇದರಿಂದ ಆಕ್ರೋಶಗೊಂಡ ಅವರು ಹಾಗೂ ರೈತ ಮುಖಂಡರು ಹಸುವಿನ ಕಳೇಬರವನ್ನು ತಾಲ್ಲೂಕು ಕಚೇರಿ ಎದುರು ಇರಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಾಕೀರ್ ಹುಸೇನ್, ‘ಕಳೆದ ತಿಂಗಳು ₹ 80 ಸಾವಿರ ಸಾಲ ಮಾಡಿ ಹಸುವನ್ನು ಖರೀದಿಸಿದ್ದೆ. 15 ದಿನಗಳ ಹಿಂದೆ ಕರುವಿಗೆ ಜನ್ಮ ನೀಡಿದ್ದು, ನಿತ್ಯವೂ ಸುಮಾರು 25 ಲೀ. ಹಾಲು ನೀಡುತ್ತಿತ್ತು. ಎರಡು ದಿನಗಳ ಹಿಂದೆ ಜ್ವರ ಕಾಣಿಸಿ ಕೊಂಡಿತ್ತು. ಪಶು ವೈದ್ಯ ಗುರುಶಾಂತಪ್ಪ ಅವರಿಗೆ ಕರೆ ಮಾಡಿದಾಗ ಅವರು ಮುಷ್ಕರದಿಂದಾಗಿ ಚಿಕಿತ್ಸೆ ನೀಡಲು ನಿರಾಕರಿಸಿದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜ್ವರದಿಂದ ಬಳಲುತ್ತಿದ್ದ ಹಸುವಿಗೆ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದರು. ಹಸುವನ್ನು ಉಳಿಸಿಕೊಳ್ಳಲು ಪಶು ಔಷಧಾಲಯಗಳಿಂದ ಮಾತ್ರೆ ಹಾಗೂ ಶಕ್ತಿವರ್ಧಕಗಳನ್ನು ನೀಡಿದ್ದೆವು. ಆದರೆ, ಅದು ಪ್ರಯೋಜನವಾಗಲಿಲ್ಲ. ಹಸು ಖರೀದಿಗೆ ಮಾಡಿದ ಸಾಲವನ್ನು ತೀರಿಸುವುದು ಹೇಗೆ ಎಂದು ಅರ್ಥವಾಗುತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಪಶುಪಾಲಕ ಜಗದೀಶ ಚೂರಿ ಮಾತನಾಡಿ, ‘ಬಿರು ಬೇಸಿಗೆಯ ಬಿಸಿಲಿನ ತಾಪಕ್ಕೆ ಎಚ್ಎಫ್ ತಳಿ ಹಸುಗಳಿಗೆ ಜ್ವರ ಸೇರಿದಂತೆ ಹಲವಾರು ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದಿದ್ದರೆ, ರಾಸುಗಳಿಗೆ ಪ್ರಾಣಾಪಾಯದ ಸಾಧ್ಯತೆ ಹೆಚ್ಚಾಗಿರುತ್ತದೆ. ನಗರದಲ್ಲಿ ನಾಲ್ಕು ದಿನಗಳಲ್ಲಿ ಗಾಂಧಿನಗರದ ಇಬ್ರಾಹಿಂ, ಹೊಸಕ್ಯಾಂಪಿನ ಕೃಷ್ಣಪ್ಪ, ಹನುಮಂತಪ್ಪ ಅವರಿಗೆ ಸೇರಿದ ಆರು ಹಸುಗಳು ಮೃತಪಟ್ಟಿವೆ’ ಎಂದು ತಿಳಿಸಿದರು.

ರೈತ ಮುಖಂಡ ಬೇವಿನಹಳ್ಳಿ ಮಹೇಶ್ ಮಾತನಾಡಿ, ‘ಬರಗಾಲದಲ್ಲಿ ರಾಸುಗಳ ಸಂರಕ್ಷಣೆ ಹಾಗೂ ಪಾಲನೆ ಸವಾಲಿನ ಕೆಲಸ. ಇಂಥ ಸಂದರ್ಭದಲ್ಲಿ ಪಶುವೈದ್ಯರ ಮುಷ್ಕರದಿಂದಾಗಿ ಹಸುಗಳ ಸಾವು ಪಶುಪಾಲಕರಿಗೆ ನಷ್ಟ ಉಂಟುಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ವೈದ್ಯರ ಮುಷ್ಕರ ಪೂರ್ಣಗೊಳ್ಳುವವರೆಗೆ ಸರ್ಕಾರವು ತಾತ್ಕಾಲಿಕ ಪಶು ವೈದ್ಯಾಧಿಕಾರಿಗಳನ್ನು ನೇಮಕ ಮಾಡಬೇಕು. ಮೃತ ಹಸುಗಳ ಮಾಲೀಕರಿಗೆ ಸೂಕ್ತ ಸಮಯದಲ್ಲಿ ಪರಿಹಾರ ಒದಗಿಸಬೇಕು ಎಂದು ಅವರು ಪ್ರತಿಭಟನಾಕಾರರು ಆಗ್ರಹಿಸಿದರು. ಬಳಿಕ ಗ್ರೇಡ್–2 ತಹಶೀಲ್ದಾರ್ ವೆಂಕಟಮ್ಮ ಅವರಿಗೆ ಮನವಿ ಸಲ್ಲಿಸಿದರು.

ಭರತ್ ಕೋಡಿಹಳ್ಳಿ, ರಘು, ಪೂಜಾರ್ ಹೇಮಣ್ಣ, ಪ್ರಶಾಂತ್, ಇಬ್ರಾಹಿಂ, ನಿಂಗಪ್ಪ, ಹನುಮಂತಪ್ಪ, ಸಿದ್ದೇಶ್, ವೀರಭದ್ರಪ್ಪ, ಮಹೇಶ್, ಪುಟ್ಟಪ್ಪ, ಬಾಬು ಹಾಗೂ ಇಕ್ಬಾಲ್ ಇದ್ದರು.ಚನ್ನಗಿರಿ ವೃಂದ ಮತ್ತು ನೇಮಕಾತಿ ನಿಯಮಗಳ ಕಾಯ್ದೆ ಜಾರಿಗೆ ಆಗ್ರಹಿಸಿ ನಾಲ್ಕು ದಿನಗಳಿಂದ ಪಶುವೈದ್ಯ ಆಸ್ಪತ್ರೆಗಳ ಸಿಬ್ಬಂದಿ ನಡೆಸುತ್ತಿರುವ ಮುಷ್ಕರದ ನೇರ ಪರಿಣಾಮ ಜಾನುವಾರು  ಮೇಲಾಗುತ್ತಿದೆ.

ಮುಷ್ಕರದಿಂದಾಗಿ ಸಾಕುಪ್ರಾಣಿಗಳಿಗೆ ಚಿಕಿತ್ಸೆ ದೊರೆಯದೇ ಮಾಲೀಕರು ಚಿಂತೆಗೀಡಾಗಿದ್ದಾರೆ. ಮುಷ್ಕರದ ಮಾಹಿತಿ ಇರದೇ ಜಾನುವಾರನ್ನು ಚಿಕಿತ್ಸೆಗೆ ಕರೆತಂದ ಹೈನುಗಾರರು ಪಶುಚಿಕಿತ್ಸಾ ಕೇಂದ್ರಗಳ ಮುಚ್ಚಿದ ಬಾಗಿಲು ಕಂಡು ವಾಪಸಾಗುತ್ತಿದ್ದಾರೆ.ರೈತರಾದ ನಿರಂಜನ್ ಹಾಗೂ ಕಿಟ್ಟಣ್ಣ ಮಾತನಾಡಿ, ‘ನಾವು ಸಾಕಿದ ಹಸುವೊಂದು ಮೂರು ದಿನಗಳಿಂದ ಅನಾರೋಗ್ಯದಿಂದ ನರಳುತ್ತಿದೆ. ಮುಷ್ಕರದಿಂದಾಗಿ ಅದಕ್ಕೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ.

ಹೈನುಗಾರಿಕೆಯಿಂದಲೇ ಜೀವನ ನಡೆಸುವ ನಮಗೆ ಬದುಕು ಸಾಗಿಸಲು ಕಷ್ಟವಾಗಿದೆ. ಕಟ್ಟಿಹಾಕಿದ ಮೂಕಪ್ರಾಣಿಗಳು ಕಣ್ಣ ಮುಂದೆಯೇ ಒದ್ದಾಡುವುದನ್ನು ನೋಡ
ಲಾಗುತ್ತಿಲ್ಲ. ತುರ್ತಾಗಿ ಚಿಕಿತ್ಸೆ ಕೊಡದೇ ಹೋದರೇ ಅದರ ಜೀವ ಹೋಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.‘ವೈದ್ಯರು ಮುಷ್ಕರ ಮಾಡಲಿ. ಆದರೆ, ಮಾನವೀಯ ದೃಷ್ಟಿಯಿಂದ ಪ್ರಾಣಿಗಳ ಚಿಕಿತ್ಸೆಗೆ ಮುಂದಾಗಬೇಕು. ಪಶು ಸಂಗೋಪನೆ ಮತ್ತು ಸೇವಾ ಇಲಾಖೆ ಸಚಿವರು ಮಧ್ಯ ಪ್ರವೇಶಿಸಬೇಕು’ ಎಂದು ಒತ್ತಾಯಿಸಿದರು.

* *

ರಾಜ್ಯ ಸಂಘದ ಸೂಚನೆಯಂತೆ ನಾವು ಮುಷ್ಕರದಲ್ಲಿ ಭಾಗಿಯಾಗಿದ್ದೇವೆ. ಚನ್ನಗಿರಿ ಪಶು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಒಬ್ಬರನ್ನು ನೇಮಿಸಲಾಗಿದೆ.
ಡಾ.ಚಿದಾನಂದ್, ಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.